Advertisement

ಜಗದ ಕಲ್ಯಾಣ ಬಸವ ಧರ್ಮದ ಧ್ಯೇಯ

04:52 PM Feb 13, 2020 | Naveen |

ಬೀದರ: ಬಸವಾದಿ ಶರಣರು ಜಾತಿ, ಮತ, ಭೇದ ಎನ್ನದೇ ಸಕಲ ಮಾನವ ಕುಲ ಕೋಟಿ ಒಂದೇ ಎಂದು ಭಾವಿಸಿ ಜಗದ ಕಲ್ಯಾಣವೇ ಬಸವ ಧರ್ಮದ ಮೂಲ ಧ್ಯೇಯವೆಂದು ಸಾರಿದ್ದಾರೆ ಎಂದು ಎಎಸ್‌ಪಿ ಡಾ| ಗೋಪಾಲ ಬ್ಯಾಕೋಡ್‌ ಹೇಳಿದರು.

Advertisement

ನಗರದ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಡೆದ 113ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂ| ಚನ್ನಬಸವ ಪಟ್ಟದ್ದೇವರು ಮತ್ತು ಡಾ| ಬಸವಲಿಂಗ ಪಟ್ಟದ್ದೇವರು ಈ ಭಾಗದಲ್ಲಿ ಮಕ್ಕಳಿಗೆ ಆಧ್ಯಾತ್ಮದ ಜತೆಗೆ ಜ್ಞಾನ ಮತ್ತು ಅನ್ನ ದಾಸೋಹ ಮಾಡುತ್ತಿರುವುದು ಸಮಾಜಕ್ಕೆ ನೀಡುವ ಶ್ರೇಷ್ಠ ಕೊಡುಗೆಯಾಗಿದೆ. ಮಕ್ಕಳು ಓದಿನಲ್ಲಿ ಒತ್ತಡಕ್ಕೆ ಒಳಗಾಗದೇ, ಏಕಾಗ್ರತೆ ಮತ್ತು ಸರಳ ಪರಿಶ್ರಮಜೀವಿಯಾಗಿ ಜೀವನದಲ್ಲಿ ಯಶಸ್ಸು ಗಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಾಹಿತಿ ಜಯಶ್ರೀ ಸುಕಾಲೆ ಅನುಭಾವಗಳಾಗಿ ಮಾತನಾಡಿ, ಇಂದು ಸಮಾಜದಲ್ಲಿ ಅನ್ಯಾಯ, ಅತ್ಯಾಚಾರ, ಸುಲಿಗೆ, ಕೊಲೆ, ಶೋಷಣೆ ಹೆಚ್ಚುತ್ತಿವೆ. ಇದಕ್ಕೆ ಯುವ ಸಮೂಹದಲ್ಲಿ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರದ ಕೊರತೆಯೇ ಕಾರಣ. ಶರಣರ ವಚನ ಅಧ್ಯಯನ ಮಾಡುವುದರಿಂದ ಒಳ್ಳೆಯ ಸಂಸ್ಕಾರ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರ ನಿರ್ವಹಿಸಲು ಸಾಧ್ಯವಿದೆ. ಶರಣರು ವೈಜ್ಞಾನಿಕ ಮತ್ತು ವೈಚಾರಿಕತೆ ನೆಲೆಗಟ್ಟಿನ ಮೇಲೆ ನೀಡಿರುವ ಇಷ್ಟಲಿಂಗವೆಂಬ ದೇವರ ಕುರುಹುವಿನ ಆರಾಧಕರಾಗಿ ಜೀವನ ಸುಂದರ ಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಗುರುಬಸವ ಪಟ್ಟದ್ದೇವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸತ್ಯ-ಶುದ್ಧ ಕಾಯಕ ಮಾಡಿ ಮೇರು ವ್ಯಕ್ತಿತ್ವ ಹೊಂದಿದ್ದರು. ಶರಣೆ ಧೂಪದ ದುಗ್ಗವೆ ಧೂಪ ಹಾಕುವ ಕಾಯಕ ಮಾಡಿ ಪ್ರಕೃತಿಯಲ್ಲಿ ಸುಗಂಧ ಬೀರುತ್ತಿದ್ದರೆ ಕಸ ಗೂಡಿಸುವ ಸತ್ಯಕ್ಕ ಕಸ ಗೂಡಿಸುವ ಕಾಯಕ, ಕಾಶ್ಮೀರದ ಅರಸನಾದ ಮೋಳಿಗೆ ಮಾರಯ್ಯನವರು ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಾಯಕ ಮಾಡಿ ಅಂತರಂಗ ಅನುಭಾವದ ಅರಿವು ಪಡೆದುಕೊಂಡು ಪರಮ ಸುಖ ಪಡೆದಿದ್ದಾರೆ ಎಂದರು.

Advertisement

ಇದೇ ಸಂದರ್ಭದಲ್ಲಿ ಕೆಪಿಟಿಸಿಎಲ್‌ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದ ಥಾಮಸ್‌ ಕಟ್ಟಿಮನಿ, ಪರಮೇಶ್ವರ ರಾಮಪೂರೆ, ರಾಜೇಂದ್ರ ಬಿರಾದರ, ವಿಠ್ಠಲ ರಾಠೊಡ, ಕವಿತಾ, ಮಹೇಶ ಘಾಳೆ, ರಾಜಕುಮಾರ ರಟಕಲೆ, ಶಂಕರ ಪಸರ್ಗಿ, ಅಶೋಕ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಪಂಚಾಕ್ಷರಿ ಪುಣ್ಯಶೆಟ್ಟಿ, ಸಂಗ್ರಾಮಪ್ಪಾ ಬಿರಾದರ, ಗುರುನಾಥ ಬಿರಾದರ, ನೀಲಕಂಠ ಬಿರಾದಾರ, ಡಾ| ರಘುಶಂಖ ಭಾತಂಬ್ರಾ, ಡಾ| ವೈಜಿನಾಥ ಬಿರಾದರ, ಕಾಶೀನಾಥ ಸೂರ್ಯವಂಶಿ, ಶಿವಕುಮಾರ ಭಾಲ್ಕೆ, ಸಿದ್ದು ಕೋರೆ ಇತರರು ಇದ್ದರು.

ನಿಲಯದ ಕಾರ್ಯದರ್ಶಿ ಪ್ರೊ| ಎಸ್‌.ಬಿ. ಬಿರಾದರ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಬಿರಾದರ ಸ್ವಾಗತಿಸಿದರು. ಪ್ರೊ| ಉಮಾಕಾಂತ ಮೀಸೆ ನಿರೂಪಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next