Advertisement

ಬಜೆಟ್‌ನಲ್ಲಿ ನಿರೀಕ್ಷೆಗೆ ಸಿಕ್ಕೀತೆ ಸ್ಪಂದನೆ?

11:28 AM Feb 28, 2020 | Naveen |

ಬೀದರ: ಸಂಪುಟ ವಿಸ್ತರಣೆ ಸವಾಲು ಗೆದ್ದು ಹೊರಬಂದಿರುವ ಸಿಎಂ ಯಡಿಯೂರಪ್ಪ ಅವರು ಬಜೆಟ್‌ ಮಂಡನೆಗೆ ಸಿದ್ಧರಾಗುತ್ತಿದ್ದಂತೆ ಇತ್ತ ಗಡಿ ಜಿಲ್ಲೆ ಬೀದರ ಜನರನಲ್ಲಿ ಹೊಸ ಭರವಸೆ, ನಿರೀಕ್ಷೆಗಳು ಗರಿಗೆದರಿವೆ. ಕಡತಗಳಲ್ಲಿ ಮಾಯವಾಗುತ್ತಿರುವ ಅಭಿವೃದ್ಧಿಪರ ಬೇಡಿಕೆಗಳಿಗೆ ಈ ಬಾರಿಯ ಆಯ-ವ್ಯಯದಲ್ಲಾದರೂ ಸ್ಪಂದನೆ ಸಿಗಬಹುದೆ ಎಂಬ ಆಶಾಭಾವ ಹೆಚ್ಚಿದೆ.

Advertisement

ಕಳೆದ ಬಜೆಟ್‌ನಲ್ಲಿ ವಿಮಾನ ನಿಲ್ದಾಣ, ನೂತನ ಕಾರಾಗೃಹ ಮತ್ತು ಗುರುದ್ವಾರಕ್ಕೆ ಅನುದಾನ ಸಿಕ್ಕಿತ್ತು. ಆದರೆ, ಅದರ ಹಿಂದಿನ ಎರಡ್ಮೂರು ಬಜೆಟ್‌ನಲ್ಲಿ ಬೀದರ ಜಿಲ್ಲೆಗೆ ಪ್ರಾಧ್ಯಾನ್ಯತೆ ಸಿಗದೆ ಕಡೆಗಣಿಸಲ್ಪಡುತ್ತಿದೆ. ಕಳೆದ ಕಾಂಗ್ರೆಸ್‌, ನಂತರದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವ ಯಲ್ಲಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿತ್ತು.

ಔದ್ಯೋಗಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾದಂತಹ ಯೋಜನೆಗಳು ಸಿಗಬಹುದೆಂಬ ಕನಸಿನ ಮೇಲೆ ಬಜೆಟ್‌ ತಣ್ಣೀರೆರಚಿತ್ತು. ಈಗ ಮೂರನೇ ಬಾರಿ ಸಿಎಂ ಆಗಿರುವ ಬಿಎಸ್‌ವೈ ತಮ್ಮ ಆಯ-ವ್ಯಯ ಮಂಡನೆಗೆ ಸಿದ್ಧರಾಗಿದ್ದು, ಈ ಬಾರಿಯ ಬಜೆಟ್‌ನಲ್ಲಾದರೂ ಬೀದರಗೆ ಬಂಪರ್‌ ಕೊಡುಗೆ ನೀಡಿ, ಸಿಹಿ ಉಣಿಸಲಿ ಎಂಬುದು ಜನರ ಆಶಯ.

ಈ ಹಿಂದೆ ಮಂಡನೆಯಾಗಿರುವ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳು ಇನ್ನೂ ಆದೇಶ ಪ್ರತಿಗಳಿಗಷ್ಟೇ ಸೀಮಿತಗೊಂಡಿವೆ. ಹೈನು ಕ್ರಾಂತಿ ಆಶಯದೊಂದಿಗೆ ಜಿಲ್ಲೆಗೆ ಸರ್ಕಾರ ಘೋಷಿಸಿದ್ದ “ಮಿಲ್ಕ್ ಶೆಡ್‌’ ಯೋಜನೆ ಹಳ್ಳ ಹಿಡಿದಿದೆ. ಮಹತ್ವಕಾಂಕ್ಷಿ ಯೋಜನೆ ಘೋಷಿಸಿ ನಾಲ್ಕೈದು ವರ್ಷ ಕಳೆದರೂ ಅನುಷ್ಠಾನಗೊಂಡಿಲ್ಲ. ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ ಹಾಲು ಉತ್ಪಾದನೆಯನ್ನು 3ರಿಂದ 8 ಲಕ್ಷ ಲೀಟರ್‌ ವರೆಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಇದಕ್ಕಾಗಿ ಆರ್‌ಕೆವಿವೈ ಅಡಿ 10 ಕೋಟಿ ರೂ. ಅನುದಾನ ಕಲ್ಪಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮತ್ತು ಸಂಸದ ಭಗವಂತ ಖೂಬಾ ನೇತೃತ್ವದ ಜಿಲ್ಲೆಯ ಪ್ರಮುಖರ ನಿಯೋಗ ಇತ್ತಿಚೆಗೆ ಸಿಎಂ ಬಿಎಸ್‌ವೈಗೆ ಅವರನ್ನು ಭೇಟಿ ಮಾಡಿದ್ದು, ಬೀದರ ಅಭಿವೃದ್ಧಿ ದೃಷ್ಟಿಯಿಂದ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ, ಅಗತ್ಯ ಅನುದಾನ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದೆ. ಇದಕ್ಕೆ ಬಜೆಟ್‌ನಲ್ಲಿ ಸ್ಪಂದನೆ ಸಿಗುತ್ತದೆ ಎಂಬುದು ಕಾದು ನೋಡಬೇಕಿದೆ.

Advertisement

ಶಿಕ್ಷಣ ವಲಯ: ಬೀದರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ.75ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಬೀದರನಲ್ಲಿ ಕೃಷಿ ಮಹಾವಿದ್ಯಾಲಯ ಇಲ್ಲದೇ ಇರುವುದರಿಂದ ಕೃಷಿಕರ ಮಕ್ಕಳಿಗೆ ಕೃಷಿಗೆ ಸಂಬಂ ಧಿಸಿದ ಶಿಕ್ಷಣ ಪಡೆಯಲು ಅನಾನುಕೂಲ ಆಗುತ್ತಿದೆ. ಹಾಗಾಗಿ ಬಹು ದಿನಗಳ ಬೇಡಿಕೆಯಾಗಿರುವ ಕೃಷಿ ಕಾಲೇಜು ಘೋಷಿಸಿ, ಕೃಷಿ ಶಿಕ್ಷಣಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗುವುದನ್ನು ತಪ್ಪಿಸಬೇಕಿದೆ. ಜಿಲ್ಲೆಗೆ ಜಿಲ್ಲೆಗೆ ಘೋಷಣೆ ಆಗಿರುವ “ಸೆಂಟ್ರಲ್‌ ಪ್ಲಾಸ್ಟಿಕ್‌ ಮತ್ತು ಇಂಜಿನಿಯರಿಂಗ್‌ ಟೆಕ್ನಲಾಜಿ ಕಾಲೇಜು ಪ್ರಾರಂಭಕ್ಕಾಗಿ ಕನಿಷ್ಟ 10 ಕೋಟಿ ಕಾಯ್ದಿರಿಸಬೇಕೆಂಬ ಬೇಡಿಕೆ ಇದೆ.

ಕೃಷಿ ವಲಯ: ಆರ್ಥಿಕ ಸಂಕಷ್ಟದಿಂದ ಬೀಗ ಬಿದ್ದಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನ ವಿಷಯವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದ್ದು, ಇದರಿಂದ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗಿದ್ದರೆ, ಕಬ್ಬು ಬೆಳೆಗಾರರು ಆತಂಕದಲ್ಲಿ ಸಿಲುಕಿದ್ದಾರೆ. ಸರ್ಕಾರದಿಂದಲೇ ರಾಜ್ಯ ಅತಿ ಹಳೆಯದಾದ ಕಾರ್ಖಾನೆಯ 100 ಕೋಟಿ ರೂ. ಷೇರು ಬಂಡವಾಳ ಪರಿವರ್ತಿಸಿ ಆಡಳಿತಾಧಿಕಾರಿ ಮುಖಾಂತರ ಕಾರ್ಖಾನೆಯನ್ನು ನವೀಕರಿಸಿ ಪುನಶ್ಚೇತನಗೊಳಿಸುವ ಅಗತ್ಯವಿದೆ.

ಬಚಾವತ್‌ ಆಯೋಗದಂತೆ ಜಿಲ್ಲೆಯ ಮಾಂಜ್ರಾ ನದಿಯಿಂದ ಕರ್ನಾಟಕದ ಪಾಲಿನ ನೀರು ಬಳಸಿಕೊಳ್ಳಲು ಕನಿಷ್ಟ ಮೂರು ಬ್ಯಾರೇಜುಗಳ ನಿರ್ಮಾಣಕ್ಕೆ ಅನುಮತಿ ನೀಡಿ, ಜನವಾಡ ಬ್ಯಾರೇಜ್‌ನಿಂದ ಬೀದರ ತಾಲೂಕಿನ ಹಳ್ಳಿಗಳಿಗೆ ಶಾಶ್ವತ ನೀರಿನ ಯೋಜನೆ ರೂಪಿಸಲು ಅನುದಾನ ಒದಗಿಸುವ ಅಗತ್ಯವಿದೆ.

ಇದರೊಟ್ಟಿಗೆ ಜಿಲ್ಲೆಯಲ್ಲಿ ಒಟ್ಟು 14 ಕೆರೆಗಳ ಆಧುನಿಕರಣಕ್ಕಾಗಿ
1,910 ಲಕ್ಷ ರೂ. ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಸದರಿ ಅನುದಾನವನ್ನು ಬಜೆಟ್‌ನಲ್ಲಿ ಕಾಯ್ದಿರಿಸಬೇಕಿದೆ. ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರಿಗೆ ವಿಶೇಷ ಅನುದಾನ ಒದಗಿಸುವುದು ಹಾಗೂ ಕಾರಂಜಾದಿಂದ ಔರಾದ ಪಟ್ಟಣ ಸೇರಿದಂತೆ ಮಾರ್ಗ ಮಧ್ಯದ 17 ಹಳ್ಳಿಗಳಿಗೆ ಪೈಪ್‌ಲೈನ್‌ ಮೂಲಕ ಶಾಶ್ವತ$ಸಂಯುಕ್ತ ಕುಡಿಯುವ ನೀರು ಸರಬರಾಜು ಯೋಜನೆಗೆ ಅಗತ್ಯ ಅನುದಾನ ಕಾಯ್ದಿರಿಸಬೇಕೆಂಬ ಬೇಡಿಕೆಗೆ ಸ್ಪಂದಿಸಬೇಕಿದೆ.

ಮೂಲ ಸೌಕರ್ಯ ವಲಯ: ಗೋರುಚ ನೇತೃತ್ವದ ತಜ್ಞರ ಸಮಿತಿ ಶಿಫಾರಸ್ಸಿನಂತೆ ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಘೋಷಿಸಿದ್ದು, ಸಧ್ಯ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇತ್ತಿಚೆಗೆ ಬೀದರ ಭೇಟಿ ವೇಳೆ ಸಿಎಂ ಬಿಎಸ್‌ವೈ ಭರವಸೆ ನೀಡಿದಂತೆ 100 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಬೇಕು. ಅಷ್ಟೇ ಅಲ್ಲ ಬಸವಕಲ್ಯಾಣದಲ್ಲಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ರಚಿಸಿರುವ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಇದುವರೆಗೆ ಸಿಕ್ಕಿದ್ದು ಅಲ್ಪ ಕೋಟಿ ರೂ.ಗಳು ಮಾತ್ರ. ಹಾಗಾಗಿ ಸ್ಮಾರಕಗಳ ಕೆಲಸ ಅರ್ಧಕ್ಕೆ ನಿಂತು ಹೋಗಿದೆ.

ಇದಕ್ಕೆ ಪೂರಕ ಅನುದಾನ ನೀಡಿ ಕಾಮಗಾರಿಗೆ ಚುರುಕು ಮೂಡಿಸಬೇಕಾಗಿದೆ. ಪ್ರವಾಸೋದ್ಯಮ ಬೆಳವಣಿಗೆ ಮೂಲಕ ಬೀದರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಇದೆ. ಆದರೆ, ಇದಕ್ಕೆ ಸರ್ಕಾರಗಳು ಹೆಚ್ಚು ಮುತುವರ್ಜಿ ವಹಿಸುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಒದಗಿಸಿ, ಗೆ„ಡ್ಸ್‌ಗಳ ನೇಮಕ ಮತ್ತು ಮೂಲಸೌಕರ್ಯ ಒದಗಿಸುವ ಕೆಲಸ ಆಬೇಕಿದೆ.

ಜಿಲ್ಲೆಯಲ್ಲಿ “ಕೃಷಿ ಉಪಕರಣಗಳ ಕಾರ್ಖಾನೆ ವಲಯ’ ಸ್ಥಾಪಿಸಿ ಸ್ಥಳೀಯ ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು. ಜಿಲ್ಲೆಯಲ್ಲಿ ಅನಿಲ ಆಧಾರಿತ ಪವರ್‌ ಪ್ರೊಜೆಕ್ಟ್ ಹಾಗೂ ಥರ್ಮಲ್‌ ಇಂಡಸ್ಟ್ರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲೇ ಅತೀ ಹೆಚ್ಚು ಸೋಯಾ ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದ್ದು, ಅದರ ಆಧಾರಿತ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ನಗರದಲ್ಲಿ ಉದ್ದೇಶಿತ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಬಜೆಟ್‌ನಲ್ಲಿ 75 ಕೋಟಿ ರೂ. ಅನುದಾನ ಕಲ್ಪಿಸಬೇಕೆಂಬ ಬೇಡಿಕೆ ಇದೆ.

ಪ್ರಸಕ್ತ ಬಜೆಟ್‌ನಲ್ಲಿ ಕೃಷಿ ಕಾಲೇಜು ಮಂಜೂರಾತಿ ಸೇರಿದಂತೆ ಕೃಷಿ ಮತ್ತು ಶಿಕ್ಷಣ ವಲಯದ ಹಲವು ಬೇಡಿಕೆಗಳುಳ್ಳ ಮನವಿಯನ್ನು ಈಗಾಗಲೇ ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿದೆ. ಹಿಂದುಳಿದ ಬೀದರ ಅಭಿವೃದ್ಧಿ ದೃಷ್ಟಿಯಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ, ಅಗತ್ಯ ಅನುದಾನ ಘೋಷಿಸಬೇಕು. ಬಜೆಟ್‌ನಲ್ಲಿ ಗಡಿ ಜಿಲ್ಲೆ ಬೀದರಗೆ ಪ್ರಾತಿನಿಧ್ಯ ಸಿಗಲಿದೆ.
ಪ್ರಭು ಚವ್ಹಾಣ,
ಉಸ್ತುವಾರಿ ಸಚಿವ

ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಬೀದರ ಜಿಲ್ಲೆಗೆ ಗೋದಾವರಿ ಮತ್ತು ಕೃಷ್ಣಾ ನದಿಯಿಂದ ಲಿಫ್ಟ್‌ ಮೂಲಕ ಕಾರಂಜಾ ಜಲಾಶಯಕ್ಕೆ ನೀರು ತುಂಬುವ ಯೋಜನೆ ಘೋಷಿಸಬೇಕು. ಬಹು ಬೆಳೆ ಪದ್ಧತಿ ಇರುವ ಬೀದರನಲ್ಲಿ ಕೃಷಿ ಕಾಲೇಜು ಮಂಜೂರು ಮತ್ತು ಬಿಎಸ್‌ಎಸ್‌ಕೆ ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯ ಅನುದಾನ ಕಲ್ಪಿಸಿ ರೈತರು, ಕಾರ್ಮಿಕರ ಹಿತ ಕಾಪಾಡಬೇಕು.
ಮಲ್ಲಿಕಾರ್ಜುನ ಸ್ವಾಮಿ
ರೈತ ಸಂಘದ ಜಿಲ್ಲಾಧ್ಯಕ್ಷ

ವಿಮಾನಯಾನ ಸೇರಿದಂತೆ ವಿವಿಧ ಸಂಪರ್ಕ ಸೌಲಭ್ಯಗಳನ್ನು ಹೊಂದಿರುವ ಬೀದರ ಪ್ರವಾಸಿ ಜಿಲ್ಲೆ ಆಗಿದೆ. ಹಾಗಾಗಿ ಬೀದರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ಆರ್ಥಿಕ ಸಂಕಷ್ಟದಿಂದ ಬಂದ್‌ ಆಗಿರುವ ಬಿಎಸ್‌ಎಸ್‌ಕೆ ಕಾರ್ಖಾನೆಯನ್ನು ಸಾರ್ವಜನಿಕ ಸಹಭಾಗಿತ್ವದಡಿ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು.
ಬಿ.ಜಿ. ಶೆಟಕಾರ, ಅಧ್ಯಕ್ಷರು, ಬೀದರ
ವಾಣಿಜ್ಯೋದ್ಯಮ ಸಂಸ್ಥೆ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next