Advertisement

ಜಯಂತಿಗಳ ಆಚರಣೆ ಸ್ವರೂಪ ಬದಲಾಗಲಿ

11:45 AM Feb 19, 2020 | Naveen |

ಬೀದರ: ಸರ್ಕಾರದಿಂದ ಆಚರಿಸಲಾಗುತ್ತಿರುವ ಜಯಂತಿಗಳ ಆಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಚಿಂತಕರು, ಸಾಹಿತಿಗಳು, ಸಂಘಟಿಕರು, ಶಿಕ್ಷಕರಿಂದ ಅಭಿಪ್ರಾಯ ಪಡೆಯುವ ಸಂಬಂಧ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಸರ್ಕಾರದಿಂದ ಆಚರಿಸುವ ಮಹನೀಯರ ಜಯಂತಿಗಳ ಅವಶ್ಯಕತೆ ಇದೆಯೇ?, ಸರ್ಕಾರದಿಂದ ಆಚರಿಸಬೇಕಾದ ಆಚರಣೆ ಸ್ವರೂಪ ಹೇಗಿರಬೇಕು?, ಮಹನೀಯರ ಜಯಂತಿಗಳನ್ನು ಆಚರಿಸುವಲ್ಲಿ ಅನುಸರಿಸಬೇಕಾದ ರಚನಾತ್ಮಕ ಅಂಶಗಳೇನು? ಎನ್ನುವ ಮುಖ್ಯ ಅಂಶಗಳ ಮೇಲೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಬಹುತೇಕರಿಂದ ಜಯಂತಿಗಳನ್ನು ರದ್ದುಗೊಳಿಸಬೇಕು. ಜಯಂತಿ ಹೆಸರಲ್ಲಿ ರಜೆ ನೀಡುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಜಯಂತಿಗಳು ಬಾಲದಂತೆ ಬೆಳೆದಿದ್ದು, ಆಚರಣೆಯಿಂದ ಸಮಯ ವ್ಯರ್ಥವಾಗುತ್ತಿದೆ. ಜನರ ಹಣ ಪೋಲಾಗುತ್ತಿದೆ. ಕೆಲವೇ ಜಯಂತಿಗಳಿಗೆ ರಜೆ ನೀಡಿ ಬೇರೆ ಬೇರೆ ಧರ್ಮೀಯರಲ್ಲಿ ತಾರತಮ್ಯ ಮಾಡಿದಂತಾಗುತ್ತಿದೆ. ಆಮಂತ್ರಣ ಪತ್ರಿಕೆಯಲ್ಲಿ ಇರುವ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ ಆ ಸಮುದಾಯದ ಜನರು ಘೋಷಣೆ ಕೂಗಿ ಜಯಂತಿಗೆ ಅವಮರ್ಯಾದೆ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಸಭೆಯಲ್ಲಿದ್ದ ಬಹುತೇಕರು ಜಯಂತಿ ಆಚರಣೆಯ ಈಗಿನ ಸ್ವರೂಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಯಂತಿಗಳನ್ನು ಆಚರಣೆ ಮಾಡೋಣ. ಆದರೆ, ಆ ಜಯಂತಿಗಳನ್ನು ಸರ್ಕಾರದಿಂದ ಆಚರಿಸುವುದನ್ನು ಕೈಬಿಡಬೇಕು. ಆಡಂಬರದ ಆಚರಣೆ ನಿಲ್ಲಬೇಕು. ಒಂದು ಜಾತಿಗೆ ಸೀಮಿತ ಎನ್ನುವಂತೆ ನಡೆಯುತ್ತಿರುವ ಈಗಿನ ಆಚರಣೆ ಸ್ವರೂಪ ಸಂಪೂರ್ಣ ಬದಲಾಗಬೇಕು. ಕಾರ್ಯಕ್ರಮ ಸರಳವಾಗಿ ಆಯೋಜಿಸಿ, ಚಿಂನತೆಗಳು, ವಿಚಾರಗೋಷ್ಠಿಗೆ ಹೆಚ್ಚಿನ ಮಹತ್ವ ಕೊಡಬೇಕು. ಶೈಕ್ಷಣಿಕ ಹಾಗೂ ಆರ್ಥಿಕ ಹೊರೆಯಾಗದಂತೆ ಆಚರಣೆ ನಡೆಯಬೇಕು. ಮಹಾತ್ಮರ ವಿಚಾರಧಾರೆ ಶಾಲಾ-ಕಾಲೇಜು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕೆನ್ನುವ ಸಲಹೆಗೂ ಕೆಲವರು ಸಹಮತ ಸೂಚಿಸಿದರು.

ಸರ್ಕಾರಕ್ಕೆ ವರದಿ ಸಲ್ಲಿಕೆ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಸಭೆಯಲ್ಲಿ ತಿಳಿಸಿದ ಎಲ್ಲರ ಅಭಿಪ್ರಾಯ, ಸಲಹೆ ಕ್ರೋಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ತಾಲೂಕು ಮಟ್ಟದಲ್ಲಿಯೂ ಸಭೆ ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಇನ್ನಷ್ಟು ಅಭಿಪ್ರಾಯ ಕ್ರೋಢೀಕರಣಕ್ಕೆ ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಶಾಲಾ-ಕಾಲೇಜುಗಳಲ್ಲಿ ಆಚರಣೆಯಾಗಲಿ: ಜಯಂತಿ ಆಚರಣೆ ಸಾರ್ವಜನಿಕವಾಗಿ ನಡೆಯುವುದು ನಿಲ್ಲಿಸಬೇಕು. ಜಯಂತಿ ಆಚರಣೆಯನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿ ಶಾಲಾ-ಕಾಲೇಜುಗಳಲ್ಲಿ ಮಾತ್ರ ಆಚರಣೆ ನಡೆಯುವಂತಾಗಬೇಕು. ಆಯಾ ಜಯಂತಿಯಂದು ಪ್ರಾರ್ಥನೆ ವೇಳೆ ಮಹಾತ್ಮರ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಶಾಲಾ ಬೋರ್ಡ್‌ನಲ್ಲಿ ಮಹಾತ್ಮರ ತತ್ವ-ಸಿದ್ಧಾಂತ ಬರೆದು ತಿಳಿವಳಿಕೆ ಮೂಡಿಸಬೇಕೆನ್ನುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಯಿತು.

ಪಠ್ಯದಲ್ಲಿ ಸೇರಿಸಿ: ಜಯಂತಿ ಆಚರಣೆ ಸ್ವರೂಪ ಬದಲಾಗಬೇಕು. ಮಹನೀಯರ ಜೀವನ ಚರಿತ್ರೆ ಪಠ್ಯದಲ್ಲಿ ಸೇರಿಸಿದರೆ ಶಾಲಾ ಹಂತದಿಂದಲೇ ಮಕ್ಕಳಿಗೆ ಮಹಾತ್ಮರ ವಿಚಾರಧಾರೆ ತಿಳಿಯಲು ಸಾಧ್ಯವಾಗುತ್ತದೆ. 6 ರಿಂದ 12ನೇ ತರಗತಿ ಮತ್ತು ಪದವಿ ಪಠ್ಯದಲ್ಲಿ ಮಹನೀಯರ ಜೀವನ ಮತ್ತು ಸಿದ್ಧಾಂತ ಸೇರಿಸಬೇಕು ಎಂದು ಉಪನ್ಯಾಸಕರು, ಶಿಕ್ಷಕರು, ಸಂಘಟಿಕರು ಸಲಹೆ ಮಾಡಿದರು. ಜಯಂತಿ ಆಚರಣೆ ವೇಳೆ ಮೆರವಣಿಗೆ ಬೇಡವೇ ಬೇಡ. ಆರೋಗ್ಯ ಕೆಡಿಸುವ ಧ್ವನಿವರ್ಧಕ ನಿಷೇಧಿಸಬೇಕು. ಜಯಂತಿಯಂದು ಕೇವಲ ವೇದಿಕೆ ಕಾರ್ಯಕ್ರಮ ನಡೆಸಿ ಮಹಾತ್ಮರ ಜೀವನ ಮತ್ತು ಸಾಧನೆ ಜನತೆಗೆ ತಿಳಿಸುವಂತಾಗಬೇಕು. ಜಯಂತಿ ದಿನದಂದು ಸರ್ಕಾರಿ ನೌಕರರಿಗೆ ರಜೆ ನೀಡದೇ ಎರಡು ಗಂಟೆ ಅಧಿಕ ಕೆಲಸ ಮಾಡುವಂತಾಗಬೇಕು ಎನ್ನುವ ಸಲಹೆ ಸಭೆಯಲ್ಲಿ ಕೇಳಿ ಬಂದಿತು.

ಸಭೆಯಲ್ಲಿ ಸಹಾಯಕ ಆಯುಕ್ತರಾದ ಅಕ್ಷಯ್‌ ಶ್ರೀಧರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್‌ ಸಿಂಧೆ, ಪ್ರಮುಖರಾದ ಶಿವಶರಣಪ್ಪ ವಾಲಿ, ದೇಶಾಂಶ ಹುಡಗಿ, ಚಂದ್ರಪ್ಪ ಹೆಬ್ಟಾಳಕರ, ಎಂ.ಜಿ. ದೇಶಪಾಂಡೆ, ಎಂ.ಜಿ. ಗಂಗನಪಳ್ಳಿ, ಪಂಡಿತ ಬಸವರಾಜ, ಅಶೋಕಕುಮಾರ ಕರಂಜಿ, ರಾಮಚಂದ್ರ ಗಣಾಪುರ, ಡಾ| ಜಯಶ್ರೀ ಪ್ರಭಾ, ಓಂಕಾರ ಸೂರ್ಯವಂಶಿ, ಡಾ| ಶ್ರೀಮಂತ ಪಾಟೀಲ, ಶಂಭುಲಿಂಗ ವಾಲದೊಡ್ಡಿ, ವಿಜಯಕುಮಾರ ಸೋನಾರೆ, ಜಗನ್ನಾಥ ಜಮಾದಾರ್‌, ಶ್ಯಾಮಣ್ಣ ಬಾವಗೆ, ಮಾರುತಿ ಮಾಸ್ಟರ್‌, ಪ್ರಭುಲಿಂಗ ಸ್ವಾಮಿ, ಸುನೀಲ ಭಾವಿಕಟ್ಟಿ, ಶ್ರೀಮಂತ ಸಪಾಟೆ, ಸಂಜೀವಕುಮಾರ
ಅತಿವಾಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next