Advertisement

ವಿಮಾನ ನಿಲ್ದಾಣಕ್ಕೆ ನಾಮಕರಣದ ಕೂಗು

12:13 PM Feb 17, 2020 | Naveen |

ಬೀದರ: ವಿಮಾನ ನಿಲ್ದಾಣ ಲೋಕಾರ್ಪಣೆಯೊಂದಿಗೆ ಬೀದರನಿಂದ ಲೋಹದ ಹಕ್ಕಿಗಳಲ್ಲಿ ಹಾರಾಡಬೇಕೆಂಬ ದಶಕಗಳ ಕನಸು ನನಸಾಗಿದೆ. ಆದರೆ, ಏರ್‌ ಟರ್ಮಿನಲ್‌ ಉದ್ಘಾಟನೆಗೊಂಡ ಬೆನ್ನಲ್ಲೇ ಇದೀಗ ನಿಲ್ದಾಣಕ್ಕೆ ಹೆಸರು ನಾಮಕರಣದ ಕೂಗು ಜೋರಾಗತೊಡಗಿದೆ.

Advertisement

ಹೌದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ವಾರ ಕಳೆದಿದ್ದು, ಆಯಾ ಸಮುದಾಯಗಳ ಸಂಘ-ಸಂಸ್ಥೆಗಳು ಆಯಾ ಮಹಾತ್ಮರ ಹೆಸರು ನಾಮಕರಣ ಮಾಡಬೇಕೆಂಬ ಒತ್ತಾಸೆ ಹೆಚ್ಚುತ್ತಿದೆ. ಪೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕಾ ಹೇಳಿಕೆಗಳ ಮೂಲಕ ಸರ್ಕಾರದ ಮುಂದೆ ಮನವಿಯನ್ನಿಡುತ್ತಿವೆ. ವಿಪಕ್ಷ ನಾಯಕ, ಉಸ್ತುವಾರಿ ಸಚಿವರುಗಳಿಗೆ ಆಗ್ರಹದ ಪತ್ರವೂ ಸಲ್ಲಿಸಿವೆ. ಹೈದ್ರಾಬಾದ್‌ ಜಿಎಂಆರ್‌ ಸಂಸ್ಥೆಯ ಆಕ್ಷೇಪದಿಂದಾಗಿ ಕಳೆದೊಂದು ದಶಕದಿಂದ ನಾಗರಿಕ ವಿಮಾನ ಹಾರಾಟಕ್ಕೆ ವಿಘ್ನಗಳು ಎದುರಾಗಿದ್ದವು.

ಈಗ ಅವೆಲ್ಲವೂಗಳ ನಿವಾರಣೆಯೊಂದಿಗೆ ಫೆ. 7ರಂದು ಉಡಾನ್‌ ಯೋಜನೆಯಡಿ ವಿಮಾನಯಾನಕ್ಕೆ ಚಾಲನೆ ಸಿಕ್ಕಿದ್ದು, ಟ್ರೂಜೆಟ್‌ ಸಂಸ್ಥೆಯು ಬೀದರ- ಬೆಂಗಳೂರು ನಡುವೆ ತನ್ನ ಸೇವೆ ಆರಂಭಿಸಿದೆ. ಜಿಲ್ಲೆಯ ಜನತೆ ವಿಮಾನ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ. “ಕನ್ನಡದ ಮಠ’ ಎನಿಸಿಕೊಂಡಿರುವ ಲಿಂ| ಡಾ| ಚನ್ನಬಸವ ಪಟ್ಟದ್ದೇವರ ಹೆಸರನ್ನು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಜಿಲ್ಲಾ ರಂಗ ಮಂದಿರಕ್ಕೆ ನಾಮಕರಣ ಮಾಡುವ ಮೂಲಕ ಸ್ಥಳೀಯ ಜನರ ಬಹು ದಿನಗಳ ಆಶಯ ಈಡೇರಿಸಿದೆ. ಈಗ ಬೀದರ ವಿಮಾನ ನಿಲ್ದಾಣಕ್ಕೆ ನಾಡಿಗೆ ಕೊಡುಗೆ ನೀಡಿರುವ ವಿವಿಧ ಮಹಾತ್ಮರ ಹೆಸರುಗಳು ಕೇಳಿ ಬರಲಾರಂಭಿಸಿವೆ.

ಬೊಮ್ಮಗೊಂಡೇಶ್ವರ ಹೆಸರಿಡಲು ಒತ್ತಾಯ
ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಬೊಮ್ಮಗೊಂಡೇಶ್ವರ ಯೂತ್‌ ಬ್ರಿಗೇಡ್‌ ಒತ್ತಾಯಿಸಿದೆ. ನಿಲ್ದಾಣ ಇರುವ ಚಿದ್ರಿ ಸ್ಥಳವು ಬೊಮ್ಮಗೊಂಡೇಶ್ವರರು ಜನ್ಮ ತಾಳಿದ, ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳ. ಬೀದರ ಕೋಟೆಯಲ್ಲಿ ನೀರಿನ ದಾಹ ತಣಿಸಲು ನಿರ್ಮಿಸಿದ್ದ ಕೆರೆಯಿಂದ ಹೆಸರುವಾಸಿ ಆಗಿರುವುದರಿಂದ ಅವರ ಹೆಸರು ಸೂಕ್ತ ಎನ್ನುತ್ತಿದೆ.

ಛತ್ರಪತಿ ಶಿವಾಜಿ ಹೆಸರಿಡಲು ಬೇಡಿಕೆ
ಶ್ರೀ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ ಎಂದು ನಾಮಕರಣಕ್ಕೆ ಛತ್ರಪತಿ ಶಿವಾಜಿ ಸೇನಾ ಬೇಡಿಕೆ ಇಟ್ಟಿದೆ. ಹಿಂದವಿ ಸ್ವರಾಜ್‌ ಸಂಸ್ಥಾಪಕ, ಅಪ್ರತಿಮ ದೇಶ ಭಕ್ತರಾಗಿದ್ದ ಶಿವಾಜಿ ಮಹಾರಾಜರ ಹೆಸರು ಸರಿಯಾಗಿರುತ್ತದೆ. ಜಿಲ್ಲೆಯಲ್ಲಿ ಮರಾಠಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಹಾರಾಜರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮನವಿ ಮಾಡಿದೆ.

Advertisement

ವಿಶ್ವಗುರು ಬಸವೇಶ್ವರ ಹೆಸರೂ ಮುಂಚೂಣಿಯಲ್ಲಿ
ಬಸವಕಲ್ಯಾಣ ನೆಲದ ಮೂಲಕ ವೈಚಾರಿಕ ಕ್ರಾಂತಿ ಮಾಡಿದ ಶ್ರೀ ಬಸವೇಶ್ವರರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂಬ ಬೇಡಿಕೆಯೂ ಇದೆ. ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಂಘಟನೆಗಳು ಒತ್ತಾಯಿಸಿವೆ. ಬಸವಣ್ಣ ಜತೆಗೆ ಅಂಬೇಡ್ಕರ್‌ ಹೆಸರೂ ಸಹ ಕೇಳಿ ಬರುತ್ತಿವೆ. ಇನ್ನೂ ಒಬ್ಬ ಮಹಾತ್ಮರ ಹೆಸರನ್ನಿಟ್ಟು ಸಮಾಜದಲ್ಲಿ ಗೊಂದಲ ಮೂಡಿಸದೇ ಬೀದರ ವಿಮಾನ ನಿಲ್ದಾಣವೇ ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.

ಬೀದರ ವಿಮಾನ ನಿಲ್ದಾಣಕ್ಕೆ ವಿವಿಧ ಮಹಾತ್ಮರ ಹೆಸರು ನಾಮಕರಣ ಕುರಿತು ಒತ್ತಾಸೆಗಳಿವೆ. ಆದರೆ, ನಿಲ್ದಾಣಕ್ಕೆ ಹೆಸರು ನಾಮಕರಣ ಕುರಿತು ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.
ಭಗವಂತ ಖೂಬಾ,
 ಸಂಸದ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next