Advertisement

ರೆಮ್‌ಡೆಸಿವಿಯರ್‌ ಆಯ್ತು, ಈಗ ಲಸಿಕೆ ಅಭಾವ!

09:10 PM May 09, 2021 | Team Udayavani |

„ಶಶಿಕಾಂತ ಬಂಬುಳಗೆ

Advertisement

ಬೀದರ: ಹೆಮ್ಮಾರಿ ಕೊರೊನಾರ್ಭಟದಿಂದ ನಲುಗಿ ಹೋಗಿರುವ ಗಡಿ ನಾಡು ಬೀದರನಲ್ಲಿ ಕೋವಿಡ್‌-19 ಲಸಿಕಾಕರಣದಲ್ಲಿ ಉತ್ತಮ ಪ್ರಗತಿ ಸಾ ಧಿಸುತ್ತಿದೆ. ಆದರೆ, ಸೋಂಕಿನ ವಿರುದ್ಧ ಜೀವ ರಕ್ಷಕ ಎನಿಸಿಕೊಂಡಿರುವ ಕೋವಿಡ್‌ ಲಸಿಕೆಗಳ ಅಭಾವ ತಲೆದೂರಿದ್ದು, ಜನರು ಪರದಾಡುವಂತಾಗಿದೆ.

ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೊರೊನಾ ಸೋಂಕಿನ ಅಬ್ಬರದಿಂದ ಬೀದರ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಆಕ್ಸಿಜನ್‌ ಮತ್ತು ರೆಮ್‌ ಡಿಸಿವಿಯರ್‌ ಚುಚ್ಚುಮದ್ದುಗಳ ಕೊರತೆ ನಡುವೆ ಈಗ ಕೋವಿಡ್‌ ಲಸಿಕೆ (ಕೋವಿಶಿಲ್ಡ್‌, ಕೋವ್ಯಾಕ್ಸಿನ್‌) ಅಭಾವ ಎದುರಾಗಿದೆ. ಮೇ 7ರವರೆಗೆ ಜಿಲ್ಲೆಯಲ್ಲಿ ಸದ್ಯ 5580 ಡೋಸ್‌ ಕೋವಿಶಿಲ್ಡ್‌ ಲಸಿಕೆ ಲಭ್ಯ ಇದ್ದು, ಈಗಾಗಲೇ ಲಸಿಕೆ ಪಡೆದಿರುವ ಜನರು ಎರಡನೇ ಡೋಸ್‌ಗಾಗಿ ಎದುರು ನೋಡುವಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 2.38 ಲಕ್ಷ ಜನರಿಗೆ ಲಸಿಕಾರಣ ಆಗಿದ್ದು, ಪ್ರಗತಿಯಲ್ಲಿ ಬೀದರ ರಾಜ್ಯದಲ್ಲಿ 9ನೇ ಸ್ಥಾನದಲ್ಲಿದೆ. ಆರೋಗ್ಯ ಸಿಬ್ಬಂದಿ, ಫ್ರಂಟ್‌ ಲೈನ್‌ ವರ್ಕರ್ ಮತ್ತು ಹಿರಿಯ ನಾಗರಿಕರಿಗೆ ಲಸಿಕಾಕರಣದಲ್ಲಿ ಉತ್ತಮ ಸಾಧನೆ ಆಗಿದೆ.

ಆದರೆ, ಕೊರೊನಾ ಲಸಿಕೆ ದಾಸ್ತಾನು ಕೊರತೆಯಿಂದಾಗಿ ಜಿಲ್ಲೆಗೆ ಪೂರೈಕೆ ಕಡಿಮೆ ಆಗಿರುವುದು ಲಸಿಕೆ ಅಲಭ್ಯತೆಗೆ ಕಾರಣವಾಗಿದೆ. ಹಾಗಾಗಿ ಸದ್ಯ ಎರಡನೇ ಡೋಸ್‌ಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಅದು ಕೇವಲ ಬ್ರಿಮ್ಸ್‌ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ. ಮೇ 1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 14,738 ಜನ ಆರೋಗ್ಯ ಸಿಬ್ಬಂದಿ (ವೈದ್ಯ, ನರ್ಸ್‌, ಡಿ ಗ್ರೂಪ್‌ ನೌಕರರು, ಫಾರ್ಮರ್ಸಿ ವಿದ್ಯಾರ್ಥಿಗಳು) ಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 12,368 ಮಂದಿ ಮೊದಲ ಡೋಸ್‌ ಮತ್ತು 6957 ಜನ ಎರಡನೇ ಡೋಸ್‌ ಪಡೆದಿದ್ದಾರೆ.

ಅದೇ ರೀತಿ 20,486 ಫ್ರಂಟ್‌ ಲೈನ್‌ ವರ್ಕರ್ಸ್‌ (ಪೊಲೀಸ್‌, ಅಗ್ನಿ ಶಾಮಕ, ಕಾರಾಗೃಹ, ಸ್ಥಳೀಯ ಸಂಸ್ಥೆ, ಆರ್‌ಪಿಎಫ್‌, ಕಂದಾಯ ಇಲಾಖೆ ನೌಕರರು ಮತ್ತು ಶಿಕ್ಷಕರು) ಗಳಲ್ಲಿ ಈವರೆಗೆ 18,398 ಜನ ಪ್ರಥಮ ಡೋಸ್‌ ಹಾಗೂ 5882 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಇನ್ನೂ 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 45 ರಿಂದ 60 ವರ್ಷದವರೆಗೆ 2,29,125 ಜನ ಮತ್ತು 60 ವರ್ಷ ಮೇಲ್ಪಟ್ಟುವರು 1,93,371 ಮಂದಿ ಇದ್ದಾರೆ.

Advertisement

ಮೇ 7ರವರೆಗೆ ಒಟ್ಟು ಹಿರಿಯ ನಾಗರಿಕರಲ್ಲಿ 1,59,126 ಜನ ಮೊದಲ ಡೋಸ್‌ ಮತ್ತು 35,517 ಮಂದಿ ಎರಡನೇ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೊನಾ ಲಸಿಕೆ ಕೊರತೆಯು ಕೇವಲ 18 ರಿಂದ 44 ವರ್ಷದವರ ಲಸಿಕೆ ಅಭಿಯಾನಕ್ಕೆ ಮಾತ್ರ ಹಿನ್ನಡೆ ಉಂಟು ಮಾಡಿಲ್ಲ. ಎರಡನೇ ಡೋಸ್‌ ಪಡೆಯಬೇಕಿದ್ದವರಿಗೂ ಕೂಡಾ ಸಮಸ್ಯೆ ತಂದೊಡ್ಡಿದೆ. ಸದ್ಯ ದಾಸ್ತಾನು ಲಭ್ಯವಿರುವ ಕಡೆಗಳಲ್ಲಿ ಹೊಸಬರಿಗೆ ಅಥವಾ ಮೊದಲ ಡೋಸ್‌ ಪಡೆಯುವರಿಗಿಂತಲೂ ಎರಡನೇ ಡೋಸ್‌ ಪಡೆಯುವವರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.

ಹಾಗಾಗಿ ಲಸಿಕಾ ಕೇಂದ್ರಕ್ಕೆ ತೆರಳಿದವರು ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಗೆ ಲಸಿಕೆ ಪೂರೈಸಿ 45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಎರಡನೇ ಡೋಸ್‌ ಲಸಿಕೆ ಲಭ್ಯವಾಗುವಂತೆ ಕ್ರಮ ವಹಿಸಬೇಕಿದೆ. ಇದರಿಂದ ಮೊದಲ ಡೋಸ್‌ ಪಡೆದವರಿಗೆ ವ್ಯರ್ಥವಾಗದಂತೆ ನೋಡಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next