ಬೀದರ: ಇಲ್ಲಿನ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರಿ ಆಸ್ಪತ್ರೆ, ಆರ್‌ಎಸ್‌ಎಸ್ ಸಂಚಾಲಿತ ಕೇಶವ ಕಾರ್ಯ ಸಂವರ್ಧನ ಸಮಿತಿ ಹಾಗೂ ಸರಸ್ವತಿ ವಿದ್ಯಾನಿಕೇತನ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ವಂದೇ ಮಾತರಂ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಇಲ್ಲಿ ದಿನದ 24 ಗಂಟೆಗಳ ಕಾಲ ದೊರಕಲಿದೆ. 4 ಜನ ತಜ್ಞ ವೈದ್ಯರು, ಕೋವಿಡ್ ಸೋಂಕಿನ ವಿಶೇಷ ತಜ್ಞರು, 12 ಜನ ನರ್ಸ್‌ಗಳು ಚಿಕಿತ್ಸೆ ನೀಡುವರು.
ಮಹಿಳಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಹಿಳಾ ವೈದ್ಯೆಯರನ್ನೇ ನಿಯೋಜನೆ ಮಾಡಲಾಗಿದೆ. ಬೆಳಗ್ಗೆ ಕಷಾಯ, ಉಪಾಹಾರ, ಮಧ್ಯಾಹ್ನ ಪೌಷ್ಠಿಕಯುಕ್ತ ಊಟ, ಸಂಜೆ 4 ಕ್ಕೆ ಲಘು ಉಪಾಹಾರ, ರಾತ್ರಿ 8ಕ್ಕೆ ಊಟ ಉಚಿತವಾಗಿ ದೊರೆಯಲಿದೆ. ಬಿಸ್ಲೆರಿಯ ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ ಇರಲಿದೆ. ಕೋವಿಡ್ ಚಿಕಿತ್ಸೆಗೆ ಬೇಕಿರುವ ಔಷಧದ ಕಿಟ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಕೇವಲ 1 ರೂ.ಗೆ ಈ ಚಿಕಿತ್ಸೆ ದೊರಕಲಿದೆ ಎಂದು ಡಾ| ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಆಕ್ಸಿಜನ್ ಉತ್ಪಾದಿಸುವ ಕಾನ್ಸನೆóಟೆಡ್ ಆಕ್ಸಿಜನ್ ಮಶೀನ್ ಇರುವುದರಿಂದ ಸದಾಕಾಲ ಇಲ್ಲಿ ಆಕ್ಸಿಜನ್ ಲಭ್ಯ ಇರಲಿದೆ. ವೈದ್ಯರ ಭೇಟಿ, ಸಮಾಲೋಚನೆ, 24 ಗಂಟೆಗಳ ಕಾಲ ನರ್ಸ್‌ಗಳ ಸೇವೆ, ಪೌಷ್ಠಿಕ ಆಹಾರ ಪೂರೈಕೆ, ನಿತ್ಯ ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸ, ಓದುವವರಿಗೆ ರಾಷ್ಟ್ರೀಯ ಸಾಹಿತ್ಯ ಲಭ್ಯವಿದೆ. ಡಿಜಿಟಲ್ ಥರ್ಮಾಮೀಟರ್, ಪಲ್ಸ್ ಆಕ್ಸಿಮೀಟರ್, ಆಂಬ್ಯುಲೆನ್ಸ್ (ಜಿಎನ್ ಫೌಂಡೇಶನ್ ಬೀದರ್) ಸೇವೆ ಈ ಕೋವಿಡ್ ಕೇರ್ ಸೆಂಟರ್‌ನ ವೈಶಿಷ್ಯಗಳಾಗಿವೆ ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ಇಲ್ಲಿಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯುವಂತಹ ಸಕಲ ವ್ಯವಸ್ಥೆಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ತೀವ್ರ ಅಸ್ವಸ್ಥ ರೋಗಿಗಳಿಗೆ ವೆಂಟಿಲೇಟರ್ ಅಗತ್ಯವಿದ್ದರೆ ನಗರದ ವಾಲಿ ಶ್ರೀ ಆಸ್ಪತ್ರೆ ಹಾಗೂ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ ಮೊದಲ ಕೋವಿಡ್ ಕೇರ್ ಸೆಂಟರ್ ಇದಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಆಶೀರ್ವಾದದಿಂದ ಈ ವ್ಯವಸ್ಥೆಯನ್ನು ನಗರದ, ಕ್ಷೇತ್ರದ, ಜಿಲ್ಲೆಯ ಜನರಿಗಾಗಿ ಮಾಡಲಾಗುತ್ತಿದೆ. ವಾಲಿ ಶ್ರೀ ಆಸ್ಪತ್ರೆಯ ಡಾ| ರಜನೀಶ್ ವಾಲಿ, ಝಿರಾ ವಾಟರ್‌ನ ಶಿವರಾಜ ಪಾಟೀಲ, ರಘುನಂದನಜೀ, ಶಿವಲಿಂಗ ಕುದರೆ, ನಾಗೇಶ ರೆಡ್ಡಿ, ಹಣಮಂತರಾವ ಪಾಟೀಲ, ಜೈ ಭೀಮ ಸೋಲಪುರೆ ಸೇರಿ ಹಲವರು ಇದಕ್ಕೆ ಕೈ ಜೋಡಿಸಿದ್ದಾರೆ.