ಭೋಪಾಲ: ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾಡಂಚಿನಲ್ಲಿ ಇರುವ ಕೃಷಿ ಭೂಮಿಗೆ ದಾಳಿ ಇಡುವುದು ಸಾಮಾನ್ಯ. ಅದನ್ನು ಪರಿಹರಿಸುವುದು ಹೇಗೆ ಎಂದು ಸರ್ಕಾರಗಳು, ರೈತರು ತಲೆಕೆಡಿಸಿಕೊಂಡಿರುವಂತೆಯೇ, ಮಧ್ಯಪ್ರದೇಶದಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿದೆ. ಆನೆಗಳನ್ನು ಹಿಮ್ಮೆಟ್ಟಿಸಲು ಜೇನು ಸೇನೆಯನ್ನು ಬಳಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಆನೆಗಳು ಸ್ವಭಾವತಃ ಜೇನುನೊಣಗಳಿಗೆ ಹೆದರುತ್ತವೆ ಮಾತ್ರವಲ್ಲದೆ ಅವು ಇರುವ ಪ್ರದೇಶಕ್ಕೆ ಪ್ರವೇಶಿಸಲು ಗಜ ಪಡೆ ಹಿಂಜರಿಯುತ್ತವೆ. ಈ ಸ್ವಭಾವದ ಉಪಯೋಗವನ್ನೇ ಮಧ್ಯಪ್ರದೇಶ ಸರ್ಕಾರ ಪಡೆದುಕೊಂಡಿದೆ. ಅದಕ್ಕಾಗಿ “ಹನಿ ಮಿಷನ್ ‘ ಎನ್ನುವ ಯೋಜನೆ ರೂಪಿಸಿದೆ.
ಮೊರೆನಾ ಜಿಲ್ಲೆಯಲ್ಲಿ ಯೋಜನೆಯ ಉದ್ಘಾಟನೆ ಭಾಗವಾಗಿ 10 ಫಲಾನುಭವಿಗಳಿಗೆ 100 ಜೇನು ಸಾಕಾಣಿಕೆ ಪೆಟ್ಟಿಗೆಗಳನ್ನು ನೀಡಿದೆ. ರಾಜ್ಯದ ಎಲ್ಲ ರೈತರಿಗೂ ತಮ್ಮ ತೋಟಗಳಲ್ಲಿ ಇತರೆ ಬೆಳೆಗಳ ನಡುವೆ ಜೇನು ಸಾಕಾಣಿಕೆ ಮಾಡುವಂತೆ ಸೂಚನೆ ನೀಡಿದೆ.
ಹಾಥಿ ಮಿತ್ರ ದಳ:
ಆನೆಗಳಿಂದಾಗುತ್ತಿರುವ ಬೆಳೆಹಾನಿಯನ್ನು ರಕ್ಷಿಸುವುದರ ಜತೆಗೆ ಅವುಗಳಿಗೆ ತೊಂದರೆ ನೀಡದಂತೆ ಹಿಮ್ಮೆಟ್ಟಿಸಲು ಅನುವಾಗುವಂತೆ “ಹಾಥಿ ಮಿತ್ರದಳ’ ವನ್ನು ಸರ್ಕಾರ ಸ್ಥಾಪಿಸಿದೆ.
ಉಪಟಳವೇಕೆ ?
ನೆರೆ ರಾಜ್ಯ ಛತ್ತೀಸ್‌ಗಢದೊಂದಿಗೆ ಗಮಧ್ಯಪ್ರದೇಶ ಗಡಿ ಹಂಚಿಕೊಂಡಿದೆ. ಗಡಿ ಭಾಗದಲ್ಲಿ ಬೆಳೆಯಲಾಗುವ ಮಹುವಾ ಹೂಗಳ ಬೆಳೆಗಳನ್ನು ಅರಸಿ,ಆನೆಗಳು ಮಧ್ಯಪ್ರದೇಶ ಪ್ರವೇಶಿಸುತ್ತಿವೆ. ಹೀಗಾಗಿ, ಅಲ್ಲಿ ಕಾಡಾನೆಗಳ ಸಮಸ್ಯೆಗಳ ಹೆಚ್ಚಾಗಿದೆ.