Advertisement

ಕೃಷಿ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ: ಆರು ಮಹಿಳೆಯರಿಗೆ ಗಾಯ; ಇಬ್ಬರು ಗಂಭೀರ

11:13 AM Dec 20, 2020 | sudhir |

ಕೋಟ: ಕೋಟದ ಕಾಸನಗುಂದುವಿನಲ್ಲಿ ಡಿ. 18ರ ಸಂಜೆ ಕೃಷಿ ಕೆಲಸದಲ್ಲಿ ನಿರತರಾಗಿದ್ದ ರೈತ ಮಹಿಳೆಯರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಪರಿಣಾಮ ಆರು ಮಂದಿ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಪ್ರೇಮಾ, ಬುಡ್ಡು, ಕಾವೇರಿ, ಪದ್ದು, ಸುಶೀಲಾ, ಲಚ್ಚಿ ಅವರು ಗಾಯಗೊಂಡವರು. ಅವರು ಶೇಂಗಾ ಗದ್ದೆಯಲ್ಲಿ ಕೆಲಸ ನಿರ್ವಹಿಸಿ ಮನೆಗೆ ತೆರಳಲು ಅಣಿಯಾಗುತ್ತಿದ್ದ ವೇಳೆಗೆ ಏಕಾಎಕಿ ಜೇನು ನೊಣಗಳು ದಾಳಿ ನಡೆಸಿ ಗಾಯಗೊಳಿಸಿದೆ. ತತ್‌ಕ್ಷಣ ಅವರನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಪ್ರೇಮಾ ಹಾಗೂ ಬುಡ್ಡು ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸ್ಥಳೀಯರಿಂದ ರಕ್ಷಣೆ
ಹೆಜ್ಜೇನು ದಾಳಿಗೆ ಒಳಗಾದವರು ದಾಳಿಯಿಂದ ತಪ್ಪಿಸಿಕೊಳ್ಳಲು ಗದ್ದೆಯ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಓಡಿ ಹೋಗಿದ್ದರು. ಆ ಮನೆಯಲ್ಲಿದ್ದ ಸಿಂಚನಾ ಅವರು ತತ್‌ಕ್ಷಣ ಪ್ರಥಮ ಚಿಕಿತ್ಸೆ ನೀಡಿ ಜೇನು ನೊಣಗಳನ್ನು ಹೊರತೆಗೆದು ಸ್ಥಳೀಯರಾದ ಚಂದ್ರ ಪೂಜಾರಿ ಕದ್ರಿಕಟ್ಟು, ಗೋವಿಂದ ಮರಕಾಲ, ಅಶೋಕ, ಆದಿತ್ಯ, ಶ್ರೀನಿಧಿ, ನೀಲು ಮತ್ತು ಗ್ರಾಮಸ್ಥರೊಂದಿಗೆ ಸೇರಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಇದರಿಂದಾಗಿ ಹೆಚ್ಚಿನ ಪ್ರಾಣಹಾನಿಯಾಗುವುದು ತಪ್ಪಿದೆ.

ಸಿಂಚನಾರಿಂದ ಸಕಾಲಿಕ ಕ್ರಮ
ಸಿಂಚನಾ 2ನೇ ವರ್ಷದ ಬಿ.ಎ. ವ್ಯಾಸಾಂಗ ಮಾಡುತ್ತಿದ್ದರು. ದಾಳಿಗೊಳಗಾದವರಲ್ಲಿ ಅವರ ತಾಯಿ ಲೀಲಾವತಿ ದೇವಾಡಿಗರೂ ಒಬ್ಬರಾಗಿದ್ದರು. ಸಿಂಚನಾ ಅವರು ತತ್‌ಕ್ಷಣ ತಮ್ಮ ಶ್ರೀನಿಧಿ ಜತೆಗೂಡಿ ಹೆಜ್ಜೆàನು ದಾಳಿಯಿಂದ ಎಲ್ಲರನ್ನು ರಕ್ಷಣೆ ಮಾಡಲು ಗೋಣಿಚೀಲವನ್ನು ನೀಡಿದ್ದಾರೆ. ದೊಡ್ಡ ಜೇನುಗಳು ಕಚ್ಚಿದ ಕೊಂಬುಗಳನ್ನು ಕಿತ್ತಿದ್ದಾರೆ. ಅನಂತರ 108 ಆ್ಯಂಬುಲೆನ್ಸ್‌ಗೆ ಸಿಂಚನಾ ಕರೆ ಮಾಡಿದ್ದಾರೆ. ತತ್‌ಕ್ಷಣ ಧಾವಿಸಿದ 108 ಸಕಾಲದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಸಿಂಚನಾ ಅವರ ಸಕಾಲಿಕ ಕ್ರಮದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next