ಬೆಂಗಳೂರು: ಬಿಬಿಎಂಪಿಯ ಕೋವಿಡ್ ವಾರ್ ರೂಂಗಳಲ್ಲಿ ನಡೆದಿದೆ ಎನ್ನಲಾದ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿ ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತು ಕಾಂಗ್ರೆಸ್‌ನ ಯುವ ಘಟಕದ ವೈ. ಬಿ. ಶ್ರೀವತ್ಸ ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾ| ಎ. ಎಸ್. ಓಕ್ ಹಾಗೂ ನ್ಯಾ| ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಸ್ವಲ್ಪ ಹೊತ್ತು ವಾದ ಆಲಿಸಿದ ನ್ಯಾಯಪೀಠ, ಕೆಲಸ ಕಳೆದುಕೊಂಡವರಿಗೆ ಅನ್ಯಾಯವಾಗಿದ್ದರೆ ಅವರು ಕೋರ್ಟ್‌ಗೆ ಬರಲಿ. ಈ ಪ್ರಕರಣದ ಅರ್ಜಿದಾರರು ರಾಜಕೀಯ ಪಕ್ಷದ ಮುಖಂಡರಾಗಿದ್ದು, ಅವರು ಸದುದ್ದೇಶ ಹೊಂದಿಲ್ಲ ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇದನ್ನು ರಾಜಕೀಯ ಪ್ರೇರಿತ ಅರ್ಜಿಯೆಂದು ಭಾವಿಸಬೇಕಾಗುತ್ತದೆ. ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆದಿದ್ದು, ಹೈಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿತು.
ಇದನ್ನೂ ಓದಿ :ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಕ್ರಮ: ಡಾ.ಸುಧಾಕರ್
ಒಂದೇ ಕೋಮಿನವರನ್ನು ಗುರಿಯಾಗಿಟ್ಟುಕೊಂಡು ಸಂಸದರು ಮಾಡಿರುವ ಆರೋಪದ ಮೇರೆಗೆ ಹಾಸಿಗೆ ಬ್ಲಾಕಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು 17 ವಾರ್ ರೂಮ್ ನೌಕರರ ಅಮಾನತು ಪಡಿಸಿರುವುದು ಕಾನೂನು ಬಾಹಿರ ಕ್ರಮ. ಹಾಗಾಗಿ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.