Advertisement
ಚರ್ಮೋದ್ಯೋಗ ಅಂದರೆ ಗೊತ್ತಾ?ಅದೇ, ಬ್ಯಾಗು, ಪರ್ಸು, ಶೂ, ಬೆಲ್ಟಾ ಸಂಗೀತ ಉಪಕರಣಗಳು ಒಂದೇ ಎರಡೇ. ಒಂದಕ್ಕಿಂತ ಒಂದು. ಈಗಂತೂ ಚರ್ಮಕ್ಕೆ ಸರಿಸಮಾನವಾದ ಮತ್ತೂಂದಷ್ಟು ಉತ್ಪನ್ನಗಳು ಬಂದಿವೆ. ಥೇಟ್ ನೋಡಲು ಚರ್ಮ ಉತ್ಪನ್ನಗಳ ತಲೆ ಮೇಲೆ ಹೊಡೆದಂತೆ ಇರುತ್ತವೆ. ಇಂಥ ಚರ್ಮೋತ್ಪನ್ನಗಳನ್ನು ತಯಾರು ಮಾಡಿ, ವಿದೇಶಕ್ಕೆ ರಫ್ತು ಮಾಡುವ ಪಟ್ಟಿಯಲ್ಲಿ ಭಾರತ ನಂ.4. ಹೀಗಾಗಿ, ನಮ್ಮ ದೇಶದಲ್ಲಿ ಚರ್ಮೋದ್ಯಮವೇ ತಲೆ ಎತ್ತಿದೆ. ಅದಕ್ಕೆ ತರಬೇತಿ, ಕೋರ್ಸ್‌ಗಳನ್ನು ಕಲಿಸಲು, ಪದವಿಗಳನ್ನು ವಿತರಿಸಲು ಒಂದಷ್ಟು ವಿವಿಗಳೂ ಹುಟ್ಟಿಕೊಂಡಿವೆ. ಒಟ್ಟಾರೆ ಇದನ್ನು ಲೆದರ್ ಟೆಕ್ನಾಲಜಿ ಅಂತ ಕರೆಯುತ್ತಾರೆ. ಇದರಲ್ಲಿ ಪದವಿ ಪಡೆಯುವುದು ಈಗ ಪ್ರತಿಷ್ಠೆಯ ವಿಷಯ. ಉದ್ಯೋಗ ಪಡೆಯಲು ಇರುವ ಹೊಸ ಹಾದಿ. ಭಾರತದಲ್ಲಿ ತಯಾರಾಗುವ ಚರ್ಮದ ಉತ್ಪನ್ನಗಳು ಅತ್ಯಂತ ಉತ್ಕೃಷ್ಟ ಎಂಬ ಹೆಗ್ಗಳಿಕೆ ಗಳಿಸಿವೆ. ಭಾರತೀಯ ಕುಶಲ ಕರ್ಮಿಗಳ ಕುಸುರಿ ಕಲೆಯ ನೈಪುಣ್ಯ ವಿಶ್ವದಾದ್ಯಂತ ಪ್ರಶಂಸೆಗೆ ಒಳಗಾಗಿದೆ.
ಒಂದು ಕಾಲದಲ್ಲಿ ಚರ್ಮದಿಂದ ತಯಾರಿಸುವ ಉತ್ಪನ್ನ ಅಂದರೆ, ಅದು ಸೀಮಿತ ವ್ಯಕ್ತಿಗಳು ಮಾಡುವ ಉದ್ಯೋಗವಾಗಿತ್ತು. ಅವರಲ್ಲದೆ ಬೇರೆ ಯಾರೂ ಕೂಡ ಈ ಕೆಲಸಕ್ಕೆ ಮುಂದಾಗುತ್ತಿರಲಿಲ್ಲ. ಈಗ ಹಾಗಿಲ್ಲ. ಚರ್ಮೋದ್ಯಮವೇ ಆಗಿದೆ. ಸಮಾಜ ನಾನಾ ಸ್ತರದ ಲಕ್ಷಾಂತರ ಮಂದಿ ಇದನ್ನು ಉದ್ಯೋಗವಾಗಿಸಿ ಕೊಂಡಿದ್ದಾರೆ. ಲೆದರ್ ಇಂಡಸ್ಟ್ರಿಯಲ್ಲಿ ಥರಹೇವಾರಿ ಪೋಸ್ಟ್‌ಗಳು, ಕಂಪೆನಿಗಳು ಉಂಟು. ಇಲ್ಲಿ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ನುರಿತ ಕೆಲಸಗಾರರಿಗೆ ಅತಿ ಹೆಚ್ಚಿನ ಬೇಡಿಕೆ ಇದೆ. ಚರ್ಮೋತ್ಪನ್ನಗಳನ್ನು ರಫ್ತು ಮಾಡುವ ನೂರಾರು ಕಂಪೆನಿಗಳು ನಮ್ಮಲ್ಲಿವೆ. ಈ ಕಂಪನಿಗಳಿಗೆ ಉತ್ಪಾದನಾ ತಂತ್ರಜ್ಞರು ( ಪ್ರೊಡಕ್ಷನ್ ಸ್ಪೆಷಲಿಸ್ಟ್), ವಿನ್ಯಾಸಗಾರರು, ಕ್ವಾಲಿಟಿ ಕಂಟ್ರೋಲರ್‌ಗಳು ಬೇಕು. ಮಾರ್ಕೆಟಿಂಗ್, ಉತ್ಪಾದನೆ ಮತ್ತು ರಫ್ತು ಹೆಚ್ಚಿದಂತೆಲ್ಲಾ ಇವರಿಗೆ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ. ಹೊಸ ಪರಿಭಾಷೆಯಲ್ಲಿ ಹೇಳಬೇಕೆಂದರೆ ಲೆದರ್ ಟೆಕ್ನಾಲಜಿಸ್ಟ್ ಅಂದರೆ ಚರ್ಮ ತಂತ್ರಜ್ಞರಿಗೆ ಡಿಮ್ಯಾಂಡ್ ಇದೆ.
Related Articles
ಕರ್ನಾಟಕ ಸರ್ಕಾರ, ಬೆಂಗಳೂರಿನಲ್ಲಿ ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಲೆದರ್ ಟೆಕ್ನಾಲಜಿಯನ್ನು ಆರಂಭಿಸಿದೆ. ಈ ಸಂಸ್ಥೆಯಲ್ಲಿ ಅಲ್ಪಾವಧಿ, ದೀರ್ಘಾವಧಿ ಕೋರ್ಸ್‌ಗಳಿವೆ. ಚರ್ಮದ ಉಡುಪುಗಳು, ಚರ್ಮದ ಪಾದರಕ್ಷೆ ವಿನ್ಯಾಸದ ತರಬೇತಿ ಕೊಡುತ್ತದೆ. ಇಲ್ಲಿ, 3 ವರ್ಷದ ಡಿಪ್ಲೊಮೊ ಕೂಡ ಮಾಡಬಹುದು. ಚರ್ಮದ ಜೊತೆ ಇತರೆ ವಸ್ತುಗಳ ಉತ್ಪಾದನೆಗೆ ಸಂಬಂಧಿಸಿದ ಎಡಿ, ಸಿಎಮ್ ತರಬೇತಿ ಕೂಡ ನೀಡುತ್ತಿದೆ.
Advertisement
ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾದವರು ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಆದರೆ, ಪದವಿ ಪೂರೈಸಿದವರು ಬಿ.ಟೆಕ್, ಎಂಟೆಕ್, ಪಿಎಚ್.ಡಿ ಪದವಿಯನ್ನು ಪಡೆದುಕೊಳ್ಳಬಹುದು. ಪ್ರತಿದಿನ ಕಾಲೇಜಿಗೆ ಹೋಗಲು ಆಗದವರು ಕೂಡ ಮನೆಯಲ್ಲಿ ಕುಳಿತೇ ಲೆದರ್ ಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಪಡೆಯಬಹುದು. ಥಾಪರ್ ವಿವಿ, ಜವಹರಲಾಲ್ ಟೆಕ್ನಿಕಲ್ ವಿವಿಯಲ್ಲಿ ಈ ದೂರಶಿಕ್ಷಣ ಪಡೆಯಲು ಅವಕಾಶವಿದೆ.
ಎಲ್ಲೆಲ್ಲಿ ಕೆಲಸ?ಆಕೈ ಲೆದರ್, ಬಟರ್‌ಫ್ಲೈ, ಕಾರ್‌ಗ್ರೂಪ್, ಲೆದರ್ ಕ್ರಾಫ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಲೆದರ್ ಹಂಟಿ, ಎಂ. ಬಿಲಾಲ್ ಹುಸೇನ್ – ಇವು ನಮ್ಮಲ್ಲಿ ಮಂಚೂಣಿಯಲ್ಲಿರುವ ಲೆದರ್ ಕಂಪನಿಗಳು. ದೇಶವಿದೇಶಗಳಲ್ಲಿ ಚರ್ಮಾಧಾರಿತ ಉತ್ಪನ್ನಗಳನ್ನು ಮಾರಾಟಮಾಡುತ್ತಿವೆ. ಇಲ್ಲೆಲ್ಲ ಲೆದರ್ ಪ್ರೊಡಕ್ಷನ್ ಎಕ್ಸಿಕ್ಯುಟೀವ್, ಲೆದರ್ ಕ್ವಾಲಿಟಿ ಅನಾಲಿಸ್ಟ್ , ಲೆದರ್ ಬೈಯಿಂಗ್ ಏಜೆಂಟ್ಸ್ , ಲೆದರ್ ಮಾರ್ಕೆಟಿಂಗ್ ಪ್ರೊಫೆಷನಲಿಸ್ಟ್, ಕ್ವಾಲಿಟಿ ಕಂಟ್ರೋಲರ್, ಲೆದರ್ ಪ್ರಾಡಕ್ಟ್ ರೀಸರ್ಚರ್… ಹೀಗೆ ಅನೇಕ ಉದ್ಯೋಗಗಳಿವೆ. ಗಳಿಸಿರುವ ಪದವಿಯ ಆಧಾರದ ಮೇಲೆ ಕೆಲಸ ಸಿಗುತ್ತದೆ. ಪದವಿಯ ಜೊತೆಗೆ ಕೌಶಲ್ಯ ಪೂರ್ಣ ಪರಿಣತಿ ಹೊಂದಿದ್ದರೆ ಅಂಥವರು ವಿದೇಶದಲ್ಲೂ ಉದ್ಯೋಗವಕಾಶ ಪಡೆಯಬಹುದು. ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಚರ್ಮಾಧಾರಿತ ಕಂಪೆನಿಗಳು ಹೆಚ್ಚಾಗಿವೆ. ಇಲ್ಲಿ ಚರ್ಮದ ಕುಸುರಿ ಕೆಲಸಗಾರರು, ಕ್ವಾಲಿಟಿ ಕಂಟ್ರೋಲರ್‌ಗಳಿಗೆ ಬೇಡಿಕೆ ಇದೆ. ಪದವಿ ಹಾಗೂ ಅನುಭವ ಇಲ್ಲಿನ ಮಾನದಂಡ. ಸುಶಿಕ್ಷಿತ, ಅನುಭವಿ ಕೆಲಸಗರರಿಗೆ ಎಲ್ಲ ಕಂಪೆನಿಗಳಲ್ಲಿ ಬೇಡಿಕೆ ಇದೆ. ಸುದೀರ್ಘ ಅನುಭವ ಇರುವವರು ತಮ್ಮದೇ ಆದ ಸ್ವಂತ ಗುಡಿ ಕೈಗಾರಿಕೆ ಕೂಡ ಪ್ರಾರಂಭಿಸಬಹುದು.
ಮಾಹಿತಿಗೆ- www.kitbangalore.in ಡಾ. ಡಿ.ಎಸ್. ಗೋಪಾಲ ಕೃಷ್ಣ