Advertisement

ಗುರುವಿನ ಗುಲಾಮನಾಗಬೇಕು!

06:57 PM Aug 29, 2019 | Team Udayavani |

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲುಗಳನ್ನು ಕೇಳಿದರೆ ಇಂದಿನ ಕಾಲದಲ್ಲಿ ಎಲ್ಲಿಯ ಭಕುತಿ ಎಲ್ಲಿಯ ಮುಕುತಿ ಎಂದೆನಿಸುವುದು ಸಹಜ. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ನಮ್ಮಲ್ಲಿ ಈ ವರ್ಷದ ಗುರುಪೂರ್ಣಿಮೆ ಹಲವಾರು ಸುಂದರ ಸುಸಂಸ್ಕೃತ ಸಂಭ್ರಮಾಚರಣೆಗಳಿಗೆ ಸಾಕ್ಷಿಯಾಯಿತು. ಅಂದಿನ ಕಾರ್ಯಕ್ರಮದಲ್ಲಿ ನನ್ನ ಮನ ಸೆಳೆದಿದ್ದು, ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಎತ್ತಿ ಹಿಡಿದ ರೀತಿ ! ವೇದಘೋಷ, ಪ್ರಾರ್ಥನೆ, ಪಾದಪೂಜೆ, ಗುರುವಂದನೆಗಳನ್ನೊಳಗೊಂಡ ಸುಂದರ ಕಾರ್ಯಕ್ರಮ ಎಲ್ಲರೂ ಕಣ್ಣರಳಿಸುವಂತಿತ್ತು.

Advertisement

ಗುರುಪೂರ್ಣಿಮೆ ಎಂಬ ವಿಚಾರವೂ ಬಹಳ ಸುಂದರವಾದದ್ದು. ಹುಣ್ಣಿಮೆ ಎಂದರೆ ಪರಿಪೂರ್ಣತೆ, ಪರಿಪಕ್ವತೆಯ ಸಂಕೇತ. ಮಾನವನ ಜ್ಞಾನದ ಪರಿಪೂರ್ಣತೆಗೆ ಗುರುವಿನ ಆಸರೆ, ಮಾರ್ಗದರ್ಶನ ಅತ್ಯಗತ್ಯ.

ನನ್ನನ್ನೂ ಸೇರಿದಂತೆ, ಇಂದಿನ ಪೀಳಿಗೆಗೆ ಇಂತಹ ಆಚರಣೆಗಳ ಮಹತ್ವವನ್ನು ಅರಿಯುವ, ಅದೆಲ್ಲೋ ಕಳೆದುಹೋಗುತ್ತಿರುವ ಈ ಭಾವನೆಗಳನ್ನೆಲ್ಲ ಮತ್ತೆ ಜಾಗರೂಕಗೊಳಿಸುವ ಆವಶ್ಯಕತೆ ಖಂಡಿತವಾಗಿಯೂ ಇದೆಯಲ್ಲವೇ?

ವಿಶ್ವದ ಅತ್ಯಂತ ಪುರಾತನ, ಸುಂದರ ಸಂಸ್ಕೃತಿ ಭಾರತೀಯ ಸಂಸ್ಕೃತಿ. ಇದಕ್ಕೂ ಹಿರಿದಾದದ್ದು, ಶ್ರೇಷ್ಠವಾದದ್ದು ಇನ್ನೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ಅಷ್ಟೇ ಅಚ್ಚುಕಟ್ಟಾಗಿ ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಜವಾಬ್ದಾರಿಯನ್ನೂ ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ನಿಲುವು ಎಲ್ಲರೂ ಮೆಚ್ಚುವಂತಹದೇ. ಪ್ರತಿನಿತ್ಯಇವುಗಳನ್ನೆಲ್ಲ ಮಾಡಲು ಸಾಧ್ಯವಿಲ್ಲವಾದರೂ ಇಂತಹ ಸುಸಂದರ್ಭಗಳ ಸದುಪಯೋಗದಿಂದ ನಮ್ಮ ನಡುವೆ ಭಾರತದ ಅಮೋಘ ಸಂಸ್ಕೃತಿಯನ್ನು ನಾವು-ನೀವೆಲ್ಲ ಜೀವಂತವಾಗಿ ಉಳಿಸಿಕೊಳ್ಳಬಹುದು. ಕೊನೆಯ ಪಕ್ಷ ನಮ್ಮ ಮುಂದಿನವರಿಗೆ ಅವುಗಳ ಪರಿಚಯವನ್ನಾದರೂ ಮಾಡಿಕೊಡಬಹುದು.

ಮೇಘನಾ ಭಟ್‌
ಪ್ರಥಮ ಬಿ. ಕಾಂ. ತ್ರಿಶಾ ವಿದ್ಯಾ ಕಾಲೇಜ್‌ ಆಫ್ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next