Advertisement
ಚೇಳನ್ನು ನೋಡಿದ್ದೀರಿ? ಇದರ ಕುಟುಕುವಿಕೆಯಿಂದಲೇ ಜಗತ್‌ಪ್ರಸಿದ್ಧಿ ಪಡೆದಿದೆ. ಅದರ ಬಾಲದ ತುದಿಯಲ್ಲಿರುವ ಮೊನಚು ಕೊಂಡಿಯಿಂದ ಚುಚ್ಚಿದರೆ ಪ್ರಾಣಾಂತಿಕವಲ್ಲದಿದ್ದರೂ ಸಾಕಷ್ಟು ನೋವು, ಉರಿ ಅನುಭವಿಸಬೇಕಾಗುತ್ತದೆ. ಧ್ರುವಪ್ರದೇಶದ ಹೊರತು ಮರುಭೂಮಿಯೂ ಸೇರಿದಂತೆ ಜಗತ್ತಿನ ಎಲ್ಲೆಡೆಯೂ ಚೇಳನ್ನು ಕಾಣಬಹುದು. ಬ್ರೆಜಿಲಿನ ಕಾಡುಗಳು, ಉತ್ತರ ಕೆರೊಲಿನಾ, ಹಿಮಾಲಯಗಳಲ್ಲಿ ಅದರ ಸಂತತಿ ಅಧಿಕವಾಗಿದೆ. ಸೊನ್ನೆ ಡಿಗ್ರಿ ಶೈತ್ಯಾಂಶದಲ್ಲಿ ಬದುಕಿರಬಲ್ಲ ಚೇಳು 68ರಿಂದ 99 ಡಿಗ್ರಿ ಫ್ಯಾರನ್‌ಹೀಟ್ ಉಷ್ಣಾಂಶದಲ್ಲೂ ಸಾಯುವುದಿಲ್ಲ. ಹೀಗಾಗಿಯೇ ನಮ್ಮ ಗುಲ್ಬರ್ಗ, ರಾಯಚೂರುಗಳ ಕಡೆ ಚೇಳುಗಳಿವೆ. ನೀವು, ಎರಡು ದಿನಗಳ ವರೆಗೆ ನೀರಿನಲ್ಲಿ ಮುಳುಗಿಸಿಟ್ಟರೂ ಈ ಚೇಳುಗಳು ಬದುಕಿರುತ್ತವೆ. ಅತ್ಯಂತ ಕಡಿಮೆ ಆಮ್ಲಜನಕ ಬಳಸುವ ಗುಣ ಇರುವುದರಿಂದ ಮಣ್ಣಿನೊಳಗೆಯೂ ಚೇಳು ಬದುಕಬಲ್ಲದು.
ಒಂದು ವರ್ಷ ಆಹಾರ ಇಲ್ಲದಿದ್ದರೂ ಚೇಳು ಹಸಿವಿನಿಂದ ಸಾಯುವುದೇ ಇಲ್ಲ. ಅದರ ಗರಿಷ್ಠ ಜೀವಿತ ಅವಧಿ 25ರಿಂದ 38 ವರ್ಷಗಳು. ಬಿಲಗಳು, ಕಲ್ಲುಗಳ ಸಂದಿ, ಸಡಿಲಾದ ಮಣ್ಣು, ಹುಲ್ಲು ಇರುವ ಜಾಗ ಚೇಳಿನ ಪ್ರಿಯವಾದ ವಾಸಸ್ಥಳ. ರಾತ್ರಿ ಸಂಚಾರ ಅದಕ್ಕೆ ಇಷ್ಟ. ಚೇಳಿಗೆ ಪ್ರತಿದೀಪಕ ಶಕ್ತಿಯಿರುವುದರಿಂದ ರಾತ್ರಿ ಅದರ ಮೇಲೆ ಬೆಳಕು ಹರಿಸಿದರೆ ಕಪ್ಪಗಿರುವ ಚೇಳಿನ ಬಣ್ಣ ಬದಲಾಗುತ್ತದೆ. 6 ಸೆಂ.ಮೀ.ಯಿಂದ ಆರಂಭಿಸಿ 20 ಸೆ. ಮೀ.ವರೆಗೆ ಗಾತ್ರವಿರುವ ಚೇಳುಗಳಲ್ಲಿ ಹಲವು ಜಾತಿಗಳಿವೆ. ಪ್ರಮುಖವಾಗಿ 13 ಕುಟುಂಬಗಳನ್ನು ಗುರುತಿಸಲಾಗಿದೆ. ಸಮುದ್ರ ಚೇಳು 8 ಅಡಿ ಉದ್ದವಿರುತ್ತದೆ. ಬಾಲದಲ್ಲಿ ವಿಷ
ಹುಳಗಳು, ಕೀಟಗಳು, ಇಲಿ-ಹೆಗ್ಗಣಗಳು, ಹಕ್ಕಿಗಳು, ಹಲ್ಲಿಗಳು ಅದರ ಆಹಾರ. ಮುಂಭಾಗದಲ್ಲಿರುವ ಇಕ್ಕಳದಂತಹ ಕೊಂಬುಗಳಿಂದ ಬೇಟೆಯನ್ನು ಹಿಡಿದು ಬಾಲದಲ್ಲಿರುವ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯಲ್ಲಿ ನ್ಯೂರೋಟಾಕ್ಸಿನ್ ಎಂಬ ವಿಷವಿದೆ. ಅದು ಎದುರಾಳಿಯ ದೇಹ ಸೇರಿದಾಗ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಬಳಿಕ ಕೊಂಬುಗಳಲ್ಲಿರುವ ಅರದಂತಹ ಹಲ್ಲುಗಳಿಂದ ಅರೆದು ಬೇಟೆಯ ದೇಹದ ರಸವನ್ನು ಮಾತ್ರ ಸೇವಿಸಿ ಎಲುಬು, ಚರ್ಮಗಳನ್ನು ಬಿಸುಡುತ್ತದೆ. ಒಮ್ಮೆ ಹೊಟ್ಟೆ ತುಂಬಿದರೆ ಒಂದು ವರ್ಷವಾದರೂ ಹಸಿವಿನ ಭಯವಿಲ್ಲ.
Related Articles
ಗಂಡು ಚೇಳು ಹೆಣ್ಣನ್ನು ಒಲಿಸಿಕೊಳ್ಳಲು ಅದರ ಮುಂದೆ ತನ್ನದೇ ಶೈಲಿಯಲ್ಲಿ ವಿಶಿಷ್ಟವಾಗಿ ನರ್ತಿಸುತ್ತದೆ. ಚೇಳಿನ ಮೊಟ್ಟೆಗಳು ಒಡೆದು ಮರಿಗಳಾದ ಕೂಡಲೇ ತಾಯಿ ಚೇಳಿನ ಮೈಮೇಲೇರಿಕೊಂಡು ಅದರ ಜೊತೆಗೆ ಸಾಗುತ್ತವೆ. ಇದರಿಂದಾಗಿ ಚೇಳಿನ ಬೆನ್ನನ್ನು ಒಡೆದು ಮರಿಗಳು ಹೊರಗೆ ಬರುತ್ತವೆಂಬ ತಪ್ಪು ಕಲ್ಪನೆಯೂ ಇದೆ. ಚೇಳಿನ ಕಣ್ಣು ಅದರ ಬೆನ್ನಿನ ಮೇಲಿರುತ್ತದೆ. ಮನುಷ್ಯನಿಗೆ ಸಾವು ತರುವಷ್ಟು ಪ್ರಮಾಣದ ವಿಷ ಚೇಳಿನಲ್ಲಿ ಇಲ್ಲ. ಐವತ್ತು ಚೇಳುಗಳ ವಿಷ ಒಟ್ಟಾದರೆ ಮಾತ್ರ ಪ್ರಾಣಾಂತಿಕವಾಗಬಹುದು.
Advertisement
ತಿಂಡಿ ತಯಾರಿಕೆಪ್ರೈಡ್ ಜಾತಿಯ ಚೇಳುಗಳನ್ನು ಚೀನೀಯರು ಖಾದ್ಯ ತಯಾರಿಸಿ ತಿನ್ನುತ್ತಾರೆ. ಅದರಿಂದ ವೈನ್ ತಯಾರಿಸುತ್ತಾರೆ. ಚೇಳಿನ ಅಂಗಾಂಶಗಳಿಂದ ಕ್ಯಾನ್ಸರ್, ಮಲೇರಿಯಾ, ಸಂಧಿವಾತಗಳಿಗೆ ಪರಿಣಾಮಕಾರಿ ಔಷಧಿ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಮಹತ್ವದ ಹಂತ ತಲುಪಿದ್ದಾರೆ. ಚೇಳು ಅಂದರೆ ಭಯವೂ ಇದೆ. ಚೇಳಿನಿಂದ ಅಭಯವೂ ಇದೆ. – ಪ. ರಾಮಕೃಷ್ಣ ಶಾಸ್ತ್ರಿ