ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ವಂದೇ ಮಾತರಂ ಸಮಿತಿ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಿಗೆ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ನೀಡಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ರಮೇಶ್ ನಾಯಕ್(ವೈದ್ಯಕೀಯ ಕ್ಷೇತ್ರ), ಮಲ್ಲೇಶ್(ಪೊಲೀಸ್ ಇಲಾಖೆ), ಉಮಾಶಂಕರ್(ಸಹಕಾರಿ ಕ್ಷೇತ್ರ), ಮಾದೇಶ್, ಸೈಯದ್ ರಹಮತ್ ಉಲ್ಲಾ(ಸಾಮಾಜಿಕ ಕ್ಷೇತ್ರ), ಉಮೇಶ್(ನ್ಯಾಯಾಂಗ ಇಲಾಖೆ), ರಾಮ್‌ಪ್ರಸಾದ್(ಉನ್ನತ ಶಿಕ್ಷಣ), ತೇಜಸ್ ಶಂಕರ್(ಶಿಕ್ಷಣ ಕ್ಷೇತ್ರ), ಕಡಕೋಳ ಜಗದೀಶ್(ಸಾಂಸ್ಕೃತಿಕ ಕ್ಷೇತ್ರ) ಅವರಿಗೆ ನಾಡಪ್ರಭು ಕೆಂಪೇಗೌಡ ಸೇವಾ ಭೀಷ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ಡಾ.ಕೆ.ರಘುರಾಂ ಮಾತನಾಡಿ, ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ನಾಡಪ್ರಭು ಕೆಂಪೇಗೌಡರ ಕೊಡುಗೆ, ಪರಿಕಲ್ಪನೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾಡಪ್ರಭು ಕೆಂಪೇಗೌಡರ ರಾಜಾಳ್ವಿಕೆಯೇ ಮುಖ್ಯ ಕಾರಣವಾಗಿದೆ.
ಹೀಗಾಗಿ ಕತ್ತಿವರಸೆ, ಮಲ್ಲಕಾಳಗ, ರಾಜನೀತಿ, ಆರ್ಥಿಕತೆ ನಿರ್ವಹಣೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕೆಂಪೆಗೌಡರ ಜಯಂತಿಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸುವ ಮೂಲಕ ಅವರ ಕೊಡುಗೆ ಮತ್ತು ಇತಿಹಾಸದ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯದ ಮಾರ್ಗ ಕಲ್ಪಿಸಬೇಕಿದೆ ಎಂದರು.
ವಂದೇ ಮಾತರಂ ಸಮಿತಿ ಅಧ್ಯಕ್ಷ ಪ್ರದೀಪ್ ಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜನಾಂಗ ಅಥವಾ ಪ್ರದೇಶಕ್ಕೆ ಸೀಮಿತವಾದವರಲ್ಲ. ಕರುನಾಡಿನ ಅಭಿವೃದ್ಧಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಮೂಲಕ ವಿಶ್ವಮಾನವರಾಗಿದ್ದಾರೆ. ಹೀಗಾಗಿ ಐದು ಶತಮಾತನದ ಹಿಂದೆ ಬೆಂಗಳೂರು ನಗರವನ್ನು ಸ್ಥಾಪಿಸಿದ ಕೆಂಪೇಗೌಡರ ಜಯಂತಿಯನ್ನು ವಿಶ್ವದೆಲ್ಲಡೆ ಆಚರಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಂದೇ ಮಾತರಂ ಸಮಿತಿಯ ಅಜಯ್ ಶಾಸಿ, ಗುರುದತ್ತ, ಜೆಡಿಎಸ್ ಮುಖಂಡ ಪ್ರಕಾಶ್ ಪ್ರಿಯದರ್ಶನ್, ಗಿರೀಶ್‌ಗೌಡ, ರಾಮು, ಅಭಿಷೇಕ್, ಬಸವಣ್ಣ ಇನ್ನಿತರರು ಹಾಜರಿದ್ದರು.