ಇವತ್ತು, ಹಳ್ಳಿ-ಪಟ್ಟಣಗಳ ಭೇದವಿಲ್ಲದೆ ಹೆಣ್ಣು ಸ್ವಾವಲಂಬಿಯಾಗುತ್ತಿದ್ದಾಳೆ. ಕೇವಲ ಉದ್ಯೋಗವಷ್ಟೇ ಅಲ್ಲ, ಸ್ವಯಂ ಉದ್ಯೋಗ ನಿರ್ವಹಣೆಯಲ್ಲೂ ಆಕೆ ಹಿಂದೆ ಬಿದ್ದಿಲ್ಲ. ಈ ಮಾತಿಗೆ ಬಾಗಲಕೋಟೆಯ ಲಕ್ಷ್ಮಿ ಪ್ರಕಾಶ ಅಂಕಲಗಿಯವರೇ ಉದಾಹರಣೆ.
ನಾಲ್ಕು ವರ್ಷಗಳ ಹಿಂದೆ, ಮಹಿಳಾ ಅಭಿವೃದ್ಧಿ ನಿಗಮದ “ಉದ್ಯೋಗಿನಿ’ ಯೋಜನೆ ಅಡಿಯಲ್ಲಿ ಬ್ಯಾಂಕ್‌ನಿಂದ 50 ಸಾವಿರ ರೂ. ಸಾಲ ಪಡೆದ ಲಕ್ಷ್ಮಿ, ಸಣ್ಣ ಬ್ಯೂಟಿ ಪಾರ್ಲರ್ ತೆರೆದರು. ಮೊದಲಿಗೆ, ಹೇರ್‌ಕಟ್, ಮೇಕ್‌ಅಪ್, ಐ ಬ್ರೋ ಮಾಡುತ್ತಾ ಹೆಣ್ಮಕ್ಕಳ ಮನ ಗೆದ್ದ ಅವರು, ಕ್ರಮೇಣ ಟೈಲರಿಂಗ್ ಅನ್ನೂ ಶುರು ಮಾಡಿದರು. ಜೊತೆಗೆ, ಪಾರ್ಲರ್‌ನಲ್ಲಿಯೇ ಜ್ಯುವೆಲರಿ ಮತ್ತು ಮೇಕ್‌ಅಪ್ ವಸ್ತುಗಳನ್ನು ಮಾರಾಟಕ್ಕಿಟ್ಟರು. ಹೀಗೆ ತಮ್ಮ ಆದಾಯವನ್ನು ವಿಸ್ತರಿಸಿಕೊಂಡ ಲಕ್ಷ್ಮಿ, ಸದ್ಯ ತಿಂಗಳಿಗೆ 15-20 ಸಾವಿರ ರೂ. ದುಡಿಯುತ್ತಿದ್ದಾರೆ.
ಬ್ರೈಡಲ್ ಮೇಕ್‌ಅಪ್‌ನಲ್ಲೂ ಸಿದ್ಧಹಸ್ತರಾದ ಲಕ್ಷ್ಮಿಯವರನ್ನು ಮದುವೆ ಮುಂತಾದ ಸಮಾರಂಭಗಳಿಗೂ ಜನ ಕರೆಯುತ್ತಾರೆ. ಮದುವೆಯ ಸೀಸನ್‌ನಲ್ಲಿ ಮದುಮಕ್ಕಳ ವಸ್ತ್ರಾಲಂಕಾರ, ಮೇಕ್‌ಅಪ್‌ನಿಂದ ಇವರ ಗಳಿಕೆ ಹೆಚ್ಚುತ್ತದೆ. ಹೆಣ್ಣುಮಕ್ಕಳಲ್ಲಿ ಹೆಚ್ಚಿರುವ ಸೌಂದರ್ಯ ಪ್ರಜ್ಞೆಯಿಂದಾಗಿ, ಬ್ಯೂಟಿ ಪಾರ್ಲರ್ ಉದ್ಯಮ ಲಾಭದಾಯಕ ಎನ್ನುತ್ತಾರೆ ಅವರು. ಮಹಿಳೆಯರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳ ನೆರವು ಪಡೆದರೆ ಸ್ವಾವಲಂಬಿ ಜೀವನ ನಡೆಸೋದು ಕಷ್ಟವಲ್ಲ ಅನ್ನೋದು ಅವರ ಅಭಿಪ್ರಾಯ.
ಬ್ಯೂಟಿ ಪಾರ್ಲರ್ ಜೊತೆ ಜೊತೆಗೇ ಟೈಲರಿಂಗ್ ಮತ್ತು ಜ್ಯುವೆಲರಿ ವಸ್ತುಗಳ ವ್ಯಾಪಾರ ಮಾಡುತ್ತಿರೋದ್ರಿಂದ ಆದಾಯ ಚೆನ್ನಾಗಿದೆ. ಸ್ವಂತ ಉದ್ಯೋಗದಿಂದ ಬದುಕು ಸಾಗುತ್ತಿರುವುದು ಖುಷಿ ನೀಡುತ್ತದೆ. ಇದಕ್ಕೆಲ್ಲ ಸಹಾಯ ಮಾಡಿದ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಚಿರಋಣಿ
-ಲಕ್ಷ್ಮಿ ಅಂಕಲಗಿ
– ಅಂಬುಜಾಕ್ಷಿ ಕುರುವಿನಕೊಪ್ಪ