ಮೂಡಬಿದಿರೆ: ಹೋಬಳಿಯ 28 ಹಳ್ಳಿಗಳನ್ನು ಕೇಂದ್ರೀಕರಿಸಿ 43 ಸುಧಾರಿತ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪ್ರತಿ ಬೀಟ್‌ಗೂ 50 ಮಂದಿ ನಾಗರಿಕ ಸದಸ್ಯರಿದ್ದು, ಅವರಿಗೆ ಗುರುತಿನ ಚೀಟಿ ನೀಡಲಾಗಿದೆ ಎಂದು ಅಪರಾಧ ಮತ್ತು ಸಂಚಾರ ಡಿಸಿಪಿ ಹನುಮಂತರಾಯ ತಿಳಿಸಿದರು.
ಸಮುದಾಯದತ್ತ ಪೊಲೀಸ್- ಜನಸ್ನೇಹಿ ಪೊಲೀಸ್ ಕಾರ್ಯಕ್ರಮದಡಿಯಲ್ಲಿ ಮೂಡಬಿದಿರೆ ಸ್ವರ್ಣ ಮಂದಿರದಲ್ಲಿ ಶನಿವಾರ ನಡೆದ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂಡಬಿದಿರೆ ಠಾಣಾ ಸರಹದ್ದಿನ ಸುಧಾರಿತ ಬೀಟ್ ವ್ಯವಸ್ಥೆಯ ನಾಗರಿಕ ಸದಸ್ಯರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಣಂಬೂರು ಎಸಿಪಿ ರಾಜೇಂದ್ರ ಮಾತನಾಡಿ, ಪ್ರತಿಯೊಬ್ಬ ಹೆಡ್ ಕಾನ್‌ಸ್ಟೆàಬಲ್‌ಗೆ 50 ನಾಗರಿಕರನ್ನು ಸದಸ್ಯರನ್ನಾಗಿ ಮಾಡುವ ಗುರಿಯನ್ನು ನೀಡಿದ್ದೇವೆ. ಆ ಮೂಲಕ ಹೊಸ ಬೀಟ್‌ಗಳನ್ನು ರಚಿಸಲಾಗಿದೆ. ನಾಗರಿಕರಲ್ಲಿ ಸದಸ್ಯರಾದವರು ಪೊಲೀಸರಿಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡುವುದು, ಪೊಲೀಸ್ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ನಾಗರಿಕರ ಸದಸ್ಯರು ಕೈ ಜೋಡಿಸಬೇಕು ಎಂದು ತಿಳಿಸಿದರು.
ಮೂಡಬಿದಿರೆ ಪೊಲೀಸ್ ಆಯುಕ್ತ ರಾಮಚಂದ್ರ ನಾಯಕ್ ಪ್ರಸ್ತಾವನೆಗೈದರು. ಮೂಡಬಿದಿರೆ ಹೋಬಳಿಯ 28 ಗ್ರಾಮಗಳನ್ನು 43 ವಿಭಾಗ ಮಾಡಿ, ಪ್ರತಿ ಬೀಟ್‌ಗೂ ಒಬ್ಬ ಪೊಲೀಸ್ ಸಿಬಂದಿ ಯನ್ನು ನೇಮಕ ಮಾಡಲಾಗಿದೆ. ಸುಧಾರಿತ ವ್ಯವಸ್ಥೆ ಯಲ್ಲಿ ಸಿಬಂದಿಗೂ ಹೆಚ್ಚಿನ ಅಧಿಕಾರವನ್ನು ನೀಡಲಾಗುತ್ತದೆ. ಪೊಲೀಸ್ ಸಿಬಂದಿ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಠಾಣಾಧಿಕಾರಿಯಾಗಿ, ತನಿಖೆ ಕೈಗೊ ಳ್ಳಲು ಗುಪ್ತ ಮಾಹಿತಿ ಸಂಗ್ರಹಣೆ ಸಹಿತ ಹಲವು ಅಧಿಕಾರಗಳನ್ನು ಪಡೆಯಲಿದ್ದಾರೆ ಎಂದರು.
ಅಕ್ರಮ ಗೋ ಸಾಗಾಟಕ್ಕೆ ಬಿಸಿ ಮುಟ್ಟಿಸಿ
ಮೂಡಬಿದಿರೆ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಗೋ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸ್ ಬೀಟ್ ವ್ಯವಸ್ಥೆಯು ಮುಖ್ಯವಾಗಿ ಅಕ್ರಮ ಗೋ ಸಾಗಾಟ ಕೃತ್ಯಗಳನ್ನು, ಅವುಗಳಿಂದಾಗುವ ಗೊಂದಲಗಳನ್ನು ನಿವಾರಿಸಬೇಕು ಎಂದು ರೈತ ಮುಖಂಡ ಸುರೇಶ್ ಕುಮಾರ್ ಆಗ್ರಹಿಸಿದರು.
ಮೂಡಬಿದಿರೆ ಪುರಸಭಾ ಸದಸ್ಯ ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಎಪಿಎಂಸಿ ಸದಸ್ಯ ಕೃಷ್ಣರಾಜ ಹೆಗ್ಡೆ, ರೈತ ಮುಖಂಡರಾದ ರಾಜವರ್ಮ ಬೈಲಂಗಡಿ, ಸುರೇಶ್ ಕುಮಾರ್, ಯಾದವ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಬನ್ನಡ್ಕ, ಬಳಕೆದಾರರ ವೇದಿಕೆಯ ಪದ್ಮನಾಭ ಶೆಟ್ಟಿ ನಿಡ್ಡೋಡಿ ಅನಿಸಿಕೆ ವ್ಯಕ್ತಪಡಿಸಿದರು.
ಎಸ್‌ಐ ದೇಜಪ್ಪ, ಶಂಕರ್ ನಾಯರಿ, ಜಿ.ಪಂ. ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಅಂಗನವಾಡಿ ಶಿಕ್ಷಕಿ ಭಾರತಿ ಜೈನ್ ಉಪಸ್ಥಿತರಿದ್ದರು.