ಗಣೇಶ್ ಅಭಿನಯದ ನಾಡಿದ್ದು ಅಂದರೆ ಮೇ 26 ರಂದು ರಾಜ್ಯಾದ್ಯಂತ “ಪಟಾಕಿ’ ಸಿಡಿಯುವುದಕ್ಕೆ ಸಜ್ಜಾಗಿದೆ. ಅನುಪಮ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ನಿರ್ಮಾಪಕ ಎಸ್.ವಿ.ಬಾಬು ಅವರು ಈ ಬಾರಿ ನಿರ್ಮಾಣದ ಜೊತೆಗೆ ವಿತರಣೆಗೂ ಇಳಿದಿದ್ದಾರೆ. ವಿತರಣೆ ಮಾಡುವುದಕ್ಕೆಂದೇ ಹೊಸ ಸಂಸ್ಥೆ ಹುಟ್ಟುಹಾಕಿರುವ ಬಾಬು, ತಮ್ಮ ಸಂಸ್ಥೆಯ ಮೊದಲ ಸಿನಿಮಾವಾಗಿ ತಮ್ಮದೇ ನಿರ್ಮಾಣದ “ಪಟಾಕಿ’ಯನ್ನು ವಿತರಣೆ ಮಾಡಲಿದ್ದಾರೆ.
ಗಣೇಶ್ ಇದುವರೆಗೂ ಮಾಡಿದ ಪಾತ್ರವೇ ಬೇರೆ, ಈ ಶುಕ್ರವಾರ ಬಿಡುಗಡೆಯಾಗುತ್ತಿರುವ “ಪಟಾಕಿ’ ಚಿತ್ರದ ಪಾತ್ರವೇ ಇದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಎ.ಸಿ.ಪಿಯಾಗಿ ಕಾಣಿಸಿಕೊಂಡಿದ್ದಾರೆ. “ನಿಜಕ್ಕೂ ಸವಾಲಿನ ಪಾತ್ರ. ಬಹಳ ಖುಷಿಯಿಂದ ಈ ಚಿತ್ರದಲ್ಲಿ ನಟಿಸಿದ್ದೀನಿ. ಸಾಯಿಕುಮಾರ್ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಅವರ ಪಾತ್ರ ನೋಡಿ ಥ್ರಿಲ್ ಆದವರು ನಾವು. ಅವರೆದುರು ನಿಂತು ಡೈಲಾಗ್ ಹೊಡೆಯ ಬೇಕಾಗಿತ್ತು. ಈ ಚಿತ್ರ ನಿಜಕ್ಕೂ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುತ್ತದೆ’ ಎನ್ನುತ್ತಾರೆ ಗಣೇಶ್.
ಈ ಹಿಂದೆ ಸ್ವಮೇಕ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ನಿರ್ದೇಶಕ ಮಂಜು ಸ್ವರಾಜ್ ಮೊದಲ ಬಾರಿಗೆ ರೀಮೇಕ್ ಮಾಡಿದ ಸಿನಿಮಾವಿದು. ಹೇಳಿಕೊಳ್ಳಲು ಇದು ರೀಮೇಕ್ ಸಿನಿಮಾವಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಕೂಡಾ ಮಾಡಿಕೊಂಡಿದ್ದಾರಂತೆ ಮಂಜು ಸ್ವರಾಜ್. “ಮೂಲ ಕಥೆಯ ಒನ್‌ಲೈನ್ ಇಟ್ಟುಕೊಂಡು ಉಳಿದಂತೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇವೆ. ನಿಮಗೆ ಈ ಚಿತ್ರದಲ್ಲಿ ಶೇ 40 ರಷ್ಟು ಬದಲಾವಣೆ ಕಾಣುತ್ತದೆ.
ನಮ್ಮ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಅದರಲ್ಲಿ ಕೆಲವು ಪಾತ್ರಗಳನ್ನು ಕೂಡಾ ಸೇರಿಸಿದ್ದೇವೆ. ಮೂಲ ಚಿತ್ರದಲ್ಲಿ ಸಾಧುಕೋಕಿಲ ಅವರ ಪಾತ್ರವೇ ಇಲ್ಲ. ಆದರೆ “ಪಟಾಕಿ’ಯಲ್ಲಿ ಸೇರಿಸಿದ್ದೇವೆ. ಇಲ್ಲಿ ಸಾಧು ಕೋಕಿಲ ಅವರ ಪಾತ್ರ ಎಷ್ಟು ಹೊಂದಿಕೆಯಾಗಿದೆ ಎಂದರೆ ಆ ಪಾತ್ರವನ್ನು ಬಿಟ್ಟು ಸಿನಿಮಾ ನೋಡಲು ಸಾಧ್ಯವಾಗುವುದಿಲ್ಲ’ ಎಂದು ತಾವು ಮಾಡಿಕೊಂಡ ಬದಲಾವಣೆ ಬಗ್ಗೆ ಹೇಳುತ್ತಾರೆ ಮಂಜು ಸ್ವರಾಜ್.
ತೆಲುಗಿನ “ಪಟಾಸ್’ ಚಿತ್ರದಲ್ಲಿ ನಟಿಸುವಾಗಲೇ, ಅವರು ನಿರ್ಮಾಪಕ ಎಸ್.ವಿ. ಬಾಬುಗೆ ಫೋನ್ ಮಾಡಿ, ಈ ಚಿತ್ರವನ್ನು ಕನ್ನಡದಲ್ಲಿ ಮಾಡಿದರೆ ಚೆನ್ನಾಗಿರುತ್ತೆ ಎಂದು ಹೇಳಿದ್ದರಂತೆ. “ಈ ಚಿತ್ರವನ್ನು ನನ್ನ ಮಗ ಆದಿ ಜೊತೆಗೆ ಮಾಡಬೇಕು ಅಂತ ಆಸೆ ಇತ್ತು. ಆದರೆ, ಅವನಿಗೆ ಹೆವಿ ಆಗುತ್ತದೆ. ಆ ಪಾತ್ರಕ್ಕೆ ಯಾರು ಸರಿ ಂದು ಯೋಜಿಸಿದಾಗ, ಗಣೇಶ್ ಸರಿ ಎನಿಸಿತು. ನಾನು ಅವರ ದೊಡ್ಡ ಅಭಿಮಾನಿ. ಅವರ ಅಭಿನಯ ಬಹಳ ಚೆನ್ನಾಗಿದೆ.
ಇನ್ನು ಚಿತ್ರ ಸಹ ಚೆನ್ನಾಗಿ ಬಂದಿದೆ. ಎಲ್ಲರಿಗೂ ಇಷ್ಟವಾಗುವಂತಹ ಒಂದು ಪ್ಯಾಕೇಜ್ ಸಿನಿಮಾ ಇದು’ ಎನ್ನುತ್ತಾರೆ ಸಾಯಿಕುಮಾರ್. ಸಾಯಿಕುಮಾರ್ ಇಲ್ಲದಿದ್ದರೆ ಈ ಚಿತ್ರ ಆಗುತ್ತಲೇ ಇರಲಿಲ್ಲ ಎಂದವರು ಎಸ್.ವಿ. ಬಾಬು. “ಚಿತ್ರದ ರೈಟ್ ಕೊಡಿಸಿದ್ದೇ ಅವರು. ಹಾಗಾಗಿ ಅವರೇ ಈ ಚಿತ್ರಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ. ಇನ್ನು ಗಣೇಶ್‌ಗೆ ಚಿತ್ರ ತೋರಿಸಿದಾಗ, ಅವರು ಎಮೋಷನಲ್ ಆಗಿ, ತಕ್ಷಣವೇ ಈ ಚಿತ್ರ ಮಾಡೋಣ ಎಂದರು.
ಮೂಲ ಚಿತ್ರವನ್ನು ಇಲ್ಲಿನ ನೇಟಿವಿಟಿಗೆ ಹೊಂದಿಸಿ ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಬಾಬು. ಚಿತ್ರದಲ್ಲಿ ಗಣೇಶ್ ಜೊತೆಗೆ ರನ್ಯಾ ರಾವ್, ಸಾಯಿಕುಮಾರ್, ಸಾಧು ಕೋಕಿಲ, ಆಶೀಶ್ ವಿದ್ಯಾರ್ಥಿ, ಪ್ರಿಯಾಂಕಾ, ಧರ್ಮ, ವಿಜಯ್ ಚೆಂಡೂರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣವಿದೆ.