Advertisement

ಕಾಡಿಗೆ ಸೇರಿಸುವ ವೇಳೆ ಕರಡಿ ದಾಳಿ: ಇಬ್ಬರಿಗೆ ಗಾಯ

10:58 AM Feb 08, 2019 | |

ಕೂಡಿಗಿ: ವೀಳ್ಯದೆಲೆ ತೋಟದಲ್ಲಿ ಅಡಗಿ ಕುಳಿತಿದ್ದ ಕರಡಿಗಳನ್ನು ಕಾಡಿಗೆ ಸೇರಿಸಲು ಅರಣ್ಯ ಸಿಬ್ಬಂದಿ ಪ್ರಯತ್ನಿಸುತ್ತಿರುವಾಗಲೇ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ, ಓರ್ವ ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿ ತ್ರೀವ ಗಾಯಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಮೀಪದ ಕಡಾಕೊಳ್ಳ ಗ್ರಾಮದಲ್ಲಿ ಹೊರ ವಲಯದಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಕಡಾಕೊಳ್ಳ ಗ್ರಾಮದ ಯಜಮಾನ ಸಿದ್ದಪ್ಪ(70), ಡಿ.ನಾಗರಾಜ್‌(38) ಎಂಬ ರೈತರು ಗಾಯಗೊಂಡಿದ್ದಾರೆ. ರೈತ ಸಿದ್ದಪ್ಪನ ತಲೆ, ಮುಖ ಸೇರಿದಂತೆ ವಿವಿಧ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ.

ಭೇಟಿ-ಪರಿಶೀಲನೆ: ತಾಪಂ ಇಒ ಜಿ.ಎಂ.ಬಸಣ್ಣ, ಕಾನಹೊಸಹಳ್ಳಿ ಪಿಎಸ್‌ಐ ಎ.ಕೃಷ್ಣನಾಯ್ಕ, ಗುಡೇಕೋಟೆ ವಲಯ ಆರ್‌ಎಫ್‌ಒ ಬಿ.ಎಸ್‌.ಮಂಜುನಾಥ್‌, ಮಾಜಿ ತಾಪಂ ಉಪಾಧ್ಯಕ್ಷ ಎಸ್‌.ಪಿ.ಪ್ರಕಾಶ್‌, ಪಿಡಿಒ ದೇವಂದ್ರ ವಗ್ಗರೇ, ಡಿಆರ್‌ಎಫ್‌ಒಗಳಾದ ಮಹೇಶ್‌, ಹೊನ್ನೂಸ್ವಾಮಿ, ವೆಂಕಟೇಶ್‌, ಗುರುಬಸವರಾಜ್‌ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ವಿವರ: ಆಹಾರ ಮತ್ತು ನೀರಿಗಾಗಿ ಕರಡಿಗಳು ಅರಣ್ಯದಿಂದ ತೋಟಕ್ಕೆ ಆಗಮಿಸಿದ್ದವು. ನಂತರ ಅವು ಅರಣ್ಯಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕರಡಿಗಳನ್ನು ಕಂಡು ಹುಣಿಸೆ ಹಣ್ಣು ಕೀಳುವ ಕೆಲಸಗಾರರು ಬೊಬ್ಬೆ ಹಾಕಿದ್ದಾರೆ. ನಂತರ ಕರಡಿಗಳು ಪಕ್ಕದ ವೀಳ್ಯದೆಲೆ ತೋಟದಲ್ಲಿ ಅಡಗಿ ಕುಳಿತುಕೊಂಡಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕರಡಿಗಳನ್ನು ಅರಣ್ಯಕ್ಕೆ ಕಳುಹಿಸಲು ಪ್ರಯತ್ನಿಸುತ್ತಿವಾಗಲೇ ಈ ಆವಘಡ ಸಂಭವಿಸಿದೆ.

ಬೆದರಿದ ಜನತೆ: ಗುರುವಾರ ಬೆಳಗ್ಗೆ ಕಾಣಿಸಿಕೊಂಡ ಕರಡಿಗಳು ತನ್ನ ಮರಿಗಳೊಂದಿಗೆ ಇದ್ದ ಕಾರಣ ಜನರನ್ನು ಕಂಡು ಆಕ್ರೋಶಗೊಂಡು ರೈತರ ಮೇಲೆ ದಾಳಿ ಮಾಡಿದ ದೃಶ್ಯ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹರಸಾಹಸ: ಕಡಾಕೊಳ್ಳ ಮತ್ತು ಭೀಮಸಮುದ್ರ ಗ್ರಾಮಗಳ ತೋಟದಲ್ಲಿ ಅಡಗಿರುವ ಕರಡಿಗಳನ್ನು ಅರಣ್ಯಕ್ಕೆ ಸೇರಿಸಲು ದಿನಪೂರ್ತಿ ಅರಣ್ಯ ಸಿಬ್ಬಂದಿ ಶ್ರಮಿಸಿದರು. ಕಡಾಕೊಳ್ಳ ಗ್ರಾಮದಲ್ಲಿ ಇದ್ದ ಕರಡಿಯನ್ನು ಮಧ್ಯಾಹ್ನ 2 ಗಂಟೆ ಅರಣ್ಯಕ್ಕೆ ಸೇರಿಸಿದರೆ, ಭೀಮಸಮುದ್ರದಲ್ಲಿರುವ ಕರಡಿಯನ್ನು ಕಳುಹಿಸಲು ಸಂಜೆಯವರೆಗೂ ಹರಸಾಹಸ ಪಟ್ಟರೂ ಅರಣ್ಯಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ.

Advertisement

ಸ್ಥಳೀಯರ ಆಕ್ರೋಶ: ಕರಡಿಗಳ ದಾಳಿ ನಿರಂತರವಾಗಿದೆ. ಅದರಲ್ಲೂ ಕಡಾಕೊಳ್ಳ ಗ್ರಾಮವೊಂದರಲ್ಲಿ ಹೆಚ್ಚು ಪ್ರಕರಣಗಳು ನಡೆದಿದ್ದರಿಂದ ಗ್ರಾಮದ ಜನತೆ ಅರಣ್ಯ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next