ಗಂಗಾವತಿ: ಗಂಗಾವತಿ ನಗರದ ಬಳಿಗೇರ್ ಓಣಿ ಬಸ್ ನಿಲ್ದಾಣದ ಹಿಂದಿನ ಓಣಿಗೆ ಕರಡಿಯೊಂದು ನುಗ್ಗಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೋರ್ವನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಘಟನೆ ಗಂಗಾವತಿಯಲ್ಲಿ ರವಿವಾರ ಬೆಳ್ಳಂಬೆಳ್ಳಿಗ್ಗೆ ಜರುಗಿದೆ.
ಗಂಗಾವತಿ ಬಸ್ ಡಿಪೋ ಕಡೆಯಿಂದ ಆಗಮಿಸಿದ ಕರಡಿ ಬೆಳ್ಳಿಗ್ಗೆ ಮನೆಯ ಮುಂದೆ ಕೆಲಸ ಮಾಡುತ್ತಿದ್ದ ನಂದಾಬಾಯಿ (59 ವ), ಈಶ್ವರಮ್ಮ (60 ವ) ಹಾಗೂ ನೆಹರು ಪಾರ್ಕಿನಲ್ಲಿ ಕೆಲಸ ಮಾಡುತ್ತಿದ್ದ ಶೇರ್ ಖಾನ್ (60 ವ) ಎಂಬ ಕಾರ್ಮಿಕನ ಮೇಲೆ ದಾಳಿ ಮಾಡಿದೆ. ಗಾಯಗೊಂಡರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಆಸ್ಪತ್ರೆ ಸೇರಲು ಪಾಸಿಟಿವ್ ವರದಿ ಬೇಕಿಲ್ಲ : ಕೇಂದ್ರ ಸರಕಾರದಿಂದ ಹೊಸ ನಿಯಮ
ಈ ಸಂದರ್ಭದಲ್ಲಿ ಜನರು ಗಲಾಟೆ ಮಾಡಿದ್ದರಿಂದ ಜೂನಿಯರ್ ಕಾಲೇಜ್ ಹಿಂಬಾಗದ ಮಳೆಮಲ್ಲೇಶ್ವರ ಬೆಟ್ಟದ ಕಡೆಗೆ ಕರಡಿ ಓಡಿ ಹೋಗಿದೆ.
ಬೆಟ್ಟದ ಗುಂಡಿನ ಮೇಲೆ ಕರಡಿ ಕುಳಿತಿರುವುದನ್ನು ವಾಯು ವಿಹಾರಕ್ಕೆ ಆಗಮಿಸಿದ ಜನರು ನೋಡುತ್ತಿದ್ದ ದೃಶ್ಯ ಕಂಡು ಬಂತು.
ಸುದ್ದಿ ತಿಳಿದ ಶಾಸಕ ಪರಣ್ಣ ಮುನವಳ್ಳಿ ಅರಣ್ಯ ಇಲಾಖೆಯ ವಲಯಾಧಿಕಾರಿ ಶಿವರಾಜ ಮೇಟಿ ಅವರೊಂದಿಗೆ ಸರಕಾರಿ ಆಸ್ಪತ್ರೆಗೆ ಆಗಮಿಸಿ ಕರಡಿ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಕರಡಿ ಸೆರೆ ಹಿಡಿಯುವುದು ಮತ್ತು ಗಾಯಗೊಂಡವರ ಚಿಕಿತ್ಸೆ ಮತ್ತು ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಸೂಚಿಸಿದರು.