Advertisement

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

12:20 PM May 17, 2024 | Team Udayavani |

ಬೆಂಗಳೂರು: ಬಿರುಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೀನ್ಸ್‌ ಬೆಳೆ ನಾಶವಾಗಿದ್ದು, ಬೇಡಿಕೆಯಿರುವಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, ತೋಟಗಾರಿಕಾ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ (ಹಾಪ್‌ ಕಾಮ್ಸ್‌)ದಲ್ಲೂ ಬೀನ್ಸ್‌ ಬೆಲೆ ಪ್ರತಿ ಕೆ.ಜಿ.ಗೆ ದ್ವಿಶತಕ (200 ರೂ.) ದ ಗಡಿ ದಾಟಿದೆ.

Advertisement

ಪೂರೈಕೆ ಕಡಿಮೆ ಆಗಿರುವ ಕಾರಣ ಜಾರ್ಖಂಡ್‌ ರಾಜಧಾನಿ ರಾಂಚಿಯಿಂದ ವಿಮಾನದ ಮೂಲಕ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಹೊಸ ಬೆಳೆ ಮಾರುಕಟ್ಟೆ ಪ್ರವೇಶಿಸುವವರೆಗೂ ಇದೇ ಪರಿಸ್ಥಿತಿಯಿರುವ ಸಾಧ್ಯತೆ ಇದೆ.

ಬಯಲು ಸೀಮೆ ಜಿಲ್ಲೆಗಳಾದ ಕೋಲಾರ- ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳು ಮತ್ತು ತಮಿಳನಾಡಿನ ಭಾಗದಿಂದಲೂ ಬೆಂಗಳೂರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀನ್ಸ್‌ ಪೂರೈಕೆ ಆಗುತ್ತದೆ. ಆದರೆ, ಬಿಸಿಗಾಳಿಯ ಜತೆಗೆ ಸಕಾಲದಲ್ಲಿ ಮಳೆ ಬಾರದಿರುವುದು ಸೇರಿದಂತೆ ಹಲವು ಕಾರಣದಿಂದಾಗಿ ಮಾರುಕಟ್ಟೆಗೆ ಶೇ.70 ರಷ್ಟು ಪೂರೈಕೆ ಕಡಿಮೆಯಾಗಿದೆ.

ತಾಪಮಾನ ತುಂಬಾ ಹೆಚ್ಚಾದರೆ ಅದು ಬೆಳೆ ಮೇಲೂ ಪ್ರಭಾವ ಬೀರಲಿದೆ. ಹೂವುಗಳು ಸಸ್ಯದಿಂದ ಒಣಗಿ ಉದುರಿ ಬೀಳುತ್ತವೆ. ತಂಪಾದ ಗಾಳಿ ಮತ್ತು ತೇವಾಂಶ ಇದ್ದಾಗ ಮಾತ್ರ ಫ‌ಸಲು ಚೆನ್ನಾಗಿ ಬರುತ್ತದೆ. ಆದರೆ, ವಿಪರೀತ ಬಿಸಿಲು ಕಾರಣ ಬೀನ್ಸ್‌ ಬೆಳೆಗೆ ಹೊಡೆತ ನೀಡಿದೆ ಎಂದು ಚಿಕ್ಕಬಳ್ಳಾಪುರ ಮೂಲದ ರೈತ ಚೌಡರೆಡ್ಡಿ ಹೇಳುತ್ತಾರೆ.

ವಾತಾವರಣದಲ್ಲಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದರೆ ಉತ್ತಮ ಗುಣಮಟ್ಟದ ಬೀನ್ಸ್‌ ಫ‌ಸಲು ನಿರೀಕ್ಷಿಸಲು ಸಾಧ್ಯ. ಇಲ್ಲದಿದ್ದರೆ ಗಿಡದಲ್ಲೇ ಗುಣಮಟ್ಟ ಹದಗೆಡುತ್ತದೆ. ಒಂದು ಎಕರೆಯಲ್ಲಿ ಸಾಮಾನ್ಯವಾಗಿ 1,500 ಕೆ.ಜಿ. ಇಳುವರಿ ಬರುತ್ತಿದ್ದರೆ, ಈಗ ರೈತರು 500 ಕೆ.ಜಿ.ಯೂ ಸಿಗದೆ ಪರದಾಡುವ ಪರಿಸ್ಥಿತಿ ಇದೆ ಎನ್ನುತ್ತಾರೆ.

Advertisement

20-25 ಟನ್‌ ಮಾತ್ರ ಪೂರೈಕೆ: ಬಿರುಬಿಸಿಲಿನ ಹಿನ್ನೆಲೆಯಲ್ಲಿ ಕೋಲಾರ ಸುತ್ತಮುತ್ತಲಿನ ಪ್ರದೇಶದ ರೈತರ ಹೊಲದಲ್ಲಿ ವಿವಿಧ ಜಾತಿಯ ಬೀನ್ಸ್‌ ಗಿಡಗಳು ಒಣಗುತ್ತಿದ್ದು, ಇದು ಪೂರೈಕೆ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ಪ್ರತಿದಿನ ಇಲ್ಲಿನ ಎಪಿಎಂಸಿಗೆ 40 ರಿಂದ 45 ಕ್ವಿಂಟಲ್‌ ಬೀನ್ಸ್‌ ಪೂರೈಕೆ ಆಗುತ್ತಿತ್ತು. ಆದರೆ, ಈಗ ಅದು 20 ರಿಂದ 25 ಕ್ವಿಂಟಲ್‌ಗೆ ಬಂದು ತಲುಪಿದೆ. ತಾಜಾ ಮತ್ತು ಹಸಿರುತನ ಹೊಂದಿದ ತರಕಾರಿಗಳಿಗೆ ಹೆಚ್ಚಿನ ಬೆಲೆ ಇದೆ. ಆದರೆ ಹೆಚ್ಚಿನ ಶುಭ ಕಾರ್ಯಕ್ರಮಗಳ ಜತೆಗೆ ರೈತರ ಹೊಲದಲ್ಲಿ ಬೆಳೆ ಬಾಡಿ ಹೋಗಿರುವುದು ಬೀನ್ಸ್‌ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೋಲಾರ ಎಪಿಎಂಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಪ್‌ ಕಾಮ್ಸ್‌ನಲ್ಲಿ ಬೀನ್ಸ್‌ ಖರೀದಿ ಕುಸಿತ: ತೋಟಗಾರಿಕಾ ಬೆಳೆಗಾರರ ಸಹಕಾರರಿ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ (ಹಾಪ್‌ ಕಾಮ್ಸ್‌)ದಲ್ಲಿ ಕೂಡ ಈಗ ಪ್ರತಿ ಕೆ.ಜಿ ಬೀನ್ಸ್‌ 210 ರೂ.ಗೆ ಖರೀದಿಯಾಗುತ್ತಿದೆ. ಕಳೆದ 15 ದಿನಗಳಿಂದ ಬೆಲೆ ದುಪ್ಪಟ್ಟಾಗಿದೆ. ಮಾರುಕಟ್ಟೆಗೆ ಹೊಸ ಬೆಳೆ ಬರುವವರೆಗೂ ಇದೇ ಪರಿಸ್ಥಿತಿಯಿರುವ ಸಂಭವವಿದೆ ಎಂದು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಕೆ.ಜಿ.ಗಟ್ಟಲೇ ಬೀನ್ಸ್‌ ಖರೀದಿ ಮಾಡುವವರು ಈಗ 250 ಗ್ರಾಂ ಖರೀದಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಹಾಪ್‌ಕಾಮ್ಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೀನ್ಸ್‌ ಮಾರಾಟ ಆಗುತ್ತಿಲ್ಲ. ಪ್ರತಿ ದಿನ 500 ರಿಂದ 600 ಕೆ.ಜಿ. ಖರೀದಿಯಾಗುತ್ತದೆ. ಎಚ್‌ ಎಎಲ್‌, ಬಿಇಎಲ್‌ ಕಾರ್ಖಾನೆಯ ಸಿಬ್ಬಂದಿ ಕುಟುಂಬದವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಇನ್ನುಳಿದವರು ಬೀನ್ಸ್‌ ಖರೀದಿಯನ್ನೇ ನಿಲ್ಲಿಸಿದ್ದಾರೆ ಎಂದು ಹೇಳುತ್ತಾರೆ.

ಬೇಡಿಕೆಯಿರುವಷ್ಟು ಬೀನ್ಸ್‌ ಪೂರೈಕೆ ಆಗದಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ರಾಂಚಿ ಮೂಲಕ ಬೀನ್ಸ್‌ ಬರುತ್ತಿದೆ. ಹೊಸ ಬೆಳೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರವೇಶಿಸುವವರೆಗೂ ಇದೇ ಪರಿಸ್ಥಿತಿ ಇರುವ ಸಾಧ್ಯತೆ ಇದೆ. ಹಾಪ್‌ ಕಾಮ್ಸ್‌ನಲ್ಲೂ ಬೀನ್ಸ್‌ ಖರೀದಿ ಪ್ರಮಾಣ ಕುಸಿತವಾಗಿದ್ದು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ರೈತರಿಂದ ಖರೀದಿಸಲಾಗುತ್ತದೆ. ಉಮೇಶ್‌ ಮಿರ್ಜಿ, ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್‌

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next