ಬೀದರ: ಬೀದರನಿಂದ ರಾಜಧಾನಿ ಬೆಂಗಳೂರಿಗೆ ಹವಾನಿಯಂತ್ರಿತ ಬಸ್‌ಗೆ 1200 ರೂ. ಇದ್ದರೆ, ಎಸಿ ಮೊದಲ ದರ್ಜೆ ರೈಲ್ವೆಗೆ 2400 ರೂ. ದರ ಇದೆ. ಆದರೆ, ಲೋಹದ ಹಕ್ಕಿಯಲ್ಲಿ ಪ್ರಯಾಣಿಸಲು 1299ರಿಂದ 1500 ರೂ. ದರ ಸೌಲಭ್ಯ. ಇದು ಬಸ್ ದರಕ್ಕೆ ಸಮ, ರೈಲಿಗಿಂತಲೂ ಕಡಿಮೆ. ಇದು ಆಶ್ಚರ್ಯ ಎನಿಸಿದರೂ ಸತ್ಯ. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ “ಉಡಾನ್’ನ (ಉಡೆ ದೇಶ್ ಕೆ ಆಮ್ ನಾಗರಿಕ್)ನ ಪ್ರತಿಫಲ. ಬೀದರ ವಿಮಾನ ನಿಲ್ದಾಣವೂ ಮೊದಲ ಹಂತದ ಉಡಾನ್ ಯೋಜನೆಯಡಿ ಸೇರಿರುವ ಹಿನ್ನಲೆಯಲ್ಲಿ ಇಲ್ಲಿನ ಜನರು ಕಡಿಮೆ ಸಮಯ ಮತ್ತು ಕಡಿಮೆ ಖರ್ಚಿನಲ್ಲಿ ಬೆಂಗಳೂರಿಗೆ ವಿಮಾನಯಾನ ಮಾಡುವ ಸವಲತ್ತು ದೊರೆತಿದೆ. ಟ್ರೂಜೆಟ್ ಸಂಸ್ಥೆ ವಿಮಾನಯಾನ ಸೇವೆ ಒದಗಿಸಲು ಮುಂದೆ ಬಂದಿದೆ.
ಫೆ.7ಕ್ಕೆ ಉದ್ಘಾಟನೆ : ವಾಯು ಸೇನಾ ತರಬೇತಿ ಕೇಂದ್ರದ ನೆಲೆಯಾಗಿರುವ ಬೀದರನಿಂದ ನಾಗರಿಕ ವಿಮಾನ ಹಾರಾಟಕ್ಕೆ ದಿನಗಣನೆ ಶುರುವಾಗಿದೆ. ಜ.26ರ ಗಣರಾಜ್ಯೋತ್ಸವದಂದೇ ವಿಮಾನಯಾನ ಆರಂಭಕ್ಕೆ ಮುಹೂರ್ತ ನಿಗದಿಯಾಗಿತ್ತಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬರುವಿಕೆಗಾಗಿ ಫೆ.7ಕ್ಕೆ ನಿಗದಿ ಮಾಡಲಾಗಿದೆ. ಸಿಎಂ ಪೂರ್ವ ನಿಗದಿತ ಕಾರ್ಯಕ್ರಮ ಕಾರಣ ಅನಿವಾರ್ಯವಾಗಿ ಮುಂದೂಡಲಾಗಿದೆ. ಈ ಮೂಲಕ ಬಿಸಿಲೂರಿನ ಜನರ ದಶಕದ ಕನಸು ನನಸಾಗುವುದು ನಿಶ್ಚಿತವಾಗಿದೆ.
70 ಆಸನ ಸೌಲಭ್ಯವುಳ್ಳ ವಿಮಾನ ಹಾರಾಟದ ಬಗ್ಗೆ ಟ್ರೂಜೆಟ್ ಸಂಸ್ಥೆ ಈಗಾಗಲೇ ಘೋಷಿಸಿದೆ. ಫೆ. 7ರಿಂದ ಸದ್ಯಕ್ಕೆ ಬೀದರ- ಬೆಂಗಳೂರು ಮತ್ತು ಬೆಂಗಳೂರು -ಬೀದರ ನಡುವೆ ಒಂದು ಬಾರಿ ವಿಮಾನ ಹಾರಾಟ ನಡೆಸಲಿದೆ. ವಿಮಾನಯಾನದ ದಿನ, ಸಮಯ, ಬುಕ್ಕಿಂಗ್ ಮತ್ತು ದರ ಇನ್ನಿತರ ವಿಷಯಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪ್ರಯಾಣದ ಅವ ಧಿ 1.40 ಗಂಟೆ ಇದ್ದು, ಬೆಂಗಳೂರಿನಿಂದ ಬೆಳಗ್ಗೆ 11:25ಕ್ಕೆ ಹಾರುವ ವಿಮಾನ ಮಧ್ಯಾಹ್ನ 1:05ಕ್ಕೆ ಬೀದರಗೆ ತಲುಪುವುದು. ನಂತರ ಮಧ್ಯಾಹ್ನ 1:35ಕ್ಕೆ ಬೀದರನಿಂದ ಹೊರಟು ವಿಮಾನ 3:15ಕ್ಕೆ ರಾಜಧಾನಿಗೆ ತಲುಪಲಿದೆ ಎಂದು ಟ್ರೂಜೆಟ್ ಮಾಹಿತಿ ನೀಡಿದೆ.
3.52 ಕೋಟಿ ಹೆಚ್ಚುವರಿ ಅನುದಾನ: ವಿಮಾನಯಾನ ಆರಂಭ ಕೊಂಚ ಮುಂದೂಡಿರುವುದರಿಂದ ಏರ್ ಟರ್ಮಿನಲ್ ನವೀಕರಣ ಕಾರ್ಯಕ್ಕೆ ಮತ್ತಷ್ಟು ಅವಕಾಶ ಸಿಕ್ಕಿಂತಾಗಿದೆ. ಈಗಾಗಲೇ 11.49 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ನ ನವೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು 3.52 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ.
ಸಿಕ್ಕಿರುವ ಕಡಿಮೆ ಅವಧಿಯಲ್ಲೇ ಕೊಳ್ಳೂರು ಇನ್ಪ್ರಾ ಪ್ರೈವೇಟ್ ಲಿಮಿಟೆಡ್ ಭರದ ಕಾಮಗಾರಿ ನಿರ್ವಹಿಸುತ್ತಿದೆ. ಸಂಸ್ಥೆಯ ಮುಖ್ಯಸ್ಥರಾದ ಗುರುನಾಥ ಕೊಳ್ಳೂರು, ಸಚಿನ್ ಕೊಳ್ಳೂರ್ ನಿಗಾ ವಹಿಸುತ್ತಿದ್ದು, ನಿಗದಿತ ಅವಧಿಯಲ್ಲೇ ಟರ್ಮಿನಲ್ ಸಿದ್ಧವಾಗಿಸಿ, ಹೊಸ ರೂಪ ನೀಡುವತ್ತ ಸಜ್ಜಾಗಿದ್ದಾರೆ.
ಏರ್ ಟರ್ಮಿನಲ್ ಚಿತ್ರಣ
ಏರ್ ಟರ್ಮಿನಲ್ ನವೀಕರಣದೊಂದಿಗೆ ಅಗತ್ಯ, ಅತ್ಯಾಧುನಿಕ ಸೌಕರ್ಯ ಕಲ್ಪಿಸಲಾಗುತ್ತಿದೆ. ಸೆಂಟ್ರಲೈಜ್ಡ್ ಎಸಿ, ವಿಐಪಿ ಲಾಂಜ್, ವಿಶ್ರಾಂತಿ ಕೋಣೆ, ಟಿಕೆಟ್ ಕೌಂಟರ್, ಬ್ಯಾಗೇಜ್ ಕೌಂಟರ್, ಚೆಕ್ಕಿಂಗ್ ವಿಭಾಗ, ಬ್ಯಾಗೇಜ್ ಕ್ಲೇಮ್ ಬೆಲ್ಟ್, ಕನ್ವೇಯರ್ ಬೆಲ್ಟ್, ಬ್ಯಾಗೇಜ್ ಎಕ್ಸ್‌ರೇ
ಮಷಿನ್ ಜತೆಗೆ ಶಾಪಿಂಗ್ ಮಳಿಗೆಗಳು ಸಿದ್ಧವಾಗುತ್ತಿವೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಶಶಿಕಾಂತ ಬಂಬುಳಗೆ