ಕುಂದಾಪುರ: ಕಳೆದೆರಡು ತಿಂಗಳಿನಿಂದ ಕೋಡಿ ಲೈಟ್ ಹೌಸ್ ಸಮುದ್ರ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು ಬುಧವಾರ ರಾತ್ರಿ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಮೂಲಕ ಎರಡು ತಿಂಗಳ ಶ್ರಮ ಸಾರ್ಥಕವಾಗಿದೆ.
ಜನವರಿಯಿಂದ ಮಾರ್ಚ್ ತನಕ ಕೋಡಿ ಲೈಟ್ ಹೌಸ್ ಬಳಿಯ ಕಡಲ ತೀರದಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ 11 ಕಡೆ ಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟಿದ್ದವು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ, ಎಫ್ಎಸ್‌ಎಲ್ ಇಂಡಿಯಾ, ರೀಫ್ ವಾಚ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಮೊದಲಾದ ಸಂಸ್ಥೆಗಳ ಗಮನಕ್ಕೆ ತಂದಿದ್ದು ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸಿ ಸಂರಕ್ಷಿಸಲಾಗಿತ್ತು. ಪ್ರತ್ಯೇಕವಾಗಿ ಸಾವಿರಾರು ಮೊಟ್ಟೆಗಳು ವಿವಿಧ ದಿನಗಳಲ್ಲಿ ಪತ್ತೆಯಾಗಿದ್ದು ಪತ್ತೆಯಾದ ದಿನವೇ ಪ್ರತ್ಯೇಕ ಹ್ಯಾಚರಿ ನಿರ್ಮಿಸಲಾಗುತ್ತಿತ್ತು.
ಬುಧವಾರ ರಾತ್ರಿ 2 ಹ್ಯಾಚರಿಗಳಿಂದ ಒಟ್ಟು 120 ಕಡಲಾಮೆ ಮರಿಗಳು ಮೊಟ್ಟೆಯೊಡೆದು ಹೊರ ಬಂದಿದ್ದು ನೈಸರ್ಗಿಕವಾಗಿ ಕಡಲು ಸೇರಲು ಅಧಿಕಾರಿಗಳು, ಸಂಸ್ಥೆಯವರು, ಸಾರ್ವಜನಿಕರು ಒಗ್ಗೂಡಿ ಅನುವು ಮಾಡಿಕೊಟ್ಟರು. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ನೇತೃತ್ವದಲ್ಲಿ ಸಿಬಂದಿ ಹಾಗೂ ಎಫ್.ಎಸ್.ಎಲ್. ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ತಡರಾತ್ರಿ 9.30ರಿಂದ ಮುಂಜಾವ 4.30ರ ತನಕ ಸ್ಥಳದಲ್ಲಿ ಬೀಡುಬಿಟ್ಟಿದ್ದರು.
ಜ. 22ರಿಂದ ಮಾ. 3ರ ವರೆಗೂ ಮೊಟ್ಟೆ ಗಳು ಪತ್ತೆಯಾಗಿತ್ತು. ಈ ಪೈಕಿ ಜ.24ಕ್ಕೆ ನಿರ್ಮಿಸಿದ ಹ್ಯಾಚರಿಯಲ್ಲಿ 19 ಮರಿಗಳು ಹಾಗೂ ಜ. 26ರ ಹ್ಯಾಚರಿಯಿಂದ 101 ಮರಿ ಹೊರಕ್ಕೆ ಬಂದು ಕಡಲು ಸೇರಿದ್ದು ಇನ್ನು ಹಂತಹಂತವಾಗಿ ಮೊಟ್ಟೆಯೊಡೆದು ಮರಿಗಳು ಹೊರಬರುವ ನಿರೀಕ್ಷೆ ಇದೆ.
ಸಾಮಾನ್ಯವಾಗಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ, ಅಂತಿಮ ಫಲಿತಾಂಶದ ನಿಟ್ಟಿನಲ್ಲಿ 2 ತಿಂಗಳಿನಿಂದ ಮುತುವರ್ಜಿ ವಹಿಸಿದ್ದು ಮಾತ್ರವಲ್ಲದೇ ಮರಿಯೊಡೆಯುವ ದಿನಾಂಕ ಸಮೀಪ ವಾದ ಕಾರಣ ಕಳೆದೊಂದು ವಾರದಿಂದ ರಾತ್ರಿ ಕಾಯುತ್ತಿದ್ದ ಅರಣ್ಯ ಇಲಾಖೆ, ವಿವಿಧ ಸಂಸ್ಥೆ, ಸ್ಥಳೀಯರ ಕಾರ್ಯ ಸಾರ್ವ ಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.