Advertisement
ದಿನನಿತ್ಯ ಸಾವಿರಾರು ಮಂದಿ ಆಗಮಿಸುವ ತಣ್ಣೀರುಬಾವಿ, ಪಣಂಬೂರು ಕಡಲ ತೀರದಲ್ಲಿ ಬೀದಿ ನಾಯಿಗಳು, ಬೀಡಾಡಿ ದನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಕ್ಕಳಿಗೆ ಈಗಾಗಲೇ ಪರೀಕ್ಷೆ ಮುಗಿದು ರಜೆ ಪ್ರಾರಂಭವಾಗಿದ್ದು, ಅವರು ಬೀಚ್‌ನಲ್ಲಿ ಆಟವಾಡುವಾಗ ಬೀದಿನಾಯಿಗಳು ಹತ್ತಿರ ಬರುತ್ತಿದ್ದು, ಇದರಿಂದಾಗಿ ಅವರನ್ನು ಬೀಚ್‌ಗೆ ಕರೆತರಲು ಹೆತ್ತವರು ಆತಂಕಪಡುವಂತಾಗಿದೆ.
ಬೀಚ್‌ಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳು, ಪ್ಲಾಸ್ಟಿಕ್ ಚೀಲಗಳು ಸಹಿತ ತ್ಯಾಜ್ಯಗಳು ಬಿದ್ದಿದ್ದು, ಹೆಚ್ಚಿನ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಲಾಗಿದ್ದರೂ ಬುಟ್ಟಿಯಿಂದಲೇ ದನಗಳು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತಿವೆ. ಬೀಚ್ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳಿಂದಾಗಿ ನಗರದ ಸ್ವತ್ಛತೆಗೂ ಹಾನಿಯಾಗುತ್ತಿದೆ. ಬಳಸಿದ ಪ್ಲಾಸ್ಟಿಕ್, ಇತರ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ 4ರಿಂದ 5 ಮೈಕ್ರಾನ್ ಪ್ಲಾಸ್ಟಿಕ್ ಚೀಲಗಳ ಮಾರಾಟ ನಿಷೇಧವಿದೆ. ಈ ಪ್ರಮಾಣದ ಪ್ಲಾಸ್ಟಿಕ್‌ಗಳನ್ನು ಯಾವುದೇ ಅಂಗಡಿಗಳಲ್ಲಿ ಮಾರಾಟ ಮಾಡಬಾರದು. ಒಂದು ವೇಳೆ, ಮಾರಾಟ ಮಾಡಿದರೆ ಅಂಗಡಿ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ನಿಯಮ 2015- 16ರಲ್ಲಿ ಜಾರಿಗೆ ಬಂದಿದೆ. ಅಲ್ಲದೆ, ಅಂಡಿಗಳಿಗೆ ಪರವಾನಿಗೆ ನೀಡುವ ವೇಳೆ ಪ್ಲಾಸ್ಟಿಕ್ ಬಳಸಬಾರದು ಎಂಬ ಸ್ಪಷ್ಟ ನಿಯಮ, ಎಚ್ಚರಿಕೆಯನ್ನೂ ಪಾಲಿಕೆ ನೀಡುತ್ತದೆ. ಆದರೆ ನಗರದ ಹೆಚ್ಚಿನ ಅಂಗಡಿಯವರು ಈ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ. ಇಂತಹ ಪ್ಲಾಸ್ಟಿಕ್ ಅನ್ನು ಗ್ರಾಹಕರು ರಸ್ತೆ ಬದಿಗಳಲ್ಲಿ, ಬೀಚ್‌ಗಳಲ್ಲಿ ಬಿಸಾಡುತ್ತಾರೆ.
Related Articles
ಕೆಲವು ತಿಂಗಳ ಹಿಂದೆಯಷ್ಟೇ ಬೈಕಂಪಾಡಿ, ಪಣಂಬೂರು ಪರಿಸರದಲ್ಲಿ ಸುತ್ತಾಡುತ್ತಿದ್ದ ಗೂಳಿ ಕೊಂಬು ಕ್ಯಾನ್ಸರ್‌ನಿಂದ ಸಾವನ್ನಪ್ಪಿತ್ತು. ಇದರ ಪೋಸ್ಟ್‌ಮಾರ್ಟಂ ಮಾಡಿದಾಗ ಹೊಟ್ಟೆಯಲ್ಲಿ 20 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್, ಲೋಹದ ವಸ್ತುಗಳಿದ್ದವು. ಬೈಕಂಪಾಡಿಯ ಗೂಳಿಯ ಕೊಂಬಿನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್‌ಗೆ ಅದು ತಿಂದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಾಸಾಯನಿಕ ಮಿಶ್ರಿತ ವಸ್ತುಗಳು ಕಾರಣವಾಗಿತ್ತು.
Advertisement
ಪ್ರಾಣಿಗಳನ್ನು ಬಿಡಬಾರದುಬೀಚ್ಗಳಿಗೆ ಬರುವ ಪ್ರವಾಸಿಗರು ನಾಯಿಗಳಿಗೆ ಆಹಾರ ನೀಡುತ್ತಾರೆ. ಇದೇ ಕಾರಣಕ್ಕೆ ನಾಯಿಗಳು ಅಲ್ಲೇ ಇರುತ್ತವೆ. ದನಗಳನ್ನು ಅಥವಾ ನಾಯಿಗಳನ್ನು ಸಾಕುವ ಮಂದಿ ಅವುಗಳನ್ನು ಹೊರಗಡೆ ಬಿಡಬಾರದು. ರಾತ್ರಿ ಸಮಯದಲ್ಲಿ ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಾಗಿ ನಾಯಿಗಳ ಕಾಟ ಇರುತ್ತದೆ.
– ಯತೀಶ್ ಬೈಕಂಪಾಡಿ,
ಪಣಂಬೂರು ಬೀಚ್ ಅಭಿವೃದ್ಧಿ ನಿಗಮದ ಸಿಇಒ ಸ್ವಚ್ಛತೆಯ ಅರಿವು
ಬಿಚ್ ಸಹಿತ ಸಾರ್ವಜನಿಕ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಈಗಾಗಲೇ ಅರಿವು ಮೂಡಿಸಲಾಗುತ್ತಿದೆ. ಸಂಘ ಸಂಸ್ಥೆಗಳ ಜತೆ ಸೇರಿ ಬೀಚ್ ಸ್ವಚ್ಛತೆ ಕೂಡ ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡಬಾರದು, ಎಲ್ಲೆಂದರಲ್ಲಿ ಬಿಸಾಡಬಾರದು ಎಂದು ಸಾರ್ವಜನಿಕರಿಗೆ ಅರಿವಾಗಬೇಕು.
- ಜಯಪ್ರಕಾಶ್ ನಾಯಕ್,
ಮಾಲಿನ್ಯ ನಿಯಂತ್ರಣ ಮಂಡಳಿ, ಹಿರಿಯ ವೈಜ್ಞಾನಿಕ ಅಧಿಕಾರಿ