Advertisement

ಹೊಸ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಇರಲಿ ಎಚ್ಚರಿಕೆ

12:46 AM Nov 29, 2021 | Team Udayavani |

ಎಲ್ಲವೂ ಸರಿಯಾಗುತ್ತಿದೆ, ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಭಾವಿಸುತ್ತಿರುವಾಗಲೇ ಧುತ್ತೆಂದು ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಇದು, ಇಡೀ ಜಗತ್ತಿಗೇ ವ್ಯಾಪಿಸುವ ಲಕ್ಷಣಗಳು ಕಾಣಿಸುತ್ತಿವೆ. ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡಿರುವ ಅಮೆರಿಕ, ಇಂಗ್ಲೆಂಡ್‌ನ‌ಂಥ ದೇಶಗಳೇ ಈ ಹೊಸ ರೂಪಾಂತರಿ ಬಗ್ಗೆ ಆತಂಕಕ್ಕೀಡಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯೂ ಈ ರೂಪಾಂತರಿ ಕಳವಳಕಾರಿ ಎಂದು ಹೇಳಿದ್ದು ಎಲ್ಲೆಡೆ ಭೀತಿಯ ವಾತಾವರಣ ನಿರ್ಮಾಣವಾಗಿದೆ.

Advertisement

ಭಾರತದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಎಲ್ಲಿಯೂ ಇನ್ನು ಒಮಿಕ್ರಾನ್‌ ರೂಪಾಂತರಿ ಕಾಣಿಸಿಕೊಂಡಿಲ್ಲ. ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿರುವ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದೆಯಾದರೂ ಇದು ಒಮಿಕ್ರಾನ್‌ ರೂಪಾಂತರಿಯೇ ಎಂಬುದು ಖಚಿತವಾಗಿಲ್ಲ. ಈ ಇಬ್ಬರ ಮಾದರಿಯನ್ನು ವಂಶವಾಹಿ ಪತ್ತೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಇನ್ನೂ ವರದಿ ಬರಬೇಕಿದೆ. ಹೀಗಾಗಿ ದೇಶದಲ್ಲಿ ಸದ್ಯ ಒಮಿಕ್ರಾನ್‌ ಭೀತಿ ಆವರಿಸಿಲ್ಲ.

ಆದರೂ ಶನಿವಾರವೇ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಡಿ.15ರಂದು  ಶುರುವಾಗಬೇಕಿರುವ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಧಾರ ಮರುಪರಿಶೀಲಿಸುವಂತೆ ಹೇಳಿದ್ದಾರೆ. ಹಾಗೆಯೇ ಪರೀಕ್ಷೆ ಹೆಚ್ಚಳ, ಇನ್ನೂ ಲಸಿಕೆ ಪಡೆಯದಿರುವವರನ್ನು ಹುಡುಕಿ ಅವರಿಗೆ ನೀಡು ವಂಥ ಕೆಲಸ ಮಾಡಲು ಸೂಚಿಸಿದ್ದಾರೆ. ಇತ್ತ ರಾಜ್ಯ ಸರಕಾರದ ಮಟ್ಟದಲ್ಲಿಯೂ ಶನಿವಾರವೇ ಹೊಸ ತಳಿಯ ಆತಂಕದ ಕುರಿತಂತೆ ಸಭೆಗಳಾಗಿವೆ. ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಸೂಚಿಸಿದೆ.

ಇದನ್ನೂ ಓದಿ:ವೈನ್‌ ಆರ್ಡರ್‌ ಮಾಡಿದ ನಟಿ ಖಾತೆಯಿಂದ 3 ಲಕ್ಷ ಕದ್ದ ಖದೀಮರು

ಈ ಎಲ್ಲ ಬೆಳವಣಿಗೆಗಳನ್ನು ಕೂಲಂಕಶವಾಗಿ ಅವಲೋಕಿಸಿದರೆ, ಒಮಿಕ್ರಾನ್‌ ಭೀತಿ ತುಸು ಹೆಚ್ಚೇ ಇರುವುದು ಕಂಡುಬರುತ್ತಿದೆ. ಅದರಲ್ಲೂ ಸ್ವತಃ ವಿಜ್ಞಾನಿಗಳೇ ಈ ರೂಪಾಂತರಿ ಬಗ್ಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರೂ ಸರಕಾರದ ಅಗತ್ಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ.

Advertisement

ಈ ಸಂದರ್ಭದಲ್ಲಿ ನಾವು ಎಲ್ಲರೂ ಎರಡನೇ ಅಲೆಯನ್ನು ನೆನಪಿಸಿಕೊಳ್ಳಲೇಬೇಕು. ಆಗಲೂ ಕೊರೊನಾ ಮೇಲಿದ್ದ ಭಯ ದೂರವಾಗಿ ಜನ ನಿರಾಳವಾಗಿ ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ವರ್ತನೆ ಮಾಡಲು ಶುರು ಮಾಡಿದ್ದರು. ಇದು ಕೊರೊನಾ ವೇಗವಾಗಿ ಹಬ್ಬಲು ಕಾರಣವಾಯಿತು. ಅಲ್ಲದೇ ಸರಿಯಾಗಿ ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಜನ ನರಳಾಡುವಂತಾಯಿತು. ಎಷ್ಟೋ ಮಂದಿ ಹಾಸಿಗೆ, ಆಮ್ಲಜನಕ ಸಿಗದೇ ಮೃತಪಟ್ಟರು.

ಹೀಗಾಗಿಯೇ ಈಗ ಎದುರಾಗಿರುವ ಒಮಿಕ್ರಾನ್‌ ರೂಪಾಂತರಿ ಬಗ್ಗೆ ಜನತೆ ಹಗುರವಾಗಿ ಪರಿಗಣಿಸಬಾರದು. ಈಗ ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಈಗಂತೂ ಶಾಲೆ-ಕಾಲೇಜುಗಳೂ ನಡೆಯುತ್ತಿವೆ. ಅಲ್ಲಿಯೂ ಎಲ್ಲ ರೀತಿಯ ನಿಬಂಧನೆಗಳನ್ನು ಜಾರಿ ಮಾಡಿಕೊಂಡೇ ಕಾರ್ಯ ನಿರ್ವಹಿಸಬೇಕು. ಈ ಬಾರಿ ಕೊಂಚ ಎಡವಿದರೂ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿ ಎಂಬುದು ಸತ್ಯ.

Advertisement

Udayavani is now on Telegram. Click here to join our channel and stay updated with the latest news.

Next