Advertisement

ಕಾನೂನು ಶೋಷಿತ ಮಹಿಳೆಯರ ದನಿಯಾಗಲಿ

09:12 PM Jan 14, 2020 | Lakshmi GovindaRaj |

ತುಮಕೂರು: ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನವಿದೆ, ಹೆಣ್ಣಿನಲ್ಲಿರುವ ಶಕ್ತಿಯಿಂದ ಇಂದು ಮಹಿಳೆ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದ್ದು, ಅದಕ್ಕಾಗಿ ಈ ಕಾನೂನು ಮಹಿಳೆಯರ ಆತ್ಮರಕ್ಷಣೆ ಮತ್ತು ಸ್ವಾಭಿಮಾನದ ರಕ್ಷಣೆಗೆ ಉಪಯೋಗವಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಹೇಳಿದರು.

Advertisement

ತುಮಕೂರು ವಿಶ್ವವಿದ್ಯಾನಿಲಯದ ಸರ್‌ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ರಕ್ಷಣೆಗಾಗಿ ಇರುವ ದೇಶದ ಕಾನೂನು ಶೋಷಿತ ಮಹಿಳೆಯರ ಧ್ವನಿಯಾಗಬೇಕು ಎಂದು ನುಡಿದರು.

ಮಹಿಳೆಯರಿಗೆ ಓಳ್ಳೆಯ ಸ್ಥಾನ: ಕಾನೂನಿನ ಸದುಪಯೋಗ ಆಗಬೇಕೇ ಹೊರತು ಇದರಿಂದ ಸಂಸಾರದ ಸಂಬಂಧ ಬಿಗಡಾಯಿಸುವಂತಾಗಬಾರದೆಂದು ದೇಶದಲ್ಲಿ ಮಹಿಳೆಯರಿಗೆ ಒಳ್ಳೆಯ ಸ್ಥಾನಮಾನವಿರುವುದಕ್ಕೆ ನಮ್ಮ ಎಲ್ಲಾ ದೇವತೆಗಳ ಹೆಸರು ಮತ್ತು ನದಿಗಳ ಹೆಸರು ಹೆಣ್ಣಿನದೇ ಆಗಿದೆ ಎಂದರು. ಹೆಣ್ಣಿನಲ್ಲಿರುವ ಶಕ್ತಿ ಎಲ್ಲಾ ರಂಗಗಳಲ್ಲೂ ತನ್ನದೇ ಆದ ಕಾರ್ಯವೈಖರಿಯಿಂದ ಗುರುತಿಸಲ್ಪಟ್ಟಿದೆ. ಅದಕ್ಕಾಗಿ ಈ ಕಾನೂನು ಮಹಿಳೆಯರ ಆತ್ಮರಕ್ಷಣೆ ಮತ್ತು ಸ್ವಾಭಿಮಾನದ ರಕ್ಷಣೆಗೆ ಉಪಯೋಗವಾಗಬೇಕೆಂದು ಅಭಿಪ್ರಾಯಪಟ್ಟರು.

ಮಹಿಳೆಯರ ಗೌರವಿಸಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಪಿ. ಲಕ್ಷ್ಮಮ್ಮ ಮಾತನಾಡಿ, ಸಮಾಜದಲ್ಲಿ ಮಹಿಳೆಯರನ್ನು ಅಕ್ಕ, ತಂಗಿ, ತಾಯಿ ಎಂದು ಭಾವಿಸಿ ಸಮಾನವಾಗಿ ಕಾಣುವುದರ ಜೊತೆಗೆ ಗೌರವ ನೀಡುವುದರಿಂದ ಒಂದು ಸುಸಂಸ್ಕೃತ ಸಮಾಜ ನಿರ್ಮಾಣವಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಆಯೋಗಕ್ಕೆ ಪ್ರತಿದಿನ 100 ರಿಂದ 150 ದೂರುಗಳ ದಾಖಲಾಗುತ್ತಿದ್ದು, ಪ್ರಸಕ್ತ ವರ್ಷ 9000 ಇಂತಹ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು. ಮಹಿಳೆಯರ ದೂರು ವಿಷಯದಲ್ಲಿ ಅರ್ಜಿ ಸ್ವೀಕಾರ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿಯಿದ್ದು, ನೋಂದ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಲು ದೂರು ನೀಡಬಹುದಾಗಿದೆ ಎಂದರು.

ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ: ತುಮಕೂರು ವಿ.ವಿ. ಕುಲಪತಿ ಪೊ›. ವೈ.ಎಸ್‌.ಸಿದ್ದೇಗೌಡ ಮಾತನಾಡಿ, ಶೇ.50ರಷ್ಟು ಇರುವ ಮಹಿಳೆಯರು ದೇಶದ ಅಭಿವೃದ್ಧಿಗಾಗಿ ಎಲ್ಲಾ ರಂಗಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಸ್ವಾವಲಂಬಿ ಬದುಕನ್ನು ಮಹಿಳೆಯರು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಹೊಸ ಸಮಾಜ ನಿರ್ಮಾಣಕ್ಕೆ ಹೆಣ್ಣಿನ ಪಾತ್ರ ಮುಖ್ಯ: ದೇಶದ ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿಯೇ ಅನೇಕ ಕಾನೂನುಗಳಿದ್ದು, ಈ ಕಾನೂನುಗಳ ಅನುಷ್ಠಾನ ಫ‌ಲಪ್ರದವಾಗಿ ಆಗಬೇಕಾಗಿದೆ, ಹೆಣ್ಣು ಕಲಿತರೆ ಒಂದು ಕುಟುಂಬ, ಸಮಾಜ ಸುಶಿಕ್ಷಿತರಾದಂತೆ ಆಗುತ್ತದೆ .ಸ್ವಾಮಿ ವಿವೇಕಾನಂದರು ಹೇಳುವಂತೆ ನಮ್ಮ ಜೀವನದ ಶಿಲ್ಪಿಗಳು ನಾವೇ ಆಗಬೇಕು ಎಂಬ ಮಾತನ್ನು ಅರಿತಿರುವ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಹೊಸ ಸಮಾಜ ನಿರ್ಮಾಣಕ್ಕೆ ಹೆಣ್ಣಿನ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.

ಸುದೀರ್ಘ‌ ಉಪನ್ಯಾಸ: ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕುರಿತು ನಗರದ ವರದಕ್ಷಿಣೆ ವಿರೋಧಿ ವೇದಿಕೆಯ ವಕೀಲರು ಹಾಗೂ ಕಾರ್ಯದರ್ಶಿ ಸಾ.ಚಿ. ರಾಜ್‌ಕುಮಾರ್‌, ಹೆಣ್ಣು ಭ್ರೂಣ ಹತ್ಯೆ, ಪ್ಲಾಸ್ಟಿಕ್‌ ನಿಷೇಧ ಸ್ವಚ್ಛತೆ ಕುರಿತು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಹಾಗೂ ಮಕ್ಕಳ ತಜ್ಞೆ ಡಾ. ಎಂ. ರಜನಿ, ಜೀವನಾಂಶ, ಆಸ್ತಿಯ ಹಕ್ಕು,

ಮಹಿಳೆಯರ ಅನೈತಿಕ ಸಾಗಾಟ ತಡೆ ಕಾಯ್ದೆ ಹಾಗೂ ಮಹಿಳೆಯರಿಗಾಗಿ ಇರುವ ಇತರೆ ಕಾನೂನುಗಳ ಕುರಿತು ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್‌. ರಮೇಶ್‌ ಹಾಗೂ ಕೌಟುಂಬಿಕ ದೌರ್ಜನ್ಯ ತಡೆಕಾಯ್ದೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ ಕೆ.ಎಚ್‌. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾಯ್ದೆಗಳ ಕುರಿತು ಸುದೀರ್ಘ‌ವಾದ ಉಪನ್ಯಾಸ ನೀಡಿದರು.

ವಿಶ್ವವಿದ್ಯಾನಿಲಯದ ಕುಲಸಚಿವ ಪೊ›. ಕೆ.ಎನ್‌. ಗಂಗಾನಾಯಕ್‌, ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪೊ›. ಕೆ,ಜಿ. ಪರಶುರಾಮ್‌, ಡಿವೈಎಸ್‌ಪಿ ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್‌. ನಟರಾಜ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪುರುಷ – ಮಹಿಳೆ ಸಮಾನರೆಂದು ಭಾವಿಸಬೇಕು: ಸಮಾಜದಲ್ಲಿ ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ತಾಯಿಯಂತೆ ಭಾವಿಸಿದಾಗ ಕೌಟುಂಬಿಕ ಜಗಳಗಳಾಗಲು ಸಾಧ್ಯವಿಲ್ಲ. ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಮಹಿಳೆಯರಿಂದ ಉಳಿದುಬಂದಿದ್ದು ಅದನ್ನು ವಿದೇಶಿಯರು ಗೌರವಿಸುತ್ತಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು,

ಪುರುಷ ಮತ್ತು ಮಹಿಳೆ ಸಮಾನರೆಂದು ಭಾವಿಸ ಬೇಕೇ ಹೊರತು ಸ್ಪರ್ಧೆಗೆ ಇಳಿಯಬಾರದೆಂದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಎಸ್‌. ಕುಂದರ್‌ ಕಿವಿಮಾತು ಹೇಳಿ.ಇತ್ತೀಚಿನ ಮೊಬೈಲ್‌ ಬಳಕೆಯಿಂದ ಸಾಂಸಾರಿಕ ಸಂಬಂಧ ಬಿಗಡಾಯಿಸುತ್ತಿದ್ದು, ಮೊಬೈಲ್‌ ಸದ್ಬಳಕೆ ಆಗಬೇಕು ಅದು ನಮ್ಮ ಜೀವನಕ್ಕೆ ಮುಳುವಾಗಬಾರೆದೆಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next