Advertisement

ಸಂಭಾವ್ಯ ಕೋವಿಡ್‌ ಅಲೆ ತಡೆಗೆ ಸನ್ನದ್ಧರಾಗಿರಿ

12:59 PM Dec 28, 2022 | Team Udayavani |

ದೇವನಹಳ್ಳಿ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ ವೈರಾಣು ರೂಪಾಂತರಗೊಂಡ ತಳಿಯಲ್ಲಿ ಮತ್ತೆ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಗೋಚರಿಸಿದೆ. ಸಂಭಾವ್ಯ ಕೋವಿಡ್‌ ಅಲೆ ತಡೆಯಲು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸನ್ನದ್ಧರಾಗಿರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್‌.ಲತಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್‌ ಮುಂಜಾಗ್ರತಾ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್‌ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಚಿಕಿತ್ಸೆ, ಔಷಧ ನೀಡಲು ಸೂಕ್ತ ಆರೋಗ್ಯ ಸೇವಾ ವ್ಯವಸ್ಥೆ ಸುಸ್ಥಿತಿಯಲ್ಲಿರಬೇಕು ಎಂದರು.

Advertisement

ಕೋವಿಡ್‌ ಕೇರ್‌ ಸೆಂಟರ್‌: ಪ್ರಸ್ತುತ ಜಗತ್ತಿನ ಕೆಲವು ದೇಶಗಳಲ್ಲಿ ಕಂಡು ಬರುತ್ತಿರುವ ಬಿ.ಎಫ್.7 ಹೆಸರಿನ ಕೋವಿಡ್‌ ರೂಪಾಂತರಿ ತಳಿಯ ಚಿಕಿತ್ಸೆಗೆ ಸಕಾಲದಲ್ಲಿ ವೈದ್ಯಕೀಯ ಸೇವೆಗಳ ತುರ್ತು ಅಗತ್ಯವಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ಐಸಿಯುಗಳು, ಆಕ್ಸಿನೇಟೆಡ್‌ ಬೆಡ್‌, ಲ್ಯಾಬೋರೇಟರಿ, ಮೇಕ್‌ ಶಿಪ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌, ಆರೋಗ್ಯ ಪರಿಕರಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಮಾಹಿತಿ ಪಡೆದುಕೊಂಡರು.

ಸಕಾಲಕ್ಕೆ ಉತ್ತಮ ಚಿಕಿತ್ಸೆ: ಕೋವಿಡ್‌ ಅಲೆಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಉತ್ತಮ ಸೇವೆಗಾಗಿ ಸರ್ಕಾರ ಮತ್ತು ಖಾಸಗಿ ದಾನಿಗಳಿಂದ ಪಡೆದ ಅನೇಕ ಚಿಕಿತ್ಸಾ, ಉಪಕರಣಗಳು, ಆಕ್ಸಿಜನ್‌ ಕಾನ್ಸಂಟೇಟರ್‌ ಉತ್ತಮ ಸ್ಥಿತಿಯಲ್ಲಿವೆ. ಆಕ್ಸಿಜನ್‌ ಪ್ಲಾಂಟ್‌ಗಳ ನಿರ್ವಹಣೆಯು ಸುಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಕೋವಿಡ್‌ ರೋಗವನ್ನು ಸಮರ್ಥವಾಗಿ ನಿಭಾಯಿಸಿ, ಸಾರ್ವಜನಿಕರಿಗೆ ಸಕಾಲಕ್ಕೆ ಉತ್ತಮ ಚಿಕಿತ್ಸೆ ನೀಡಲಿದೆ ಎಂದು ಹೇಳಿದರು.

ಸಚಿವರಿಗೆ ಪ್ರಸ್ತಾವನೆ ಸಲ್ಲಿಸಬೇಕು: ಜಿಲ್ಲೆಯಲ್ಲಿ ಕೋವಿಡ್‌ ಮೂಲಸೌಕರ್ಯ, ಮಾನವ ಸಂಪ ನ್ಮೂಲ ಲಭ್ಯತೆ, ಕೋವಿಡ್‌-19 ಪ್ರಕರಣಗಳ ಸಮಯೋಚಿತ ನಿರ್ವಹಣೆಗಾಗಿ ಔಷಧಿಗಳು ಮತ್ತು ಲಾಜಿಸ್ಟಿಕ್ ಸಿದ್ಧತೆ ಮತ್ತು ಮೇಲ್ವಿಚಾರ ಣೆಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಸಿಬ್ಬಂದಿ, ಪರಿಕರಗಳ ಕೊರತೆ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆ ಆಯುಕ್ತರಿಗೆ, ಆರೋಗ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಿ: ಜ್ವರ, ಕೆಮ್ಮು, ನೆಗಡಿ, ದೇಹನೋವು, ತಲೆನೋವು, ರುಚಿ ಮತ್ತು ವಾಸನೆಯ ನಷ್ಟ, ಅತಿಸಾರ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡು ಬಂದರೆ ಅವರು ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್‌-19ರ ಮುನ್ನೆಚ್ಚರಿಕಾ ಡೋಸ್‌ನ್ನು ಉಚಿತವಾಗಿ ನೀಡಲಾಗುತ್ತಿದೆ. ಎರಡನೇ ಡೋಸ್‌ ಪಡೆದು 6 ತಿಂಗಳು ಪೂರೈಸಿದ ಪಲಾನುಭವಿಗಳು ಮುನ್ನೆ ಚ್ಚರಿಕಾ ಡೋಸುಗಳನ್ನು ಪಡೆಯಬಹುದಾಗಿದೆ. ಕೋವಿಡ್‌-19 ನಿಯಂತ್ರಣದಲ್ಲಿಡಲು ಲಸಿಕೆ ಯನ್ನು ಹಾಕಿಸಿಕೊಳ್ಳುವುದು ಅಗತ್ಯವಾಗಿರುವು ದರಿಂದ ಜಿಲ್ಲೆಯ ಸಾರ್ವಜನಿಕರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜೇಂದ್ರ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು. ‌

Advertisement

ಕಡ್ಡಾಯವಾಗಿ ಮಾಸ್ಕ್ ಧರಿಸಿ: ಜಿಲ್ಲಾಧಿಕಾರಿ : ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಪರೀಕ್ಷೆ ನಡೆಸಿ, ಕೊರೋನಾ ಸೋಂಕಿತರು ಪತ್ತೆಯಾದರೆ ತಕ್ಷಣವೇ ಕ್ವಾರಂಟೈನ್‌ನಲ್ಲಿರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಹಾಗೂ ಬೂಸ್ಟರ್‌ ಡೋಸ್‌ ವ್ಯಾಕ್ಸಿನೇಷನ್‌ ಸರಬರಾಜುಗಳಿಗೆ ಅನುಗುಣವಾಗಿ ಲಸಿಕೆ ನೀಡಿಕೆ ಕಾರ್ಯವನ್ನು ವೇಗಗೋಳಿಸಬೇಕು. ಕೋವಿಡ್‌-19ರ ಹೊಸ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದ್ದು, ಸಾರ್ವಜನಿಕರು ಜನಸಂದಣಿ ಪ್ರದೇಶದಲ್ಲಿ ಕಡ್ಡಾಯವಾಗಿ ಫೇಸ್‌ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ, ಕೈ ನೈರ್ಮಲ್ಯ ಕಾಪಾಡುವಿಕೆ ಮುಂತಾದ ಕೋವಿಡ್‌ ನಿಯಂತ್ರಣ ಶಿಷ್ಟಾಚಾರ ಕ್ರಮ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next