Advertisement

ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!

03:48 PM May 28, 2021 | ಶ್ರೀರಾಜ್ ವಕ್ವಾಡಿ |

ಮನುಷ್ಯ ಗೊಂದಲ ಜೀವಿ. ಕೊರಗು ಹೆಚ್ಚು. ಚಿಂತೆ ಹೆಚ್ಚು. ಬಯಕೆ ಹೆಚ್ಚು. ಬಯಸಿದ್ದು ಸಿಗುವುದಿಲ್ಲ, ಚಿಂತೆ ಮತ್ತು ಚಿತೆಗೆ ಮಧ್ಯದಲ್ಲಿರುವ ‘ಅಂ’ ಎನ್ನುವುದೊಂದೆ ವ್ಯತ್ಯಾಸ, ಕೊರಗಿದರೇ ಕೊರಗುತ್ತಲೇ ಸಾಯಬೇಕು… ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಮನುಷ್ಯನಿಗೆ ಗೊತ್ತೇ ಇದೆ. ಆದರೂ ಕೂಡ ಮನುಷ್ಯ ಕೊರಗು, ಚಿಂತೆ, ಬಯಕೆಯಲ್ಲೇ ಬದುಕನ್ನು ದೂಡುತ್ತಾನೆ. ಮನುಷ್ಯನ ಸಹಜಗುಣವಿದು.

Advertisement

ಈ ಎಲ್ಲದರ ನಡುವೆ ಮನುಷ್ಯನೊಳಗೆ ಅಸಾಧ್ಯವಾದ ನೋವು ಕೂಡ ಇದ್ದೆ ಇರುತ್ತದೆ. ಕೆಲವೊಬ್ಬರು ತೋರಿಸಿಕೊಳ್ಳುತ್ತಾರೆ. ಕೆಲವೊಬ್ಬರು ಅದನ್ನು ಅದುಮಿಟ್ಟುಕೊಳ್ಳುತ್ತಾರೆ. ಆದರೇ, ಮನಃಶಾಸ್ತ್ರದ ಪ್ರಕಾರ ಮನುಷ್ಯ ಎಲ್ಲಾ ಭಾವನೆಗಳನ್ನು ಹೊರ ಹಾಕಿಕೊಂಡರೇ ಅಥವಾ ಅದನ್ನು ತೋರ್ಪಡಿಸಿಕೊಂಡರೇ ಅದು ಉತ್ತಮ ಎಂದು ಹೇಳುತ್ತದೆ. ಆದರೇ, ಮಾನವ ಸಂಬಂಧಗಳ ನಡುವೆ ಬದುಕುವ ಮನುಷ್ಯ ಕೆಲವೊಮ್ಮೆ ತನ್ನ ಭಾವನೆಗಳನ್ನು ತೋರಿಸಿಕೊಳ್ಳುವಾಗ ಕಾಲ, ಸ್ಥಿತಿ ಹಾಗೂ ಸಂಬಂಧದ ಬಗ್ಗೆ ಗಮನ ನೀಡಬೇಕಾಗುತ್ತದೆ.

ಎಷ್ಟೋ ಮಂದಿ ಆಡಿಕೊಳ್ಳುವುದುಂಟು ಮನುಷ್ಯ ಎಲ್ಲಾ ವಿಚಾರವನ್ನು ಅರಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕಾರಣದಿಂದಲೇ ಬಹುಶಃ ಗೊಂದಲ ಜೀವಿಯೆಂದು. ಆದರೇ, ಹಾಗಲ್ಲ. ನಾವು ಬದುಕನ್ನು ನಿಭಾಯಿಸುವುದರಲ್ಲಿ ಇರುತ್ತದೆ.

ಪ್ರತಿಯೊಬ್ಬರಿಗೂ ಯಾವುದೇ ಬಗೆಯಲ್ಲಾದರೂ ಒಂದಲ್ಲಒಂದು ನೋವು ಇದ್ದೇ ಇರುತ್ತದೆ. ಮನಸ್ಸಿಗೆ ನೋವು ಮಾಡಿದ ದಿನ, ಸಮಯ, ನೋವು ಮಾಡಿದವರು ಯಾರು? ಎಲ್ಲವೂ ಮನಸ್ಸಿನ ಪುಟಗಳಲ್ಲಿ ಉಳಿದುಕೊಂಡಿರುತ್ತವೆ. ಇದರಿಂದ ಮನಸ್ಸಿಗಾದ ನೋವು ಪುನಃ ಪುನಃ ಮರುಕಳಿಸಿ ಹೆಚ್ಚು ನೋವು ಉಂಟಾಗುತ್ತದೆ. ಅದೇ ರೀತಿ ನಾವು ಕೂಡಾ ಆಗಿರುವ ನೋವಿಗೆ ಮುಲಾಮು ಹುಡುಕದೆ ಅದನ್ನೇ ಪುನಃ ನೆನೆದು ಭಾವುಕರಾಗಿ ನೋವಿಗೀಡಾಗುತ್ತೇವೆ. ಅತಿಯಾದ ನೋವು ಮನಸನ್ನು ಘಾಸಿಗೊಳಿಸುತ್ತದೆ. ಇಲ್ಲಸಲ್ಲದ ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಗಾಯವನ್ನು ಕೆರೆದರೆ ಹೇಗೆ ಹುಣ್ಣಾಗುತ್ತದೆಯೋ ಅದೇ ರೀತಿ ನೋವು ಉಂಟಾದ ಮನಸನ್ನು ತಿಳಿಗೊಳಿಸದೆ ಪುನಃ ಪುನಃ ನೋವನ್ನು ನೆನಪು ಮಾಡಿಕೊಂಡರೆ ನೋವು ಮತ್ತಷ್ಟು ಹೆಚ್ಚಾಗುತ್ತದೆ. ದೇಹದ ಸಮತೋಲನ ತಪ್ಪುತ್ತದೆ. ಇಲ್ಲದ ಅನಿರೀಕ್ಷಿತಗಳಿಗೆ ದಾರಿ ಮಾಡಿಕೊಡುತ್ತದೆ. ಮನುಷ್ಯ ಭಾವುಕ ಜೀವಿಯಾಗಿರುವುದರಿಂದ ಹೀಗೆ ಮನುಷ್ಯನ ಬದುಕಿನಲ್ಲಿ ಕಾಣಿಸಿಕೊಳ್ಳುವುದು ಸಹಜ.

ನಮ್ಮಲ್ಲಿ ಹೆಚ್ಚಿನವರಲ್ಲಿ ಕೊರತೆ ಏನಂದರೇ, ನಾವು ನಮ್ಮ ಭಾವನೆಗಳೊಂದಿಗೆ ಸಂವಹನ ಮಾಡಿಕೊಳ್ಳುವುದಿಲ್ಲ. ನಮ್ಮ ಭಾವನೆಗಳೊಂದಿಗೆ ಸಂವಹನ ಮಾಡುವುದು ಖರ್ಚು ವೆಚ್ಚಗಳಿಲ್ಲದ ಆಪ್ತ ಸಮಾಲೋಚನೆಯದು. ನಮ್ಮನ್ನು ನಾವು ಆನಂದಿಸಿಕೊಳ್ಳುವುದಕ್ಕೆ. ನಮ್ಮನ್ನು ನಾವು ಪ್ರೀತಿಸುವುದಕ್ಕೆ ನಮ್ಮೊಂದಿಗೆ ಹಾಗೂ ನಮ್ಮ ಭಾವನೆಗಳೊಂದಿಗಿನ ಸ್ವತಃ ನಾವೇ ಸಂವಹನ ಮಾಡಿಕೊಳ್ಳುವುದು ಅತ್ಯಂತ ಉತ್ತಮ ಮಾರ್ಗ.

Advertisement

ಯಾರಲ್ಲಿಯೂ ಹೇಳಿಕೊಳ್ಳದ ಭಾವನೆಗಳನ್ನು ನಾವು ದೇವರ ಮುಂದೆ ಹೇಳಿಕೊಳ್ಳುತ್ತೇವೆ. ಆಗ ನಮಗೆ ಏನೋ ಧನಾತ್ಮಕ ಭಾವ ಸಿಗುತ್ತದೆ. ಹಾಗೆ ನಮ್ಮನ್ನು ನಾವು ಮಾತಾಡಿಸಿಕೊಂಡಾಗ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನವೇ ಬೇಕಾಗಿಲ್ಲ.

ನಮ್ಮ ಬದುಕಿನ ಹೊಸ ಹಾಡಿಗೆ ರಾಗ ಸಂಯೋಜಿಸುವವವರು ನಾವೇ ಆಗಿರಬೇಕು. ಹಾಡು ನಮ್ಮದೇ, ರಾಗವೂ ನಮ್ಮದೇ.

ಭಾವನೆಗಳಿಗೆ ಬೆಲೆ ಕಟ್ಟಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಅದನ್ನು ಅತ್ಯಂತ ಆಪ್ತತೆಯಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮನಸ್ಸು ಏನು ಹೇಳುತ್ತದೆಯೋ ಅದನ್ನು ಮಾತ್ರ ಮಾಡಿದಾಗ ಗೊಂದಲಗಳು ನಮ್ಮಿಂದ ದೂರ ಹೋಗುತ್ತದೆ.

ಆದರೇ, ನಾವು ಹಾಗಲ್ಲ. ಸಾವಿರ ಮಂದಿಗೆ ಕಿವಿಯಾಗುತ್ತೇವೆ. ಅವರು ಹೇಳಿರುವುದನ್ನೇ ವೇದವಾಕ್ಯ ಎಂದು ನಂಬಿ ನಡೆಯುತ್ತೇವೆ. ನಮ್ಮ ಮಾತನ್ನು ನಾವು ಒಂದಿಷ್ಟು ಕೂಡ ಕೇಳುವುದಿಲ್ಲ. ಯಾರೋ ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಹೋಗಿ ಎಡವಿ ಬೀಳುತ್ತೇವೆ.

“ನೆನಪಿಡಿ ಅನುಭವದ ಮಾತು ಕೇಳುವುದು ಬೇರೆ. ಬಿಟ್ಟಿ ಉಪದೇಶ ಕೇಳುವುದು ಬೇರೆ.”

ವಾಸ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಸ್ವೀಕರಿಸುವ ಮನಸ್ಸು ನಮ್ಮದಾದಾಗ ಹಾಗೂ ಅದನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡಾಗ ಗೊಂದಲದ ಗೂಡಿನಿಂದ ಆರಾಮವಾಗಿ ಹೊರಬರುವುದಕ್ಕೆ ಸಾಧ್ಯವಿದೆ.

ಸ್ವಚ್ಛಂದ ಬದುಕಿಗೆ ಇಷ್ಟೇ ಸುಲಭ ಮಾರ್ಗ. ದ್ವಂದ್ವಕ್ಕೆ ಸಿಲುಕದೇ ಬದುಕನ್ನು ಎದುರಿಸಲು ಮುಂದಾಗಿ. ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ. ನಾಳೆಗಳನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ನಿಮ್ಮ ಮನಸ್ಸಿನೊಳಗಿನ ಭಯದ ಭಾವನೆಗಿಂತ ಅತ್ಯಂತ ದೊಡ್ಡ ಸುಳ್ಳು ಈ ಜಗತ್ತಿನಲ್ಲಿಯೇ ಇಲ್ಲ.

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಇನ್ಮುಂದೆ ಪಿವಿಸಿ ಆಧಾರ್ ಕಾರ್ಡ್..!? ಇಲ್ಲಿದೆ ಸಂಪೂರ್ಣ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next