Advertisement

ಒಳ್ಳೆಯ ನಿರ್ಧಾರ ನಮ್ಮ ಬದುಕನ್ನು ನಿರ್ಧರಿಸುತ್ತದೆ, ನೆನಪಿರಲಿ ನಗು ಜೊತೆಗಿರಲಿ..!

03:45 PM Apr 02, 2021 | ಶ್ರೀರಾಜ್ ವಕ್ವಾಡಿ |

ಮನುಷ್ಯನಲ್ಲಿ ಧನಾತ್ಮಕ ಹಾಗೂ ನಕಾರಾತ್ಮಕ ಭಾವಗಳು ಇರುವುದು ಸಹಜ. ಅದು ಬದುಕಿನಲ್ಲಿ ಸಾಮಾನ್ಯ. ಅವುಗಳು ನಮ್ಮ ಇರುವಿಕೆಯ ಮೇಲೆ ಆಧಾರವಾಗಿರುತ್ತವೆ. ಮತ್ತು ನಮ್ಮ ಸುತ್ತಮುತ್ತಲಿನ ವಾತಾವರಣದ ಪ್ರಭಾವದಿಂದಲೂ ಆಗುವ ಸಾಧ್ಯತೆ ಇದೆ.

Advertisement

ಧನಾತ್ಮಕತೆ ನಮ್ಮನ್ನು ಬೆಳೆಸುತ್ತದೆ. ನಕಾರಾತ್ಮಕತೆ ನಮ್ಮನ್ನು ಕುಗ್ಗಿಸುತ್ತದೆ. ನಕಾರಾತ್ಮಕ ಚಿಂತನೆಯಿಂದ ಸಕಾರಾತ್ಮಕ ಫಲ ಸಿಕ್ಕ ಯಾವ ಉದಾಹರಣೆಯೂ ನಮ್ಮ ಮುಂದಿಲ್ಲ. ಹಾಗಾಗಿ ನಮ್ಮೊಳಗೆ ಧನಾತ್ಮಕತೆಯ ಅಲೆ ಎಂದಿಗೂ ನಮ್ಮ ಮನಸ್ಸನ್ನು ಸ್ಪರ್ಶಿಸುತ್ತಲೇ ಇರಬೇಕು.

ನಕಾರಾತ್ಮಕ ಭಾವನೆಗಳು ನಮ್ಮನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ಯುತ್ತದೆ. ಅವು ನಮ್ಮ ಮನಸ್ಸನ್ನು ಕೆಡಿಸುವುದರ ಜೊತೆಗೆ ನಮ್ಮ ನೆಮ್ಮದಿ, ಸಮಾಧಾನಗಳನ್ನು ಕೂಡ ಕಸಿದುಕೊಳ್ಳುತ್ತದೆ. ಭರವಸೆಯನ್ನು ಅಳಿಸಿ ಹಾಕುತ್ತದೆ.

ನಕಾರಾತ್ಮಕ ಭಾವಗಳಿಂದ ಹೊರಬರಲು ನಾವು ಗುಡ್ಡೆ ಕಡಿಯಬೇಕೆಂದಿಲ್ಲ. ನಮ್ಮ ಇರುವಿಕೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನಾವು ಅದರಿಂದ ಹೊರಬರಬಹುದು. ಮನುಷ್ಯನಿಗೆ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ.

ಒಮ್ಮೊಮ್ಮೆ ನಕಾರಾತ್ಮಕ ಆಲೋಚನೆಗಳು ಬಿಟ್ಟೆನೆಂದರೂ ಬಿಡದ ಮಾಯೆಯಾಗಿ ನಮ್ಮನ್ನು ಕಾಡುತ್ತದೆ. ಆದರೆ, ಖಂಡಿತವಾಗಿ ಇವುಗಳಿಂದ ಹೊರಬರಲು ಹಾದಿ ಇದ್ದೇ ಇದೆ. ಹುಡುಕಿಕೊಳ್ಳುವ ಮನಸ್ಸು ಹಾಗೂ ಪ್ರಯತ್ನ ನಮ್ಮದಾಗಿರಬೇಕಷ್ಟೇ.

Advertisement

ಒಮ್ಮೆ ಅದರಿಂದ ಹೊರಬಂದರೆ ಮತ್ತೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಬದುಕಿನ ಸುಂದರವಾದ ಮುಖ ಹಾಗೂ ಗೆಲುವಿನ ಮೆಟ್ಟಿಲನ್ನು ನೀವು ಕಾಣಲು ಸಾಧ್ಯವಾಗುತ್ತದೆ.  ಭೂಮಿಯ ಮೇಲಿನ ಅದ್ಬುತ ಸಾಧನೆಗಳು ಮನುಷ್ಯನ ಮನಸ್ಸಿನ ನಿರ್ಧಾರಗಳೇ ಆಗಿರುತ್ತವೆ.

ಬದುಕನ್ನು ನಾವು ಧನಾತ್ಮಕ ಆಕಾಶ ಬುಟ್ಟಿಯಂತೆ ನಾವು ರಚಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಮ್ಮ ಬದುಕು ಸ್ವಚ್ಛಂದವಾಗಿರಲು ಸಾಧ್ಯ. ನಕಾರಾತ್ಮಕ ಆಲೋಚನೆಗಳನ್ನು ಕಿತ್ತೆಸೆಯುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಒಮ್ಮೊಮ್ಮೆ ಅವುಗಳು ನಮ್ಮನ್ನು ಹಿಂಡಿ ಹಿಪ್ಪೆಹಾಕುತ್ತವೆ. ಅದು ಅದರ ಸಹಜ ಗುಣ. ಬದಲಾಗುವುದು ಮನುಷ್ಯನ ಸಹಜ ಗುಣ. ಬದುಕನ್ನು ಇಷ್ಟಿಷ್ಟೇ ಅನುಭವಿಸುವ ಮನುಷ್ಯ, ಯಾವುದನ್ನೂ ಹೊರತಾಗಿ ಬದುಕಲು ಸಾಧ್ಯವಿಲ್ಲ. ನಕಾರಾತ್ಮಕತೆಯನ್ನೂ ಕೂಡ.

ಈ ನಕಾರಾತ್ಮಕ ಆಲೋಚನೆಗಳು ಒಮ್ಮೊಮ್ಮೆ ನಮ್ಮಲ್ಲಿನ ಪಾಪ ಪ್ರಜ್ಞೆಯಿಂದ ಬರುತ್ತದೆ. ಹಾಗಂತ ನಾವು ದೊಡ್ಡ ತಪ್ಪು ಮಾಡಿದ್ದೇವೆ ಎಂದರ್ಥವಲ್ಲ. ಎಂದೂ ಆಗದ, ಆಗಬಾರದೆಂದು ಅಂದುಕೊಂಡಿದ್ದ ಘಟನೆಗಳು ನಮ್ಮ ಬದುಕಿನಲ್ಲಿ ನಮಗೆ ಗೊತ್ತಿಲ್ಲದೇ ಆಗಿ ಹೋದಾಗ, ಆ ಕೆಟ್ಟ ನೆನಪುಗಳು ನಮ್ಮನ್ನು ಬಹಳ ಕಾಲ ಕಾಡುತ್ತವೆ. ಅದರ ಪ್ರಭಾವದಿಂದಲೇ ನಮ್ಮಲ್ಲಿ ನಕಾರಾತ್ಮಕತೆಯ ಭಾವಗಳು ಹುಟ್ಟುತ್ತವೆ ಅಷ್ಟೇ. ನೀವು ಆ ತಿಳಿಯದೇ ಮಾಡಿದ ತಪ್ಪಿನಿಂದ ಹೊರಬಂದು ಬದಲಾಗುತ್ತಿದ್ದೀರಿ ಎಂದು ನಿಮ್ಮ ಮನಸ್ಸು ನಿಮಗೆ ಹೇಳಿದರೇ, ಆ ನಕಾರಾತ್ಮಕ ಭಾವಗಳಿಗೆ ಅಂತ್ಯಕಾಲ ಬಂದಿದೆ ಎಂದರ್ಥ.

ನಾವು ಎಂದಿಗೂ ಬದುಕಿನಲ್ಲಿ ಧನಾತ್ಮಕ ಸಂಗತಿಗಳತ್ತ ಗಮನ ಹರಿಸುವುದು ಅಗತ್ಯ. ನಿಮ್ಮ ಬಳಿ ಏನಿಲ್ಲ ಎಂದು ಯೋಚಿಸುವುದಕ್ಕಿಂತ, ಎಂದಿಗೂ ತೊಂದರೆ ಆಗುತ್ತಿದೆ ಅಂದುಕೊಳ್ಳುವುದಕ್ಕಿಂತ, ನಮ್ಮ ಪ್ರಯತ್ನಗಳು ಯಾವುದೂ ಫಲಿಸುತ್ತಿಲ್ಲವೆಂದು ತಿಳಿದುಕೊಳ್ಳುವುದಕ್ಕಿಂತ… ನಿಮ್ಮಲ್ಲಿ ಈಗ ಏನಿದೆ ಎಂದು ಯೋಚಿಸುವುದು ಉತ್ತಮ. ಬದುಕಿನಲ್ಲಿ ‘ನಿನ್ನೆ’ ಹಾಗೂ ‘ನಾಳೆ’ಗಳಿಗಿಂತ ಹೆಚ್ಚು ‘ಇಂದು’ ನಮಗೆ ಮಹತ್ತರವಾದದ್ದನ್ನು ಒದಗಿಸಿ ಕೊಡುತ್ತದೆ. ಹಾಗಾಗಿ ಪ್ರಸ್ತುತತೆಯನ್ನು ಆನಂದಿಸುವ ಮನಸ್ಸು ಮಾಡುವುದು ಒಳ್ಳೆಯದು. ಆಗ ನಾವು ನಕಾರಾತ್ಮಕತೆಯಿಂದ ನಿಧಾನವಾಗಿ ಹೊರಬರುವುದಕ್ಕೆ ದಾರಿಯಾಗುತ್ತದೆ. ಹಾಗಾದರೇ, ನಾವು ಎಂದಿಗೂ ಲವಲವಿಕೆಯಿಂದ ಇರಲು, ‘ಪಾಸಿಟಿವ್ ಅಲೆ’ಗಳಲ್ಲಿ ತೇಲಾಡುತ್ತಿರಲು ಸಾಧ್ಯವಿಲ್ಲವೇ..? ನಕಾರಾತ್ಮಕ ಭಾವಗಳಿಂದ ಸಂಪೂರ್ಣವಾಗಿ ಆಚೆ ಬಂದು ಭರವಸೆಯನ್ನು ಕಾಣುವುದಕ್ಕೆ ಆಗುವುದಿಲ್ಲವೇ..? ಖಂಡಿತ ಸಾಧ್ಯವಿದೆ.

ಮನಃಶಾಸ್ತ್ರದ ಪ್ರಕಾರ, ನಾವು ಏನನ್ನು ನಿರಾಕರಿಸಬೇಕೆಂದುಕೊಂಡಿದ್ದೇವೆಯೋ ಅದರ ವಿರುದ್ಧವಾಗಿ  ಚಿಂತಿಸುವುದರಿಂದ ನಾವು ಅದನ್ನು ಸಂಪೂರ್ಣವಾಗಿ ದೂರ ಮಾಡುವುದಕ್ಕೆ ಸಾಧ್ಯವಿದೆ. ಉದಾಹರಣೆಗೆ, ನಮಗೆ ಪದೇ ಪದೆ ದುಃಖ ಆಗುತ್ತಿದ್ದರೇ, ಅದರಿಂದ ಹೊರ ಬರಲು, ‘ಐ ವಿಲ್ ಬಿ ಹ್ಯಾಪಿ ಆ್ಯಂಡ್ ಫೈನ್’ ಅಥವಾ ‘ನಾನು ಸಂತೋಷದಿಂದ ಖುಷಿಖುಷಿಯಾಗಿ ಇರುತ್ತೇನೆ’ ಎನ್ನುವ ಸಣ್ಣ ವಾಕ್ಯವನ್ನು ನಿತ್ಯ 21 ಬಾರಿ ಹೇಳುವ ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮನ್ನು ಸಂತೋಷದ ಕಡಲಿನಲ್ಲಿ ತೇಲುವ ಹಾಗೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹ ಬೇಕಾಗಿಲ್ಲ.  ಹೀಗೆ ಹಲವು ಮಾರ್ಗಗಳಿವೆ.

ನಿಮಗೆ ಭವಿಷ್ಯ ಕಷ್ಟವಾಗುತ್ತದೆ ಎಂದು ಅನ್ನಿಸುತ್ತಿದ್ದರೇ, ನೀವು “ಎವರಿಥಿಂಗ್ ವಿಲ್ ಬಿ ಫೈನ್”  ಅಥವಾ ‘ಎಲ್ಲವೂ ಚೆನ್ನಾಗಿರುತ್ತದೆ’ ಎಂಬ ವಾಕ್ಯವನ್ನು 21 ಬಾರಿ ಹೇಳುವ ಅಭ್ಯಾಸ ಮಾಡಿಕೊಳ್ಳಬುದು. ಕೆಟ್ಟ ಆಲೋಚನೆಗಳು ನಿಮ್ಮ ತಲೆಗೆ ಹೊಕ್ಕುತ್ತಿದ್ದರೆ, ‘ಐ ಡೋಂಟ್ ಹ್ಯಾವ್ ಎನಿ ಬ್ಯಾಡ್ ಥಾಟ್ಸ್’ ಅಥವಾ ‘ನನ್ನಲ್ಲಿ ಯಾವ ಕೆಟ್ಟ ಆಲೋಚನೆಗಳು ಇಲ್ಲ’ ಎಂದು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬಹದು. ಹೀಗೆ ಮಾಡುವುದರಿಂದ ನಿಮಗೆ ಕಾಡುತ್ತಿರುವ ವಿಚಾರಗಳಿಂದ ನೀವು ಹೊರ ಬರಲು ಸಾಧ್ಯ ಎನ್ನುತ್ತದೆ ಮನಃಶಾಸ್ತ್ರ.

ಇವೆಲ್ಲದಕ್ಕಿಂತಲೂ ಹೆಚ್ಚಾಗಿ ನಮ್ಮ ತುಟಿಯ ಮೇಲೆ ನಗು ಇರಲೇ ಬೇಕು. ನಗುವುದಕ್ಕೆ ಇಲ್ಲಿ ಯಾವ ಶುಲ್ಕವೂ ಇಲ್ಲ. ಇಂದಿನ ‘ಬ್ಯುಸಿ’ ಅಥವಾ ಒತ್ತಡದ ಬದುಕಿನಲ್ಲಿ ತುಟಿ ತನಗೆ ನಗಲು ಬರುತ್ತದೆ ಎಂಬುದನ್ನೇ ಮರೆತುಬಿಟ್ಟಂತಾಗಿದೆ. ಅದಕ್ಕೆ ನಾವೇ ಅದನ್ನು ನೆನಪು ಮಾಡಿಕೊಡಬೇಕು. ಸಾಧ್ಯವಾದಾಗಲೆಲ್ಲ ಕನ್ನಡಿ ಮುಂದೆ ನಿಂತು ಚೆನ್ನಾಗಿ ಸ್ಮೈಲ್ ಮಾಡಿ.  ಪರಿಚಿತ ಮುಖಗಳನ್ನು ಕಂಡಾಗಲೆಲ್ಲಾ ಸ್ಮೈಲ್ ಮಾಡಿ. ಇದು ಖಂಡಿತಾ ನಿಮ್ಮ ಮನಸ್ಸನ್ನು ಚೆನ್ನಾಗಾಗಿಸಿ, ಒತ್ತಡ ಕಡಿಮೆ ಮಾಡುತ್ತದೆ ಎನ್ನುವುಕ್ಕೆ ಅನುಮಾನ ಪಡಬೇಕಾಗಿಲ್ಲ.

ನಕಾರಾತ್ಮಕ ಯೋಚನೆಗಳು ಬಂದಾಗೆಲ್ಲ ಅದಕ್ಕೆ ವಿರುದ್ಧವಾಗಿ ಪ್ರಯತ್ನಪೂರ್ವಕವಾಗಿ ಯೋಚಿಸಿ. ನಿಮಗೆ ನೀವೇ ಸವಾಲು ಹಾಕಿಕೊಳ್ಳಿ. ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬ ನಂಬಿಕೆ ಇರಲಿ. ಬದುಕು ನಿಮ್ಮನ್ನು ಆಧರಿಸಿದೆ ಎಂದು ತಿಳಿದುಕೊಳ್ಳಿ. ನಿಮ್ಮ ಒಂದು ಒಳ್ಳೆಯ ಧನಾತ್ಮಕ ನಿರ್ಧಾರ ‘ನೈತ್ಯಾತ್ಮಕ’ ಎನ್ನುವ ಪದವನ್ನೇ ಸುಟ್ಟು ಕರಕಲಾಗಿಸುತ್ತದೆ. ನೆನಪಿರಲಿ ನಗು ಜೊತೆಗಿರಲಿ.

-ಶ್ರೀರಾಜ್ ವಕ್ವಾಡಿ

Advertisement

Udayavani is now on Telegram. Click here to join our channel and stay updated with the latest news.

Next