ಉಡುಪಿ: ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಕ್ರಾಂತಿಯ ಹರಿಕಾರನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂಥ ಮಾಧ್ಯಮಗಳಿಂದ ಸಂವಿಧಾನದಲ್ಲಿ ನೀಡಲ್ಪಟ್ಟ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್ಯು)ದ ಕುಲಪತಿ ಡಾ| ಈಶ್ವರ ಭಟ್ ಅಭಿಪ್ರಾಯಪಟ್ಟರು.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ, ‘ಸಾಮಾಜಿಕ ಮಾಧ್ಯಮಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯದ ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳಿಂದ ಅಭಿಪ್ರಾಯಗಳು ಅತ್ಯಂತ ಕ್ಷಿಪ್ರವಾಗಿ ಜನರನ್ನು ತಲುಪುತ್ತವೆ. ಅದಕ್ಕೆ ಪ್ರತಿಕ್ರಿಯೆ ಕೂಡ ಅಷ್ಟೇ ಶೀಘ್ರವಾಗಿ ದೊರೆಯುತ್ತದೆ. ಆದರೆ ಸುಳ್ಳು ವದಂತಿಗಳಿಂದ ಅನಾಹುತಗಳೂ ಆಗುತ್ತಿವೆ. ಈ ಸ್ವಾತಂತ್ರ್ಯ ದುರುಪಯೋಗವಾಗದಂತೆ ತಡೆಯುವ ಜವಾಬ್ದಾರಿ ಶಾಸಕಾಂಗದ ಮೇಲಿದೆ. ಸತ್ಯ ಶೋಧನೆ ಕೂಡ ಮಾಧ್ಯಮದ ಕೆಲಸವಾಗಬೇಕು ಎಂದರು.
ಕೆಎಸ್‌ಎಲ್ಯು ಕುಲಸಚಿವ ಡಾ| ಜಿ.ಬಿ. ಪಾಟೀಲ್ ಮಾತನಾಡಿ, ತಂತ್ರಜ್ಞಾನದ ಹದ್ದಿನ ವೇಗದಲ್ಲಿ ಸಾಗುತ್ತಿದೆ. ಆದರೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಆಮೆಗತಿಯಲ್ಲಿವೆ. ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ಪ. ಬಂಗಾಲದ ಎನ್‌ಯುಜೆಎಸ್ ಪ್ರಾಧ್ಯಾಪಕ ಡಾ| ಸಂದೀಪ ಭಟ್ ಬಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜು ಪ್ರಾಂಶುಪಾಲ ಡಾ| ಪ್ರಕಾಶ್ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಡಾ| ನಿರ್ಮಲಾ ಕುಮಾರಿ ಸ್ವಾಗತಿಸಿ, ಉಪನ್ಯಾಸಕಿ ಸುರೇಖಾ ವಂದಿಸಿದರು. ವಿದ್ಯಾರ್ಥಿನಿ ಜುವಾನ್ ವೆನಿಸಾ ಡಿ’ಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರೊ| ಸಂದೀಪ್ ಭಟ್, ಬೆಂಗಳೂರು ಕೆಎಲ್ಇ ಸೊಸೈಟಿ ಕಾನೂನು ಕಾಲೇಜಿನ ಡಾ| ಗೌಡಪ್ಪವನರ್ ಮತ್ತು ಬೆಳಗಾವಿ ಕಾನೂನು ಕಾಲೇಜಿನ ಪ್ರೊ| ಜೆ.ಎಂ. ವಾಗ್ ಅವರು ಪ್ರಬಂಧ ಮಂಡಿಸಿದರು.