ತಿ.ನರಸೀಪುರ: ಚುನಾವಣಾ ವೇಳೆ ನೀಡಿರುವ ಆಶ್ವಾಸನೆಗಳನ್ನು ತಪ್ಪದೇ ರೈತರ ಸಾಲ ಮನ್ನಾ ಮಾಡಲು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬದ್ಧರಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ತಾಲೂಕಿನ ಶಂಭುದೇವನಪುರ ಗ್ರಾಮದಲ್ಲಿ ರೈತ ಸಂಘಟನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ಜೆಡಿಎಸ್ ರೈತರ ಮತ ಸೆಳೆಯಲು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದವು. ಈಗ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ರೈತರು ಸಾಲ ಮನ್ನಾ ಮಾಡುವ ಬಗ್ಗೆ ಅಪಾರ ನಿರೀಕ್ಷೆಯಲ್ಲಿದ್ದಾರೆ.
ಮಾತಿಗೆ ತಪ್ಪದೇ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಬದ್ಧರಾಗಬೇಕು ಎಂದು ಹೇಳಿದರು. ರಾಜ್ಯ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ 2 ಸಾವಿರ ಕೋಟಿ ಹಣ ಬಾಕಿ ಪಾವತಿಯಾಗಬೇಕಿದ್ದು, ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಕಾರ್ಖಾನೆ ಮಾಲಿಕರಿಗೆ ಸೂಚನೆ ನೀಡಿ ರೈತರ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್ ಮಾತನಾಡಿ, ರೈತರು ಒಗ್ಗಟ್ಟಿನಿಂದ ಸಂಘಟಿತರಾದರೇ ಯಾವುದೇ ಅನ್ಯಾಯವನ್ನು ಪ್ರತಿಭಟಿಸಿ ನ್ಯಾಯ ಪಡೆಯಲು ಸಾಧ್ಯ. ಜತೆಗೆ ಪ್ರತಿ ಗ್ರಾಮದಲ್ಲೂ ಸಂಘಟನೆಯ ಘಟಕಗಳು ಪ್ರಾರಂಭವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸಲಹೆ ಮಾಡಿದರು.
ಇದೇ ವೇಳೆ ರೈತರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಹಸಿರು ಶಾಲು ನೀಡಲಾಯಿತು. ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ರಾಜ್ಯ ಕಾರ್ಯದರಿ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಪರಶಿವಮೂರ್ತಿ, ಹಾಡ್ಯ ರವಿ, ನಂಜುಂಡಸ್ವಾಮಿ, ಗ್ರಾಮ ಘಟಕದ ಅಧ್ಯಕ್ಷ ರವೀಶ, ಶಿವರುದ್ರಸ್ವಾಮಿ, ಮಹಾದೇವಪ್ಪ ಹಾಜರಿದ್ದರು.
ಸಮ್ಮಿಶ್ರ ಸರ್ಕಾರ ರೈತರ ಜ್ವಲಂತ ಸಮಸ್ಯೆಗಳತ್ತ ಬೆಳಕು ಚೆಲ್ಲಬೇಕು. ಮೊದಲಿಗೆ ರೈತರ ಆತ್ಮಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು. ರೈತಪರ ಯೋಜನೆಗಳನ್ನು ಜಾರಿಗೆ ತಂದು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಬೇಕು.
-ಕುರುಬೂರು ಶಾಂತಕುಮಾರ್, ರೈತ ನಾಯಕ