Advertisement

ವಸ್ತುಗಳ ಖರೀದಿಸುವಾಗ ಜಾಗೃತಿ ವಹಿಸಿ

03:21 PM Mar 16, 2022 | Team Udayavani |

ಗದಗ: ಗ್ರಾಹಕರು ಪ್ರತಿಯೊಂದು ವಸ್ತುವನ್ನು ಖರೀದಿಸುವಾಗ ಜಾಗೃತಿ ವಹಿಸಬೇಕು. ವಸ್ತುವಿನ ಗುಣಮಟ್ಟ, ಬಳಸುವ ವಿಧಾನಗಳನ್ನು ತಿಳಿದುಕೊಳ್ಳುವುದು ಗ್ರಾಹಕರ ಹಕ್ಕು ಎಂದು ಜಿಲ್ಲಾ ಕಾನೂನು ಸಲಹೆಗಾರ ನಿವೃತ್ತ ನ್ಯಾಯಾಧೀಶ ಎಸ್‌.ಜಿ.ಪಲ್ಲೇದ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದಿಂದ ಇಲ್ಲಿನ ಸಿದ್ಧಲಿಂಗನಗರ ಹುಡ್ಕೋ ಕಾಲೋನಿಯ ಡಾ|ಡಿ.ಸಿ.ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ “ನ್ಯಾಯೋಚಿತ ಡಿಜಿಟಲ್‌ ಹಣಕಾಸು’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಮಗೆ ಇರುವ ಹಕ್ಕು ಮತ್ತು ಕರ್ತವ್ಯಗಳ ಕುರಿತು ತಿಳಿವಳಿಕೆ ಹೊಂದಿರಬೇಕಾಗುತ್ತದೆ. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೂಲಕ ಗ್ರಾಹಕರು ತಮಗಾದ ಅನ್ಯಾಯ, ಶೋಷಣೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ರೈತರಿಗೆ ಬೆಳೆ ವಿಮೆಗೆ ಸಂಬಂಧಿ ಸಿದ ಪ್ರಕರಣಗಳಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಪರಿಹಾರ ಹಣ ವಿತರಿಸಲಾಗಿದೆ. ಈ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಬೇಕೆಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಸದಸ್ಯ ಎಫ್‌.ಪಿ.ಲಕ್ಷ್ಮೇಶ್ವರಮಠ ಮಾತನಾಡಿ, ಗ್ರಾಹಕರು ಅನೇಕ ಸಲ ತಾವು ಮೋಸ ಹೋದರೂ ಮೌನವಾಗಿರುವುದರಿಂದ ಪ್ರಕರಣ ದಾಖಲಿಸದೇ, ಶೋಷಣೆಗೆ ಒಳಗಾಗುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಹಕರು ದೇಶದ ಸಂಪತ್ತು. ಯಾವುದೇ ವಸ್ತುವನ್ನು ಖರೀದಿಸುವಾಗ ಅದರ ಗುಣಮಟ್ಟ, ಪ್ರಮಾಣ, ದರಗಳನ್ನು ಪರಿಶೀಲಿಸಿ ಖರೀದಿಸಬೇಕು. ವಸ್ತು ಖರೀದಿ ಮತ್ತು ಸೇವೆ ಪಡೆಯುವಾಗ ಏನಾದರೂ ನ್ಯೂನತೆ ಇದ್ದಲ್ಲಿ ಸೂಕ್ತ ದಾಖಲೆ ಒದಗಿಸಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

Advertisement

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ ಮಾತನಾಡಿ, ಮಗು ತಾಯಿಯ ಗರ್ಭದಲ್ಲಿರುವಾಗಲೇ ಗ್ರಾಹಕನಾಗುತ್ತದೆ. ಪ್ರತಿಯೊಬ್ಬರೂ ಹುಟ್ಟಿನಿಂದ ಸಾಯುವ ತನಕ ಗ್ರಾಹಕರಾಗಿರುತ್ತಾರೆ. ಗ್ರಾಹಕ ತಾವು ಖರೀದಿಸಿದ ವಸ್ತುವಿನ ಕುರಿತು ತಿಳಿದುಕೊಳ್ಳುವ ಹಕ್ಕು, ಅದರ ಬಗ್ಗೆ ಮಾಹಿತಿ ಕೇಳುವ ಹಕ್ಕು, ಓದುವ ಹಕ್ಕನ್ನು ಹೊಂದಿರುತ್ತಾನೆ. ವಸ್ತುಗಳನ್ನು ಉಪಯೋಗಿಸುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಸಹ ಪಾಲಿಸಬೇಕಾಗುತ್ತದೆ. ಅನಶ್ಯಕವಾಗಿ ಪರಿಸರಕ್ಕೆ ವ್ಯತಿರಿಕ್ತವಾದ ವಸ್ತುಗಳನ್ನು ತೆಗೆದುಕೊಳ್ಳಬಾರದು. ಅನಾರೋಗ್ಯಕ್ಕೆ ಕಾರಣವಾಗುವ ಆಹಾರ ಸೇವಿಸಬಾರದೆಂದು ತಿಳಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಿರಿಜಾ ದೊಡ್ಡಮನಿ ಅವರು ಪೌಷ್ಟಿಕ ಆಹಾರದ ಮಹತ್ವ, ಎಂ.ಎಸ್‌. ಬೂಸ್ತ್ ಅವರು ಎಲ್‌ಪಿಜಿ ಸುರಕ್ಷತೆ, ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಕುರಿತು ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಡಿ.ಎಸ್‌. ಅಂಗಡಿ ಪ್ರಾತ್ಯಕ್ಷಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪುರ ಮಾತನಾಡಿ, ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ ಅಥವಾ ಸೇವೆ ಪಡೆಯುವಾಗ ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಬಾರದು. ಸೇವೆ ಪಡೆದಿರುವ ಅಥವಾ ವಸ್ತುವನ್ನು ಖರೀದಿಸಿದಕ್ಕೆ ತಪ್ಪದೇ ರಶೀದಿ ಪಡೆಯಬೇಕು ಎಂದರು. ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗರೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ರಾಜು ಮೇತ್ರಿ, ಯಶೋಧಾ ಪಾಟೀಲ, ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಎಸ್‌.ಪಟ್ಟಣ ಶೆಟ್ಟಿ, ಯಳಂದೂರು ಬಸವಲಿಂಗ ಯೋಗ ಪಾಠಶಾಲೆಯ ಪ್ರಾಚಾರ್ಯರಾದ ಕೆ.ಎಸ್‌. ಪಲ್ಲೇದ, ಆಹಾರ ಇಲಾಖೆ ಶಿರಸ್ತೇದಾರ್‌ ಶಾಂತಾ ಚವಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಂಜುಳಾ ಆಕಳದ ಸ್ವಾಗತಿಸಿ, ಶಿವಾನಂದ ಗಿಡ್ನಂದಿ ನಿರೂಪಿಸಿ, ಗಿರಿಜಾ ದೊಡ್ಡಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next