ಅರಸೀಕೆರೆ: ಹಾಸನ ಜಿಲ್ಲೆ ಕೋವಿಡ್ 19 ಸೋಂಕು ಇಲ್ಲದೆ ಗ್ರೀನ್ ಝೋನ್‌ನಲ್ಲಿರುವುದಕ್ಕೆ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹಾಗೂ ಪೌರ ಕಾರ್ಮಿಕರ ಪರಿಶ್ರಮ ಕಾರಣವಾಗಿದ್ದು, ಮುಂದೆ ಕೂಡ ಎಲ್ಲರೂ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಸೋಂಕು ಬಾರದಂತೆ ಎಚ್ಚರಿಕೆ ವಹಿಸಬೇಕೆಂದು ಜಿಪಂ ಅಧ್ಯಕ್ಷೆ ಶ್ವೇತಾ ತಿಳಿಸಿದರು.
ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ 37 ಮಂದಿ ವಿದೇಶಿಯರು 295 ಮಂದಿ ಬೇರೆ ರಾಜ್ಯದವರು, ಬೆಂಗಳೂರು ನಗರದಿಂದ ಬಂದ 14 ಸಾವಿರಕ್ಕೂ ಹೆಚ್ಚಿನ ಮಂದಿಯನ್ನು ಗುರುತಿಸಿ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. ಯಾವುದೇ ಪ್ರಕರಣ ಕಂಡು ಬಂದಿಲ್ಲ ಎನ್ನುವುದು ಸಂತಸದ ಸಂಗತಿ ಎಂದರು.
ಇತ್ತೀಚಿನಲ್ಲಿ ರಾತ್ರಿ ವೇಳೆಯಲ್ಲಿ ಅನೇಕರು ಬೇರೆ ಕಡೆಗಳಿಂದ ತಾಲೂಕಿಗೆ ಪ್ರವೇಶ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು. ಅಂತೆಯೇ ಆಸ್ಪತ್ರೆಯಲ್ಲಿ ಒಂದೇ ವೆಂಟಿಲೇಟರ್ ಇದ್ದು ಜಿಪಂ ಅನುದಾನದಲ್ಲಿ ಮತ್ತೂಂದು ವೆಂಟಿಲೇಟರ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಅಲ್ಲದೆ ಪಡಿತರ, ಹಾಲು, ಸೊಪ್ಪು, ತರಕಾರಿ ಅಗತ್ಯ ವಸ್ತುಗಳ ಖರೀದಿಗೆ ತೊಂದರೆ ಆಗದಂತೆ ಸಮಯ ನಿಗದಿ ಪಡಿಸಬೇಕೆಂದರು.
ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಲಾಕ್ ಡೌನ್ ಜನರಿಗೆ ಶಾಪವಾಗಬಾರದು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆ ಆಗದಂತೆ ಸರ್ಕಾರದೆ ಆರ್ಥಿಕ ನೆರವು ದೊರಕಿಸಬೇಕೆಂದರು. ಜಿಪಂ ಸದಸ್ಯರಾದ ಪಟೇಲ್ ಶಿವಪ್ಪ, ಲೋಲಾಕ್ಷಮ್ಮ, ಮಾಡಾಳು ಸ್ವಾಮಿ ಮಾತನಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ತಹಶೀಲ್ದಾರ್ ಸಂತೋಷ್ ಕುಮಾರ್, ತಾಪಂ ಇಒ ಎಸ್. ಪಿ.ನಟರಾಜ್, ತಾಲೂಕು ಆರೋಗ್ಯಾಧಿ ಕಾರಿ ಡಾ.ನಾಗಪ್ಪ, ನಗರಸಭೆ ಪೌರಾಯುಕ್ತ ಕಾಂತರಾಜ್ ಇದ್ದರು.