ಹುಣಸೂರು: ಕಾಡಿನಿಂದ ನಾಡಿಗೆ ಕರೆತಂದವರು ಸೌಲಭ್ಯ ನೀಡುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ, ಹೆಬ್ಬಳ್ಳ ಗಿರಿಜನ ಪುನರ್ವಸತಿ ಕೇಂದ್ರದ 340ಕ್ಕೂ ಹೆಚ್ಚು ಆದಿವಾಸಿಗಳು ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದರು. ಹುಣಸೂರು ತಾಲೂಕು ಹೆಬ್ಬಳ್ಳ ಗಿರಿಜನ ಪುನರ್ವಸತಿ ಕೇಂದ್ರದ ಚಂದ್ರ ಅಧ್ಯಕ್ಷತೆಯಲ್ಲಿ ಆದಿವಾಸಿಗಳು ಗುರುವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೋಣಿಗದ್ದೆ, ಕೊಡಗಿನ ಕೊಳಂಗೇರಿ, ಚೇಣಿಹಡ್ಲು, ಆಯರಹೊಸಳ್ಳಿ ಹಾಡಿಗಳು, ಎಚ್.ಡಿ.ಕೋಟೆ ತಾಲೂಕಿನ ಮಚ್ಚಾರು ಮತ್ತು ಕೆರೆ ಹಾಡಿಗಳಿಂದ 2013 ಹಾಗೂ 2014ರಲ್ಲಿ ಹಂತಹಂತವಾಗಿ ಈ ಕೇಂದ್ರಕ್ಕೆ ಆಗಮಿಸಿ ಒಟ್ಟು 130 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದೇವೆ. ಕುಟುಂಬಕ್ಕೊಂದು ಮನೆ ಮತ್ತು ತಲಾ ಮೂರು ಎಕರೆ ಭೂಮಿ ನೀಡಿರುವುದು ಬಿಟ್ಟರೆ, ಮತ್ಯಾವ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ದೂರಿದರು.
ಕಂದಾಯ ಗ್ರಾಮವಾಗಿಲ್ಲ: ಇಲ್ಲಿ ಪುನರ್ವಸತಿಗೊಂಡು ನಾಲ್ಕು ವರ್ಷಗಳು ಕಳೆದರೂ ಇದುವರೆಗೂ ಕೇಂದ್ರವನ್ನು ಕಂದಾಯ ಗ್ರಾಮವಾಗಿಸಿಲ್ಲ, ಇದರಿಂದಾಗಿ ಗ್ರಾಮ ಪಂಚಾಯ್ತಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ಕೃಷಿ ಚಟುವಟಿಕೆಗೆ ಬಿತ್ತನೆ ಬೀಜ ಸೇರಿದಂತೆ ಸವಲತ್ತುಗಳು ಪಡೆಯಲಾಗುತ್ತಿಲ್ಲ. ಮನವಿ ಮಾಡಿದರೂ ಅಧಿಕಾರಿಗಳಾರೂ ಕ್ಯಾರೆ ಅನ್ನುತ್ತಿಲ್ಲವೆಂದು ಆರೋಪಿಸಿದರು.
ಭೂಮಿಗೂ ಹಕ್ಕುಪತ್ರವಿಲ್ಲ: ಪುನರ್ವಸತಿ ಯೋಜನೆಯ ಪ್ಯಾಕೇಜ್‌ನಡಿ ತಲಾ 3 ಎಕರೆ ಭೂಮಿ ವಿತರಿಸಲಾಗಿದೆ. ಆದರೆ ನೀಡಿರುವ ಭೂ ಒಡೆತನ ಪತ್ರಕ್ಕೆ ಯಾವುದೇ ಸಾಲ ಸೌಲಭ್ಯ-ಸವಲತ್ತುಗಳು ಸಿಗುತ್ತಿಲ್ಲ, ಒಂದೇ ಒಂದು ಬೋರ್‌ವೆಲ್ ಕೊರೆಸಿ ಪಂಪ್‌ಸೆಟ್ ಅಳವಡಿಸಿಲ್ಲ. ಇನ್ನು ಭೂಮಿ ಅಲ್ಲಲ್ಲಿ ಒತ್ತುವರಿಯಾಗಿದೆ, ದನಕರುಗಳಿಗೆ ಗೋಮಾಳ ನಿಗದಿಪಡಿಸಿಲ್ಲ, ಅಳತೆ ಮಾಡಿಸಿ ಕಂದಕ ಹಾಗೂ ಸುತ್ತ ಬೇಲಿ ನಿರ್ಮಿಸದೆ ಅಕ್ಕಪಕ್ಕದ ಹಳ್ಳಿಗಳ ಜಾನುವಾರುಗಳಿಗೆ ಇಲ್ಲಿನ ಭೂಮಿ ಮೇವಿನ ತಾಣವಾಗಿದೆ. ಕೆರೆ-ಕಟ್ಟೆಯೂ ಇಲ್ಲಿಲ್ಲ ಎಂದು ಅಳಲು ತೋಡಿಕೊಂಡರು.
ನೀರಿನ ಸಮಸ್ಯೆ: ಈ ಪುನರ್ವಸತಿಗೊಂಡಿರುವ ಆದಿವಾಸಿಗಳ ಪ್ಯಾಕೇಜ್ ಹಣದಲ್ಲೇ ಉಡುವೆಪುರ ಬಳಿಯಿಂದ ಕೇಂದ್ರಕ್ಕೆ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದು 130 ಕುಟುಂಬಗಳಿಗೆ ಸಾಲುತ್ತಿಲ್ಲ, ಅಕ್ಕಪಕ್ಕ ಕೆರೆ-ಕಟ್ಟೆ ಇದ್ದರೂ ನೀರಿಲ್ಲ, ಜಾನುವಾರು ದಾಹ ತೀರಿಸಲು ಪರದಾಡುವಂತಾಗಿದೆ.
ಭರಪೂರ ಭರವಸೆ: ಕೇಂದ್ರದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ, ಅರಣ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ರತಿಬಾರಿ ಮನವಿ ಮಾಡಿದಾಗಲೂ ಭರಪೂರ ಭರವಸೆ ನೀಡುತ್ತಾರೆ. ಆದರೆ ಯಾವುದೇ ಕೆಲಸ ಮಾತ್ರ ಮಾಡಿಕೊಟ್ಟಿಲ್ಲ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
ಕೇಂದ್ರದಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದು, ಅಂಗನವಾಡಿ ಕಟ್ಟಡ ನಿರ್ಮಿಸಿಲ್ಲ. ಸಮುದಾಯದ ಯಾವುದೇ ಚಟುವಟಿಕೆ ನಡೆಸಲು ಭವನವಿಲ್ಲದೆ ಮರದ ಕೆಳಗೆ ಸಭೆ ನಡೆಯುತ್ತಿದೆ. ನಿರ್ಮಿಸಿರುವ ಮನೆಗಳು ಕಳಪೆಯಾಗಿ ಸೋರುತ್ತಿವೆ. ನೆಲಹಾಸು ಬಿರುಕು ಬಿಟ್ಟಿದೆ
-ಕಮಲಾ, ಆದಿವಾಸಿ