ಅರಸೀಕೆರೆ: ಇತ್ತೀಚಿಗೆ ತಾಲೂಕಿನ ಬಹುತೇಕ ಕೆರೆಕಟ್ಟೆಗಳು ನೀರಿನಿಂದ ತುಂಬಿರುವುದರಿಂದ ತಾಲೂಕಿನ ವ್ಯಾಪ್ತಿಯಲ್ಲಿ ಚಿರತೆಗಳು ಕಾಡಿನಿಂದ ಊರಿಗೆ ಬರುತ್ತಿರುವುದು ಹೆಚ್ಚಾಗಿದ್ದು, ಈ ಬಗ್ಗೆ ಎಚ್ಚರವಿರಲಿ, ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ವಲಯ ಅರಣ್ಯಾಧಿಕಾರಿ ಎಚ್.ಕೆ.ಅಮಿತ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಚಿರತೆಗಳು ಗ್ರಾಮಗಳು, ಗೋಮಾಳ, ಕಲ್ಲು ಬಂಡೆಗಳ ಅಕ್ಕಪಕ್ಕ ವಾಸ ಮಾಡಿಕೊಂಡಿರುತ್ತವೆ. ಆದ್ದರಿಂದ ಸಾರ್ವಜನಿಕರು ಚಿರತೆಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವಿವರಿಸಿದರು. ಚಿರತೆಗಳ ಹೆಜ್ಜೆ ಗುರುತು ತೋಟ, ಜಮೀನಿನಲ್ಲಿ ಕಂಡು ಬಂದರೆ ತಕ್ಷಣ ಸ್ಥಳೀಯ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 1926 ಕರೆ ಮಾಡಬೇಕು. ಒಂದು ವೇಳೆ ಚಿರತೆಗಳು ಕಂಡು ಬಂದ ಗ್ರಾಮಗಳಲ್ಲಿ ಬೆಳಗ್ಗೆ, ಸಂಜೆ ಗ್ರಾಮಸ್ಥರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಹೇಳಿದರು.
ಆಡು, ಕುರಿ, ದನಕರುಗಳನ್ನು ರಾತ್ರಿ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿ, ಮನೆ ಮುಂಭಾಗ ಕಟ್ಟುವುದು ಬೇಡ, ಒಂದು ವೇಳೆ ಚಿರತೆಗಳು ಕಂಡುಬಂದಲ್ಲಿ ಅದನ್ನು ಓಡಿಸುವ ಪ್ರಯತ್ನ ಮಾಡಬೇಡಿ, ಗಾಬರಿಗೊಳಿಸಬೇಡಿ, ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಸೂಕ್ತ ಎಂದು ತಿಳಿಸಿದರು.
ಚಿರತೆ ದಾಳಿಯಿಂದ ಜಾನುವಾರುಗಳು ಸತ್ತರೆ ಅರಣ್ಯ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡಿ ಪರಿಹಾರ ವನ್ನು ಪಡೆದುಕೊಳ್ಳ ಬಹುದಾಗಿದೆ. ಆದ ಕಾರಣ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಹಕರಿಸುವ ಮೂಲಕ ಚಿರತೆ ಹಾವಳಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈಗಾಗಲೇ ಚಿರತೆಗಳು ಕಂಡುಬಂದ ಗ್ರಾಮಗಳಲ್ಲಿ ಬೋನ್ ಗಳನ್ನು ಅಳವಡಿಸಿದ್ದು, ಸಾಧ್ಯವಾದಷ್ಟು ಬೇಗನೇ ಚಿರತೆ ಸೆರೆ ಹಿಡಿಯಲಾಗುತ್ತದೆ. ಆದಕಾರಣ ಗ್ರಾಮಸ್ಥರು ಚಿರತೆಗಳ ಬಗ್ಗೆ ಎಚ್ಚರ ವಹಿಸುವುದು ಸೂಕ್ತ. ಆದರೆ, ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಅವರು ಮನವಿ ಮಾಡಿದರು.