Advertisement

ಮನೆಯೇ ಸಂಸ್ಕಾರ ಕಲಿಸುವ ಪಾಠ ಶಾಲೆಯಾಗಲಿ

11:30 PM Jul 10, 2019 | mahesh |

ಕೊಲೆ, ಅತ್ಯಾಚಾರದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ಆರೋಪಿ, ಅಪರಾಧಿಗಳಾಗಿ ಬಂಧಿತರಾಗುವವರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿ ಜೈಲುಕಂಬಿ ಹಿಂದೆ ಸೇರುತ್ತಿರುವವರ ಪೈಕಿ ಹದಿಹರೆಯದವರೇ ಅಧಿಕ ಅನ್ನುವ ಸಂಗತಿ ಕೂಡ ಆತಂಕಕಾರಿ.

Advertisement

ದೇಶದ ಭವಿಷ್ಯ ಹೊತ್ತಿರುವ ಯುವ ಸಮುದಾಯ ತನ್ನ ದಾರಿ ಮರೆತು, ಬೇರೆಡೆಗೆ ವಾಲುತ್ತಿರುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಎಚ್ಚೆತ್ತುಕೊಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯ ಇಂದಿನದು.

ಯುವ ಸಮುದಾಯಕ್ಕೆ ದಾರಿ ತಪ್ಪಲು ಹಲವು ಕಾರಣಗಳು ಇರಬಹುದು. ಮನೆಯಲ್ಲಿ ಸಂಸ್ಕಾರದ ಶಿಕ್ಷಣದ ಕೊರತೆ, ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆ, ಸಂಬಂಧಗಳ ನಡುವೆ ಅವಿಶ್ವಾಸ, ಪ್ರೀತಿ, ನಂಬಿಕೆ ಇಲ್ಲದಿರುವುದು. ಹೀಗೆ ಒಂದು ಪರಿಪೂರ್ಣ ವ್ಯಕ್ತಿತ್ವಕ್ಕೆ ಬೇಕಾದ ಸಂಗತಿಗಳ ಕೊರತೆ ಕೂಡ ಭವಿಷ್ಯಕ್ಕೆ ಕಂಟಕವಾಗಬಲ್ಲುದು. ಅದರ ಜತೆಗೆ ಮೊಬೈಲ್, ಕಂಪ್ಯೂಟರ್‌, ಇಂಟರ್‌ನೆಟ್ ಅತಿ ಬಳಕೆ ಕೂಡ ಅಪರಾಧ ಕೃತ್ಯಗಳನ್ನು ಉತ್ತೇಜಿಸಬಹುದು.

ಮನೆಯಲ್ಲೇ ದೊರೆಯಲಿ ಸಂಸ್ಕಾರ
ಅವಿಭಕ್ತ ಕುಟುಂಬ ಹೆಚ್ಚಾಗಿದ್ದ ಸಂದರ್ಭದಲ್ಲಿ ಪ್ರತಿ ಮನೆಯು ಸಂಸ್ಕಾರದ ಶಿಕ್ಷಣ ನೀಡುವ ಪಾಠ ಶಾಲೆಗಳಾಗಿತ್ತು. ನಡೆತೆ, ಆಚಾರ, ವಿಚಾರ, ಸಮಾಜದಲ್ಲಿ ನಾವು ಇರಬೇಕಾದ ರೀತಿಗಳು ಇವುಗಳೆಲ್ಲವು ಎಳೆಯ ಪ್ರಾಯದಿಂದಲೇ ದೊರಕುತ್ತಿದ್ದವು. ಮಕ್ಕಳ ಆಗು ಹೋಗುಗಳ ಬಗ್ಗೆ ಹೆತ್ತವರಿಗೆ ಇದ್ದ ಕಾಳಜಿಯಷ್ಟೇ ಮನೆಯಲ್ಲಿನ ಇತರರಿಗೂ ಇತ್ತು. ಸಣ್ಣ ತಪ್ಪು ಮಾಡಿದಾಗ ಎಚ್ಚರಿಸುವ, ತಿದ್ದುವ ಪ್ರಯತ್ನ ನಡೆಯುತ್ತಿತ್ತು. ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿಚಾರಿಸಿ, ಸರಿಯೋ, ತಪ್ಪೋ ಎಂದು ವಿಮರ್ಶಿಸುವ ಮನೆಯೆಂಬ ಪಾಠಶಾಲೆ ಈಗ ಅಪರೂಪ.

ಈಗ ಕಾಲವನ್ನು ನಮಗೆ ಬೇಕಾದ ಹಾಗೆ ಬದಲಾಯಿಸಿದ್ದೇವೆ. ಅವಿಭಕ್ತ ಕುಟುಂಬ ಪದ್ಧತಿ ಬದಲಾಗಿ ವಿಭಕ್ತ ಕುಟುಂಬಗಳೇ ಹೆಚ್ಚಿವೆ. ಅಪ್ಪ-ಅಮ್ಮ, ಮಕ್ಕಳು ಮಾತ್ರ ಮನೆಯಲ್ಲಿರುವ ಚಿಕ್ಕ ಸಂಸಾರ, ಚೊಕ್ಕ ಸಂಸಾರ ಎಂಬ ಒಕ್ಕಣೆ. ಇಲ್ಲಿ ಪರಸ್ಪರ ಮಾತಿಲ್ಲದಷ್ಟು ಬ್ಯುಸಿ. ರಾತ್ರಿ ಮನೆಗೆ ಬಂದು, ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ಆತುರವೇ ಹೆಚ್ಚಿನ ವಿಭಕ್ತ ಕುಟುಂಬ ಇಂದಿನ ಸ್ಥಿತಿ.

Advertisement

ಹೆತ್ತವರಿಗೆ ಕಚೇರಿಗೆ ಹೊರಡುವ ಧಾವಂತ, ಮಕ್ಕಳಿಗೆ ಶಾಲೆಗೆ ತಯಾರಿ ಆಗುವ ಆತುರ. ಸಂಜೆ ಮನೆಗೆ ಬಂದು ಅಪ್ಪ, ಅಮ್ಮ ಮನೆ ವ್ಯವಹಾರದಲ್ಲಿ ಮುಳುಗಿದರೆ, ಮಕ್ಕಳು ಹೋಂ ವರ್ಕ್‌ ನೆಪದಲ್ಲಿ ತುಟಿಪಿಟಿಕ್‌ ಅನ್ನದಷ್ಟು ಮೌನವಾಗಿ ಬಿಡುತ್ತಾರೆ. ಹೀಗಾಗಿ ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಸಿಗಬೇಕಾದ ಸಂಸ್ಕಾರ ಪಾಠ ದೊರೆಯದು. ಮನೆಮಂದಿಗೆ ಜತೆಯಾಗಿ ಕುಳಿತು ಚರ್ಚಿಸಲು, ಪರಸ್ಪರ ಮಾತುಕತೆ ನಡೆಸುವ ಸಂದರ್ಭಗಳಿಗೆ ಟಿ.ವಿ.ಶೋಗಳು ಬ್ರೇಕ್‌ ಹಾಕಿ ಅದೆಷ್ಟೋ ವರ್ಷಗಳು ಕಳೆದಿವೆ. ಹೀಗಾಗಿ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂಸ್ಕಾರದ ಪಾಠಗಳು ದೊರೆಯದೆ ಯುವ ಮನಸ್ಸು ತಾವು ಹೋದದ್ದೆ ದಾರಿ ಎಂಬಂತೆ ಹೆಜ್ಜೆ ಇಡುತ್ತಿರುವುದು ಕೂಡ ಯುವ ಸಮುದಾಯ ದಾರಿತಪ್ಪಲು ಕಾರಣಗಳಲ್ಲಿ ಒಂದು.

ಸಾಮಾಜಿಕ ಜಾಲತಾಣಗಳ ಪ್ರಭಾವ
ಸಾಮಾಜಿಕ ಜಾಲತಾಣ, ಮೊಬೈಲ್, ಇಂಟರ್‌ನೆಟ್ ಅತಿ ಬಳಕೆ ಕೂಡ ಅಪರಾಧ ಕೃತ್ಯ ಹೆಚ್ಚಳಕ್ಕೆ ಮುಖ್ಯ ಕಾರಣ. ಅಕ್ಷರ ಜ್ಞಾನ ಪಡೆಯುವ ಹೊತ್ತಿನಲ್ಲಿ ದುಶ್ಚಟಗಳಿಗೆ ದಾಸರಾಗಿ ಬದುಕನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಇವೆ. ಇದಕ್ಕೆ ಅಂತರ್ಜಾಲ ಅತಿ ಬಳಕೆ ಕೂಡ ಕಾರಣ. ಶಾಲಾ ಕಾಲೇಜುಗಳಲ್ಲಿ ನೈತಿಕ ಪಾಠ ಮಾಡಿದರೂ, ಅತಿ ಬಳಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿವರಿಸಿದರೂ ಮನೆಯೊಳಗೂ ಕೂಡ ಅಷ್ಟೇ ಜಾಗೃತಿ, ಎಚ್ಚರದ ಆವಶ್ಯಕತೆ ಇದೆ. ವಯಸ್ಸಲ್ಲದ ವಯಸ್ಸಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಕೈಗಿಟ್ಟು ಮಕ್ಕಳ ಮನಸ್ಸು ಕೆಡಿಸುವ ಪ್ರವೃತ್ತಿಗೆ ಮನೆಯಿಂದಲೇ ಕಡಿವಾಣ ಬೀಳಬೇಕು..

•ಕಿರಣ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next