ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಯಾರಂಭ ಮಾಡಿದೆ. ಯಡಿಯೂರಪ್ಪ ಆವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ 25 ದಿನಗಳ ಬಳಿಕ ಸಂಪುಟ ರಚನೆಯಾಗಿ ಆರು ದಿನದ ನಂತರ ಖಾತೆ ಹಂಚಿಕೆಯಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿದೆ.
ಸಮುದಾಯವಾರು ಲೆಕ್ಕಾಚಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಈ ಕಾರ್ಯತಂತ್ರ ಅನುಸರಿಸಲಾಗಿದೆ. ಸುಗಮ ಆಡಳಿತ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ ಎಂಬ ಸಮರ್ಥನೆಯೂ ಇದೆ.
ಏನೇ ಆದರೂ ಒಂದು ರೀತಿಯಲ್ಲಿ ರಾಜ್ಯದಲ್ಲಿ ಒಂದೆರಡು ತಿಂಗಳಿನಿಂದ ಉಂಟಾಗಿದ್ದ ರಾಜಕೀಯ ಅಸ್ಥಿರತೆ ಒಂದು ಹಂತಕ್ಕೆ ಸರಿಯಾಗುತ್ತಾ ಬಂದಿದೆ. ಸಂಪುಟ ರಚನೆ, ಖಾತೆ ಹಂಚಿಕೆಯಿಂದ ಅಸಮಾಧಾನವೂ ಉಂಟಾಗಿದೆಯಾದರೂ ಅದೆಲ್ಲವೂ ಶಮನಗೊಳ್ಳುವ ವಿಶ್ವಾಸ ಬಿಜೆಪಿಗಿದೆ. ಸದ್ಯದ ಮಟ್ಟಿಗೆ ಯಾರೂ ದೊಡ್ಡ ಪ್ರಮಾಣದಲ್ಲಿ ಬಂಡಾಯ ಏಳುವ ಲಕ್ಷಣಗಳೂ ಇಲ್ಲ.
ಈಗ ರಾಜ್ಯ ಸರ್ಕಾರ ತಡ ಮಾಡದೇ ಆಡಳಿತ ಯಂತ್ರ ಚುರುಕುಗೊಳಿಸಿ ಜನರ ಸಮಸ್ಯೆಗಳತ್ತ ಗಮನಹರಿಸಬೇಕು. ಒಂದೆಡೆ ಬರ ಹಾಗೂ ಮತ್ತೂಂದೆಡೆ ಪ್ರವಾಹದಿಂದ ರಾಜ್ಯದ ಬಹುತೇಕ ಪ್ರದೇಶಗಳ ಜನತೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ನೂತನ ಸರ್ಕಾರದ ಮೇಲೆ ಹೊಣೆಗಾರಿಕೆ ಜಾಸ್ತಿಯೇ ಇದೆ.
ಬರ ಪರಿಹಾರ, ನರೇಗಾ ಬಾಬ್ತಿನ ಬಾಕಿ ಹಣವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಕೇಂದ್ರದಿಂದ ಬಂದಿಲ್ಲ. ಪ್ರವಾಹಕ್ಕೆ ಸಂಬಂಧಿಸಿದಂತೆ ಕೇಂದ್ರ ತಂಡ ಅಧ್ಯಯನ ನಡೆಸಿ ಹೋಗಿದೆ. ಕೇಂದ್ರದಲ್ಲಿ ಬಿಜೆಪಿಯದೇ ಸರ್ಕಾರ ಇದ್ದು ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿರುವುದರಿಂದ ಪ್ರವಾಹ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆಯೂ ಇದೆ. ಇದಕ್ಕೆ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ, ರಾಜ್ಯ ಸರ್ಕಾರ ಯಾವ ಮಟ್ಟಕ್ಕೆ ಪ್ರಭಾವ ಬೀರಿ ಸಹಾಯ ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.
ಪ್ರತಿಪಕ್ಷಗಳು ಸಹ ಇಂತಹ ಸಂದರ್ಭದಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚು ಆರೋಪ-ಪ್ರತ್ಯಾರೋಪ ಮಾಡದೆ ಬರ ಹಾಗೂ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ರಾಜಕೀಯ ಬಿಟ್ಟು ಪ್ರಾಮಾಣಿಕತೆ, ಬದ್ಧತೆ ಪ್ರದರ್ಶಿಸಬೇಕು. ಬರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರ ಸಮಸ್ಯೆಗಳ ವಾಸ್ತವಾಂಶ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಾರ್ಯಗಳು ಕೈಗೊಳ್ಳಲು ಒತ್ತಡ ಹೇರಬೇಕು.
ಜತೆಗೆ, ಆರ್ಥಿಕ ಹಿಂಜರಿತದ ಭೀತಿ ಆವರಿಸಿರುವುದರಿಂದ ಉದ್ಯಮ, ಕೈಗಾರಿಕೆ, ಪ್ರವಾಸೋದ್ಯಮ ವಲಯಗಳಲ್ಲಿ ಭರವಸೆ ಮೂಡಿಸುವ ಕ್ರಮಗಳು, ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಬೇಕಾಗಿದೆ. ಆ ಮೂಲಕ ಸರ್ಕಾರ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಎಲ್ಲದಕ್ಕಿಂತ ಹೆಚಾrಗಿ ರಾಜ್ಯದಲ್ಲಿ ಈಗಿನ ಸಂದರ್ಭದಲ್ಲಿ ಆರ್ಥಿಕ ಶಿಸ್ತು ಕಾಪಾಡುವುದು ಮುಖ್ಯ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆಯೂ ಇದೆ.
ಸರ್ಕಾರ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಈಗಿನ ಸಂದರ್ಭದಲ್ಲಿ ಆರ್ಥಿಕ ಶಿಸ್ತು ಕಾಪಾಡುವುದು ಮುಖ್ಯ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಿದೆ.