Advertisement

ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರ: ಇಬ್ಬರು ಬಿಡಿಎ ಸಿಬ್ಬಂದಿ ಸೇರಿ ಆರು ಮಂದಿ ಬಂಧನ

08:31 PM Jan 27, 2022 | Team Udayavani |

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನಗಳನ್ನ ಕಬಳಿಸಿ ಇ-ಹರಾಜು ಮೂಲಕ ವಂಚನೆ ಮಾಡುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ನ ಇಬ್ಬರು ಸಿಬ್ಬಂದಿ ಸೇರಿ ಆರು ಮಂದಿಯನ್ನು ಶೇಷಾದ್ರಿಪುರ ಪೊಲೀಸರು ಬಂಧಸಿದ್ದಾರೆ.

Advertisement

ಬಿಡಿಎನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರುವ ಲೋಹಿತ್‌(32), ಕಂಪ್ಯೂಟರ್‌ ವಿಭಾಗದ ಡೇಟಾ ಆಪರೇಟರ್‌ ಸುನೀಲ್‌(28) ಹಾಗೂ ಮಧ್ಯವರ್ತಿಗಳಾದ ಪವನ್‌, ವಿಕ್ರಂ ಜೈನ್‌, ಮಂಜುನಾಯಕ್‌, ರಾಮ ಚಂದ್ರ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಲು ಎಚ್‌ಬಿಆರ್‌ ಲೇಔಟ್‌, ವಿಶ್ವೇಶ್ವರಯ್ಯ ಲೇಔಟ್‌, ಕೆಂಪೇಗೌಡ ಲೇಔಟ್‌ ಸೇರಿ ನಗರದ ಪ್ರತಿಷ್ಟಿತ ಲೇಔಟ್‌ನಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಕಬಳಿಸುತ್ತಿದ್ದರು. ಬಳಿಕ ಇ-ಹರಾಜು ಮಾರಾಟ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಜತೆಗೆ ನಿವೇಶನ ಮುಂಜೂರಾಗದಿದ್ದರೂ ಭೋಗ್ಯ ಮತ್ತು ಖರೀದಿ ಕರಾರು ಪತ್ರವನ್ನು ನಕಲಿಯಾಗಿ ತಯಾರಿಸಿ, 10 ವರ್ಷಗಳ ಬಳಿಕ ನಕಲಿ ಶುದ್ಧ ಕ್ರಯ ಪತ್ರದ ಮೂಲಕ ನಿವೇಶನವನ್ನು ಕಬಳಿಸಿದ್ದರು. ಬಿಡಿಎನ ವಿಶೇಷ ಕಾರ್ಯಪಡೆ ಮತ್ತು ವಿಚಕ್ಷಣಾ ದಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಅಕ್ರಮ ಪತ್ತೆ ಹಚ್ಚಿತ್ತು. ಅಲ್ಲದೆ, ಉಪ ಕಾರ್ಯದರ್ಶಿ ಹಾಗೂ ಕಚೇರಿಯಲ್ಲಿರುವ ಕೆಲ ವಿಭಾಗದ ಕೆಳ ಹಂತದ ಅಧಿಕಾರಿಗಳು, ಮಧ್ಯವರ್ತಿಗಳು, ನಿವೇಶನ ಫ‌ಲಾನುಭವಿಗಳು ಎಂದು ಆರೋಪಿಸಿ ದೂರು ನೀಡಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಬಿಡಿಎ ವಂಚನೆ ಸಂಬಂಧ 15ಕ್ಕೂ ಅಧಿಕಪ್ರಕರಣಗಳು ದಾಖಲಾಗಿದ್ದು, ಮಧ್ಯವರ್ತಿಗಳ ಜತೆ ಅಧಿಕಾರಿಗಳು ಶಾಮೀಲಾಗಿ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಫ‌ಲಾನುಭವಿಗಳು ಎಚ್ಚರ!:

ಮಧ್ಯವರ್ತಿಗಳ ಜತೆ ಸೇರಿ ಬಿಡಿಎ ಅಧಿಕಾರಿಗಳು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಯಾರಾದರೂ ನಿವೇಶನ ಖರೀದಿಸುವಂತೆ ಸಲಹೆ ನೀಡಿ,ದಾಖಲೆಗಳನ್ನು ನೀಡಿದರೂ ಬಿಡಿಎ ಕಚೇರಿಯಲ್ಲಿ ಸಂಪೂರ್ಣವಾಗಿ ಪರಿಶೀಲಿಸಿ ಖರೀದಿಸವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳಿಂದ ವಂಚನೆಗೊಳಗಾದವರು ದೂರು ನೀಡಬಹುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next