Advertisement

ಬಿಡಿಎ ಮ್ಯೂಚುವಲ್‌ ಫ‌ಂಡ್‌ ಹಗರಣದ ಮರು ತನಿಖೆ?

12:56 AM Dec 18, 2019 | Lakshmi GovindaRaj |

ಬೆಂಗಳೂರು: ಬಿಡಿಎಯಲ್ಲಿ 1999ರಿಂದ 2014ರವರೆಗೆ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಅಕ್ರಮವಾಗಿ ಹಣ ಹೂಡಿದ ಪ್ರಕರಣದಲ್ಲಿ ಆಗಿನ ಆಯುಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಬಲವಾದ ಅನುಮಾನ ವ್ಯಕ್ತಪಡಿ ಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಮಾಹಿತಿ ನೀಡುವಂತೆ ಸೂಚಿಸಿದೆ.

Advertisement

ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಮಂಗಳವಾರ ಸಭೆ ನಡೆಸಿದ್ದು, ಎಚ್‌.ಕೆ. ಪಾಟೀಲರ ಅನುಪಸ್ಥಿತಿ ಯಲ್ಲಿ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆನಡೆಸಿ, ಬಿಡಿಎಯಿಂದ 2903 ಕೋಟಿ ರೂ ಹಣವನ್ನು 13 ವಿವಿಧ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಅನಧಿಕೃತವಾಗಿ ಹೂಡಿಕೆ ಮಾಡಿರುವ ಪ್ರಕರಣದಲ್ಲಿ ಬಿಡಿಎ ಆಯುಕ್ತರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವ ಬಗ್ಗೆ ಸಮಿತಿಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಪ್ರಕರಣದ ಮರು ತನಿಖೆ ನಡೆಸಬೇಕೆಂಬ ಅಭಿಪ್ರಾಯವೂ ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿನ್ನೆಲೆ: 1999ರಿಂದ 2014ರವರೆಗೆ ಮೂವರು ಹಣಕಾಸು ಸದಸ್ಯರಾದ ಸಂದೀಪ್‌ ದಾಸ್‌, ಎಂ.ಎನ್‌. ಶೇಷಪ್ಪ, ಬಿ. ಗಂಗಣ್ಣ ಅವರ ಅಧಿಕಾರವಧಿಯಲ್ಲಿ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಅನಧಿಕೃತ ಹಣ ಹೂಡಿಕೆ ಮಾಡಿದ್ದರಿಂದ 2015ರವರೆಗೆ ಬಿಡಿಎಗೆ 192.41 ಕೋಟಿ ರೂ. ನಷ್ಟ ಉಂಟಾಗಿತ್ತು. ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಹೂಡಿಕೆ ಮಾಡಲು ಬಿಡಿಎ ಯಾವುದೇ ಹೂಡಿಕೆ ನೀತಿಗಳನ್ನು ಅನುಮೋದಿಸಿರಲಿಲ್ಲ.

ಮೂವರು ಹಣಕಾಸು ಸದಸ್ಯರು, ಪ್ರಾಧಿಕಾರದ ಎರಡನೇ ದರ್ಜೆ ಗುಮಾಸ್ತರು, ಐಒಬಿ ಮತ್ತು ದಲ್ಲಾಳಿಗಳ ಜೊತೆ ಸೇರಿ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಬಿಡಿಎ ಹಣ ಹೂಡಿಕೆ ಮಾಡಿತ್ತು. ಬಿಡಿಎ ಆಯುಕ್ತರ ಅನುಮೋದನೆ ಇಲ್ಲದೇ ಅನೇಕ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ನಿರ್ವಹಣೆ ಮಾಡಲಾಗಿತ್ತು. ವಾರ್ಷಿಕ ಲೆಕ್ಕಪತ್ರದಲ್ಲಿಯೂ ಬ್ಯಾಂಕ್‌ ಖಾತೆಗಳನ್ನು ನಮೂದಿಸಿರಲಿಲ್ಲ.

1999 ರಿಂದ 2014ರ ವರೆಗೆ ಎಲ್ಲ ಬ್ಯಾಂಕ್‌ ವ್ಯವಹಾರಗಳನ್ನು ಎರಡನೇ ದರ್ಜೆ ಗುಮಾಸ್ತರು ನೋಡಿಕೊಂಡಿದ್ದು, ಈ ಎಲ್ಲ ವ್ಯವಹಾರಗಳಿಗೆ ಯಾವುದೇ ಅಧಿಕಾರಿಗಳು ದೃಢೀಕರಿಸಿರಲಿಲ್ಲ. ಹೀಗಾಗಿ ಆ ಅವಧಿಯಲ್ಲಿ ಬಿಡಿಎ ಆಯುಕ್ತರಾಗಿದ್ದವರನ್ನು ಈ ಪ್ರಕರಣದಿಂದ ಹೊರ ಗಿಟ್ಟಿರುವ ಬಗ್ಗೆ ಸಮಿತಿ ಸದಸ್ಯರು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್‌ ಅವರನ್ನು ಪ್ರಶ್ನಿಸಿದ್ದು, ಈ ಕುರಿತಂತೆ ಸೂಕ್ತ ಮಾಹಿತಿ ಒದಗಿಸುವಂತೆ ಸಮಿತಿ ಸೂಚಿಸಿದೆ ಎಂದು ತಿಳಿದು ಬಂದಿದೆ.

Advertisement

ನಗರಾಭಿವೃದ್ಧಿ ಕಾರ್ಯದರ್ಶಿಗೆ ಸೂಚನೆ: ಮಂಗಳವಾರ ಸಮಿತಿ ಸಭೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಮಾಡಿದ್ದ ಹೂಡಿಕೆಗಳ ಬಗ್ಗೆ ಸಮಿತಿ ಸೂಚನೆಯ ಮೇರೆಗೆ ಇಲಾಖೆಯ ಅನುಪಾಲನಾ ವರದಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಗೈರು ಹಾಜರಾಗಿದ್ದರು ಎನ್ನಲಾಗಿದ್ದು, ಡಿಸೆಂಬರ್‌ 24 ರಂದು ಸಮಿತಿ ಸಭೆ ನಡೆಯಲಿದ್ದು, ಅಂದಿನ ಸಭೆಗೆ ಆಗಿನ ಬಿಡಿಎ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಮಾಹಿತಿ ವರದಿ ಸಲ್ಲಿಸುವಂತೆ ಸಮಿತಿ ಸೂಚಿಸಿದೆ ಎಂದು ತಿಳಿದು ಬಂದಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯ ವರದಿ ಆಧರಿಸಿ ಡಿ. 24 ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ, ಅಂದಿನ ಬಿಡಿಎ ಆಯುಕ್ತರ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಬಗ್ಗೆ ಮರು ತನಿಖೆಗೆ ಆದೇಶಿಸುವ ಬಗ್ಗೆ ಸಮಿತಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಂದೀಪ್‌ ದಾಸ್‌ ವಿರುದ್ಧ ಕ್ರಮ: ಅನಧಿಕೃತವಾಗಿ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡಿಕೆ ಮಾಡಿದ್ದ ಸಂದೀಪ್‌ ದಾಸ್‌ರನ್ನು ಹುದ್ದೆಯಿಂದ ವಜಾ ಮಾಡಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಸಿಐಡಿ ಪೊಲೀಸರು ತನಿಖೆ ನಡೆಸಿ ಚಾರ್ಜ್‌ಸೀಟ್‌ ಕೂಡ ಸಲ್ಲಿಕೆಯಾಗಿದೆ. ಈ ಪ್ರಕರಣದ ಕುರಿತು ಸಿಟಿ ಸಿವಿಲ್‌ ಹಾಗೂ ಸೆಸೆನ್ಸ್‌ ನ್ಯಾಯಾಲಯದಲ್ಲಿ 2020 ರ ಜನವರಿ 4 ರಂದು ವಿಚಾರಣೆಗೆ ಬರಲಿದೆ. ಅಲ್ಲದೆ ಸಂದೀಪ್‌ ದಾಸ್‌ ಅವರಿಂದ ಹಣ ವಸೂಲಾತಿಗೆ ಹೂಡಿರುವ ಮೊಕದ್ದಮೆಯ ಪ್ರಕರಣದ ವಿಚಾರಣೆ 2020ರ ಜನವರಿ 28 ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next