Advertisement

ಕೇಂದ್ರ ಗುತ್ತಿಗೆ ಪ್ರಕಟಿಸಿದ BCCI: ಇಶಾನ್‌ ಕಿಶನ್‌, ಅಯ್ಯರ್‌ ಗೆ ಶಾಕ್:‌ ಇಲ್ಲಿದೆ ಪಟ್ಟಿ

07:11 PM Feb 28, 2024 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ರ ಋತುವಿಗಾಗಿ ‘ಕೇಂದ್ರ ಗುತ್ತಿಗೆ’ ಪಡೆದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.

Advertisement

ಟೀಮ್‌ ಇಂಡಿಯಾದ ಯುವ ಬ್ಯಾಟರ್‌ ಗಳಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಬಿಸಿಸಿಐಯ ಸೂಚನೆಯ ಮೇರೆಗೂ ದೇಶಿಯ ಕ್ರಿಕೆಟ್‌ ನಲ್ಲಿ ಭಾಗಿಯಾಗದ ಇಶಾನ್‌ ಹಾಗೂ ಶ್ರೇಯಸ್‌ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಗಿದೆ.

“ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಬಿಸಿಸಿಐ ಹೇಳಿದೆ.

ಕಳೆದ ಬಾರಿಯಂತೆ ಈ ಬಾರಿಯೂ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವಿಂದ್ರ ಜಡೇಜಾ ಅವರನ್ನು ಎ+ ಗುತ್ತಿಗೆಯ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಇನ್ನು ಕೆಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಎ ಗ್ರೇಡ್‌ ಪಟ್ಟಿಗೆ ಭಡ್ತಿ ಹೊಂದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ಗೆ ಆಯ್ಕೆಯಾಗದಿದ್ದರೂ ಹಾರ್ದಿಕ್ ಪಾಂಡ್ಯ ಗ್ರೇಡ್ ಎ ಪಟ್ಟಿಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಹಾರ್ದಿಕ್ 2023 ರಲ್ಲಿ T20I ಕ್ರಿಕೆಟ್‌ನಲ್ಲಿ 11 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು.

2023-24ರಲ್ಲಿ 8 ಟಿ20ಐಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಗ್ರೇಡ್ ಬಿಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

Advertisement

ಇಂಗ್ಲೆಂಡ್ ವಿರುದ್ಧದ ಭಾರತದ ಸರಣಿ ಗೆಲುವಿನ ಹೀರೋ ಯಶಸ್ವಿ ಜೈಸ್ವಾಲ್ ಅವರು ಬಿ ಗ್ರೇಡ್ ನಲ್ಲಿ ಸ್ಥಾನ ಪಡೆದಿದ್ದಾರೆ.

ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್‌ಗಳು ಅಥವಾ 8 ODIಗಳು ಅಥವಾ 10 T20I ಗಳನ್ನು ಆಡುವ ಮಾನದಂಡವನ್ನು ಪೂರೈಸುವ ಕ್ರಿಕೆಟಿಗರನ್ನು ಸ್ವಯಂ ಆಗಿ ಗ್ರೇಡ್ ಸಿ ಗೆ ಸೇರುತ್ತಾರೆ. ಎಲ್ಲಾ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಶಿಫಾರಸು ಮಾಡಿದೆ.

ಇಲ್ಲಿದೆ ಪಟ್ಟಿ..

ಗ್ರೇಡ್ A+ (4 ಆಟಗಾರರು):  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ A (6 ಆಟಗಾರರು): ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ B (5 ಆಟಗಾರರು):  ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್. ‌

ಗ್ರೇಡ್ C (15 ಆಟಗಾರರು): ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಒಪ್ಪಂದಗಳಿಗಾಗಿ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next