Advertisement
ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯ, ನಾಡಾ ಡಿಜಿ ನವೀನ್ ಅಗರ್ವಾಲ್, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರನ್ನೊಳಗೊಂಡ ಸಭೆಯಲ್ಲಿ ಮಾತುಕತೆ ನಡೆಸಲಾಯಿತು. ಕಡೆಗೆ ಅಧಿಕೃತವಾಗಿ ಬಿಸಿಸಿಐ ಪರ ರಾಹುಲ್ ಜೊಹ್ರಿ ಸಹಿ ಹಾಕಿದ್ದಾರೆ. ಇದರ ಪರಿಣಾಮವಾಗಿ ಇದುವರೆಗೆ ಬಿಸಿಸಿಐ ಕ್ರಿಕೆಟಿಗರ ಉದ್ದೀಪನ ಪರೀಕ್ಷೆ ನಡೆಸುತ್ತಿದ್ದ ಸ್ವೀಡನ್ ಮೂಲದ ಐಡಿಟಿಎಂ ಸಂಸ್ಥೆ ಹೊರಹೋಗಲಿದೆ.
ಇದಕ್ಕೂ ಮುಂಚೆ ಮಾರ್ಚ್‌ನಲ್ಲಿ ನಾಡಾ, ಬಿಸಿಸಿಐ ಮತ್ತು ವಾಡಾದ ನಡುವೆ ತ್ರಿಪಕ್ಷೀಯ ಒಪ್ಪಂದಕ್ಕೆ ಮಾತುಕತೆ ನಡೆದಿತ್ತು. ಆ ಸಂದರ್ಭ ದಲ್ಲಿ ಬಿಸಿಸಿಐ ಉದ್ದೀಪನ ಮಾದರಿ ಸಂಗ್ರಹವನ್ನು ತಾನೇ ಮಾಡುವುದಾಗಿ ಷರತ್ತು ಒಡ್ಡಿತ್ತು. ಆದ್ದರಿಂದ ಮಾತುಕತೆ ಮುರಿದುಬಿದ್ದಿತ್ತು.
Related Articles
Advertisement
ಮಾಹಿತಿ ಹಕ್ಕು ವ್ಯಾಪ್ತಿಗೆ?ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ವ್ಯಾಪ್ತಿಗೆ ಬಂದರೆ, ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೂ ಬರಲೇಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬಿಸಿಸಿಐ ಮಾಹಿತಿ ಹಕ್ಕು ವ್ಯಾಪ್ತಿಗೆ ಬರಲೇಬೇಕೆಂಬ ಒತ್ತಡ ತೀವ್ರವಾಗಬಹುದು. ಇದುವರೆಗೆ ಬಿಸಿಸಿಐ ಹೊರತುಪಡಿಸಿದರೆ, ಉಳಿದೆಲ್ಲ ಕ್ರೀಡಾ ಸಂಸ್ಥೆಗಳು ಮಾಹಿತಿ ಹಕ್ಕು ವ್ಯಾಪ್ತಿಯಲ್ಲಿವೆ. ವಿರೋಧಕ್ಕೆ ಕಾರಣವೇನು?
ನಾಡಾ ಉದ್ದೀಪನ ಪರೀಕ್ಷೆಗೆ ಸಂಬಂಧಿಸಿದಂತೆ ಬಿಸಿಸಿಐನ ಪ್ರಮುಖ ವಿರೋಧಕ್ಕೆ ಕಾರಣ, ಆಟಗಾರರು ಎಲ್ಲಿರುತ್ತಾರೆ ಎಂಬ ಮಾಹಿತಿ ನೀಡಬೇಕಾಗಿ ಬರುವುದು. ಈ ನಿಯಮದ ಪ್ರಕಾರ, ವರ್ಷದಲ್ಲಿ ತಾವು ಯಾವಾಗ ಪಂದ್ಯಗಳನ್ನು ಆಡುವುದಿಲ್ಲ ಎಂಬ 3 ದಿನಾಂಕಗಳನ್ನು ಆಟಗಾರರು ನೀಡಬೇಕು. ಆಗ ಅವರು ನಾಡಾ ಪರೀಕ್ಷೆಗೆ ಸಿದ್ಧರಿರಬೇಕು. ಒಂದು ವೇಳೆ ಮೂರೂ ದಿನಾಂಕಗಳಲ್ಲಿ ಪರೀಕ್ಷೆಗೆ ಲಭ್ಯವಿಲ್ಲವಾದರೆ ಅವರಿಗೆ ಒಂದು ವರ್ಷ ನಿಷೇಧ ವಿಧಿಸಲಾಗುತ್ತದೆ. ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಹೀಗೆ ನಿಷೇಧಕ್ಕೊಳಗಾದ ನಿದರ್ಶನ ಎಲ್ಲರ ಕಣ್ಣಮುಂದಿದೆ. ನಾಡಾದ ಈ ನಿಯಮ ಆಟಗಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖ ಆಟಗಾರರ ಅಭಿಪ್ರಾಯ. ಈ ಬಗ್ಗೆ ಯಾವ ನಿರ್ಣಯವಾಗಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. 3 ಅನುಮಾನಗಳೇನು?
ನಾಡಾದಿಂದ ಪರೀಕ್ಷೆಗೊಳಗಾಗುವ ಸಂಬಂಧ ಬಿಸಿಸಿಐ 3 ಪ್ರಮುಖ ತಕರಾರುಗಳನ್ನು ಎತ್ತಿತ್ತು. ಪರೀಕ್ಷಾ ಸಾಧನಗಳ ಗುಣಮಟ್ಟ. ಪರೀಕ್ಷೆ ನಡೆಸುವ ವೈದ್ಯರ ಗುಣಮಟ್ಟ, ಉದ್ದೀಪನ ಮಾದರಿ ಸಂಗ್ರಹ ಮಾಡುವ ರೀತಿಯ ಬಗ್ಗೆ ಬಿಸಿಸಿಐಗೆ ಅಸಮಾಧಾನವಿತ್ತು. ಹಲವಾರು ಬಾರಿ ಈ ಪರೀಕ್ಷೆಯಲ್ಲಿ ಎಡವಟ್ಟುಗಳು ಸಂಭವಿಸಿದ್ದು ಬಿಸಿಸಿಐ ಆತಂಕಕ್ಕೆ ಕಾರಣ. ಅಂತಹ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಲಾಗಿದೆ. ಆದರೆ ಇದಕ್ಕಾಗಿ ತಗಲುವ ಹೆಚ್ಚುವರಿ ಶುಲ್ಕವನ್ನು ಬಿಸಿಸಿಐ ತಾನೇ ಭರಿಸಬೇಕಾಗಿದೆ. ಇದು ಭಾರತದ ಎಲ್ಲ ಕ್ರೀಡಾಸಂಸ್ಥೆಗಳಿಗೆ ಸಮಾನವಾಗಿರುತ್ತದೆ.