Advertisement

ವಿದೇಶಿ ಟಿ20 ಲೀಗ್‌ಗಳಲ್ಲಿ ಭಾರತೀಯರು ಪಾಲ್ಗೊಳ್ಳುವಂತಿಲ್ಲ!

09:16 PM Aug 13, 2022 | Team Udayavani |

ಮುಂಬೈ: ದ.ಆಫ್ರಿಕಾ, ವೆಸ್ಟ್‌ ಇಂಡೀಸ್‌, ಯುಎಇ ಟಿ20 ಲೀಗ್‌ಗಳಲ್ಲಿ ಐಪಿಎಲ್‌ ಫ್ರಾಂಚೈಸಿಗಳ ಮಾಲಿಕರು ತಂಡಗಳನ್ನು ಖರೀದಿಸಿವೆ. ಇಷ್ಟರ ನಡುವೆ ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಕಠಿಣ ದಿಗ್ಬಂಧನವನ್ನು ವಿಧಿಸಿದೆ! ಬಿಸಿಸಿಐ ಗುತ್ತಿಗೆಯನ್ನು ಹೊಂದಿರುವ ಅಥವಾ ನಿವೃತ್ತಿಯಾಗಿರುವ ಅಥವಾ ಐಪಿಎಲ್‌ನಲ್ಲಿ ಆಡುತ್ತಿರುವ ಯಾವುದೇ ಭಾರತೀಯ ಕ್ರಿಕೆಟಿಗರು ಈ ಕೂಟಗಳಲ್ಲಿ ಯಾವುದೇ ರೀತಿಯ ಪಾತ್ರ ವಹಿಸುವಂತಿಲ್ಲ. ಒಂದು ವೇಳೆ ಅಲ್ಲಿ ಭಾಗವಹಿಸಬೇಕೆಂದರೆ ಪೂರ್ಣ ನಿವೃತ್ತಿಯಾಗಿರಬೇಕು ಮತ್ತು ಬಿಸಿಸಿಐನೊಂದಿಗೆ ಸಂಪೂರ್ಣ ಸಂಬಂಧವನ್ನು ಕಡಿದುಕೊಂಡಿರಬೇಕು.

Advertisement

ಹೀಗೆಂದು ಸ್ವತಃ ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ. ಇದರ ಅರ್ಥ ಇಷ್ಟೇ. ಚೆನ್ನೈ ಕಿಂಗ್ಸ್‌ ಐಪಿಎಲ್‌ ತಂಡದ ನಾಯಕ ಎಂ.ಎಸ್‌.ಧೋನಿಯನ್ನು ದ.ಆಫ್ರಿಕಾ ಲೀಗ್‌ನಲ್ಲಿ ಚೆನ್ನೈ ಕಿಂಗ್ಸ್‌ ಮೆಂಟರ್‌ ಆಗಿಯೂ ಬಳಸಿಕೊಳ್ಳುವಂತಿಲ್ಲ. ಸದ್ಯ ಜೊಹಾನ್ಸ್‌ಬರ್ಗ್‌ ಟಿ20 ತಂಡವನ್ನು ಚೆನ್ನೈ ಕಿಂಗ್ಸ್‌ ಖರೀದಿಸಿದೆ, ಅದಕ್ಕೆ ಫಾ ಡು ಪ್ಲೆಸಿಸ್‌ ನಾಯಕ ಎನ್ನುವುದನ್ನು ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕು.

2019ರಲ್ಲೊಮ್ಮೆ ವಿಂಡೀಸ್‌ನ ಸಿಪಿಎಲ್‌ ಪಂದ್ಯವೊಂದನ್ನು ಟಿಕೆಆರ್‌ ಜೆರ್ಸಿ ಧರಿಸಿ ದಿನೇಶ್‌ ಕಾರ್ತಿಕ್‌ ವೀಕ್ಷಿಸಿದ್ದರು. ಅದಕ್ಕೆ ಬಿಸಿಸಿಐ ಕಠಿಣ ಎಚ್ಚರಿಕೆ ನೀಡಿತ್ತು. ಕಡೆಗೆ ದಿನೇಶ್‌ ಕಾರ್ತಿಕ್‌ ಕ್ಷಮೆಯಾಚಿಸಿದ್ದರು!
ಎಲ್ಲಿಯವರೆಗೆ ಸಾಧ್ಯ?: ಆದರೆ ಎಲ್ಲಿಯವರೆಗೆ ಬಿಸಿಸಿಐ ತನ್ನ ಆಟಗಾರರನ್ನು ಹೀಗೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಇಲ್ಲಿನ ಪ್ರಶ್ನೆ. ಈಗಾಗಲೇ ಐಪಿಎಲ್‌ ಫ್ರಾಂಚೈಸಿಗಳು, ವಿದೇಶಿ ಲೀಗ್‌ಗಳಿಗೂ ಕಾಲಿಟ್ಟಿವೆ. ಮುಂದೆ ಇದೇ ಫ್ರಾಂಚೈಸಿಗಳು ಬೇರೆ ದೇಶಗಳ ಲೀಗ್‌ಗಳಲ್ಲೂ ಸಕ್ರಿಯವಾಗಬಹುದು. ಆಗ ಸಹಜವಾಗಿ ಫ್ರಾಂಚೈಸಿಗಳಿಂದ, ವಿದೇಶಿ ಕ್ರಿಕೆಟ್‌ ಸಂಸ್ಥೆಗಳಿಂದ ಭಾರತೀಯ ಕ್ರಿಕೆಟಿಗರನ್ನು ಬಿಟ್ಟುಕೊಡಲು ಒತ್ತಡ ಬರಬಹುದು. ಈಗಾಗಲೇ ವಿದೇಶೀ ಕ್ರಿಕೆಟಿಗರು ಐಪಿಎಲ್‌ಗ‌ಳಲ್ಲಿ ಆಡುತ್ತಿರುವುದರಿಂದ, ಅದನ್ನು ಬಳಸಿಕೊಂಡು ವಿದೇಶಿ ಕ್ರಿಕೆಟ್‌ ಸಂಸ್ಥೆಗಳು ಬಿಸಿಸಿಐ ಮೇಲೆ ಒತ್ತಡ ಹೇರಬಹುದು. ಆಗ ಸಹಜವಾಗಿ ಬಿಸಿಸಿಐ ತನ್ನ ನಿಲುವು ಬದಲಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next