Advertisement

ಬುಮ್ರಾಗೆ ಪಾಲಿ ಉಮ್ರಿಗರ್‌ ಪ್ರಶಸ್ತಿ

10:00 AM Jan 14, 2020 | sudhir |

ಮುಂಬಯಿ: 2018-19ನೇ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿಯನ್ನು ರವಿವಾರ ರಾತ್ರಿ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ನೀಡಲಾಗುವ ಪಾಲಿ ಉಮ್ರಿಗರ್‌ ಪ್ರಶಸ್ತಿಗಾಗಿ ಕಡೇ ಗಳಿಗೆಯಲ್ಲಿ ಹೆಸರಿಸಲಾಯಿತು.

Advertisement

2018-19ರ ಋತುವಿನಲ್ಲಿ ಅತ್ಯಧಿಕ ವಿಕೆಟ್‌ ಉರುಳಿಸಿದ ಸಾಧನೆಗಾಗಿ ನೀಡಲಾಗುವ ದಿಲೀಪ್‌ ಸರ್ದೇಸಾಯಿ ಪ್ರಶಸ್ತಿಗೆ ಈ ಮೊದಲೇ ಬುಮ್ರಾ ಹೆಸರನ್ನು ಸೂಚಿಸಲಾಗಿತ್ತು. ಇದಕ್ಕೆ 2 ಲಕ್ಷ ರೂ. ಬಹುಮಾನ ಪಡೆದ ಬುಮ್ರಾ, ಪಾಲಿ ಉಮ್ರಿಗರ್‌ ಪ್ರಶಸ್ತಿಗಾಗಿ 15 ಲಕ್ಷ ರೂ. ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡರು.

ಶ್ರೀಕಾಂತ್‌, ಅಂಜುಮ್‌ಗೆ ಅಗ್ರ ಗೌರವ
ಜೀವಮಾನದ ಸಾಧನೆಗಾಗಿ ನೀಡಲಾಗುವ ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿಯನ್ನು ಮಾಜಿ ಕ್ರಿಕೆಟಿಗರಾದ ಕೃಷ್ಣ ಮಾಚಾರಿ ಶ್ರೀಕಾಂತ್‌ ಮತ್ತು ಅಂಜುಮ್‌ ಚೋಪ್ರಾ ಪಡೆದರು. ಪ್ರಶಸ್ತಿಪತ್ರ, ಟ್ರೋಫಿ ಜತೆಗೆ 25 ಲಕ್ಷ ರೂ. ಚೆಕ್‌ ಕೂಡ ಲಭಿಸಿತು. ಬಿಸಿಸಿಐ ವಿಶೇಷ ಪ್ರಶಸ್ತಿ ಮಾಜಿ ಸ್ಪಿನ್ನರ್‌ ದಿಲೀಪ್‌ ದೋಶಿ ಪಾಲಾಯಿತು. ಬಹುಮಾನದ ಮೊತ್ತ 15 ಲಕ್ಷ ರೂ.

2018 -19ರ ಸಾಲಿನ ಟೆಸ್ಟ್‌ ಪಂದ್ಯಗಳಲ್ಲಿ ಅತ್ಯಧಿಕ ರನ್‌ ಬಾರಿಸಿದ ಚೇತೇಶ್ವರ್‌ ಪೂಜಾರ “ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ’ಗೆ ಭಾಜನರಾದರು (2 ಲಕ್ಷ ರೂ.).
ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರವೇಶವನ್ನು ಸ್ಮರಣೀಯ ಗೊಳಿಸಿದ ಸಾಧಕನಾಗಿ ಮೂಡಿಬಂದವರು ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ (2 ಲಕ್ಷ ರೂ.).

ವನಿತಾ ಕ್ರಿಕೆಟಿಗರ ಸಂಭ್ರಮ
ವನಿತಾ ಕ್ರಿಕೆಟಿಗರೂ ವಿವಿಧ ಪ್ರಶಸ್ತಿಗಳನ್ನು ಎತ್ತಿಹಿಡಿದು ಸಂಭ್ರಮಿಸಿದರು. ಏಕದಿನದಲ್ಲಿ ಅತ್ಯಧಿಕ ರನ್‌ ಸಾಧನೆಗಾಗಿ ಸ್ಮತಿ ಮಂಧನಾ, ವಿಕೆಟ್‌ ಸಾಧನೆಗಾಗಿ ಜೂಲನ್‌ ಗೋಸ್ವಾಮಿ ಪ್ರಶಸ್ತಿಗೆ ಪಾತ್ರರಾದರು. ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿ ಗೌರವ ಪೂನಂ ಯಾದವ್‌ ಪಾಲಾಯಿತು.

Advertisement

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಬ್ಬರದ ಪ್ರವೇಶ ಪಡೆದ ಸಾಧಕಿ ಪ್ರಶಸ್ತಿಗೆ ಪಾತ್ರರಾದವರು ಶಫಾಲಿ ವರ್ಮ. ಇವರೆಲ್ಲ ತಲಾ 2 ಲಕ್ಷ ರೂ. ಮೊತ್ತ ಗಳಿಸಿದರು.

ರಣಜಿ ಹಾಗೂ ಇತರ ದೇಶಿ ಕ್ರಿಕೆಟ್‌ ಸಾಧಕರಿಗೂ ಬಿಸಿಸಿಐ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇಶಿ ಕ್ರಿಕೆಟಿನ ಅತ್ಯುತ್ತಮ ಅಂಪಾಯರ್‌ ಗೌರವಕ್ಕೆ ಪಾತ್ರರಾದವರು ವೀರೇಂದರ್‌ ಶರ್ಮ. ರಣಜಿ ಚಾಂಪಿಯನ್‌ ವಿದರ್ಭ ದೇಶಿ ಕ್ರಿಕೆಟಿನ ಶ್ರೇಷ್ಠ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ವರ್ಷ ಕೆಲವು ಹೆಚ್ಚುವರಿ ವಿಭಾಗಗಳಿಗೂ ಪ್ರಶಸ್ತಿಗಳನ್ನು ನೀಡಲಾಯಿತು. ಹೀಗಾಗಿ ಪ್ರಶಸ್ತಿಗಳ ಸಂಖ್ಯೆ 25ಕ್ಕೆ ಏರಿತು.

ಇದೇ ವೇಳೆ ನಡೆದ 4ನೇ ಮನ್ಸೂರ್‌ ಅಲಿ ಖಾನ್‌ ಪಟೌಡಿ ಲೆಕ್ಚರ್‌ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಮಾತಾಡಿದರು.

ಹೆಚ್ಚೆಚ್ಚು ಕ್ರಿಕೆಟ್‌ ಸಾಧಕರು…
“ಹೆಚ್ಚೆಚ್ಚು ಕ್ರಿಕೆಟ್‌ ಸಾಧಕರನ್ನು ಗುರುತಿಸಿ ಗೌರವಿ ಸುವುದು ಬಿಸಿಸಿಐ ಉದ್ದೇಶ. ಎಲ್ಲ ವಯೋಮಿತಿಯ ಆಟಗಾರರನ್ನು, ಎಲ್ಲ ಮಾದರಿಯ ಕ್ರಿಕೆಟ್‌ ಸಾಧಕರನ್ನು ಪ್ರಶಸ್ತಿ ವ್ಯಾಪ್ತಿಗೆ ತರಲಾಗುತ್ತಿದೆ. ಅದರಂತೆ ಈ ವರ್ಷದಿಂದ ಪ್ರಶಸ್ತಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಎಲ್ಲರಿಗೂ ಅಭಿನಂದನೆಗಳು’ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈ ಸಂದರ್ಭದಲ್ಲಿ ಹೇಳಿದರು.

ಬಿಸಿಸಿಐ ಪ್ರಶಸ್ತಿ ಪುರಸ್ಕೃತರು: 2018-19
1. ಕರ್ನಲ್‌ ಸಿ.ಕೆ. ನಾಯ್ಡು ಪ್ರಶಸ್ತಿ, ಜೀವಮಾನದ ಸಾಧನೆ: ಕೆ. ಶ್ರೀಕಾಂತ್‌
2. ಬಿಸಿಸಿಐ ಜೀವಮಾನದ ಸಾಧನೆ: ಅಂಜುಮ್‌ ಚೋಪ್ರಾ
3. ಬಿಸಿಸಿಐ ವಿಶೇಷ ಪ್ರಶಸ್ತಿ: ದಿಲೀಪ್‌ ದೋಶಿ
4. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ರನ್‌): ಚೇತೇಶ್ವರ್‌ ಪೂಜಾರ
5. ದಿಲೀಪ್‌ ಸರ್ದೇಸಾಯಿ ಪ್ರಶಸ್ತಿ (ಅತ್ಯಧಿಕ ಟೆಸ್ಟ್‌ ವಿಕೆಟ್‌): ಜಸ್‌ಪ್ರೀತ್‌ ಬುಮ್ರಾ
6. ಏಕದಿನದ ಬ್ಯಾಟಿಂಗ್‌ ಸಾಧಕಿ: ಸ್ಮತಿ ಮಂಧನಾ
7. ಏಕದಿನದ ಬೌಲಿಂಗ್‌ ಸಾಧಕಿ: ಜೂಲನ್‌ ಗೋಸ್ವಾಮಿ
8. ಪಾಲಿ ಉಮ್ರಿಗರ್‌ ಪ್ರಶಸ್ತಿ (ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗ): ಜಸ್‌ಪ್ರೀತ್‌ ಬುಮ್ರಾ
9. ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರ್ತಿ: ಪೂನಂ ಯಾದವ್‌
10. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಮಾಯಾಂಕ್‌ ಅಗರ್ವಾಲ್‌
11. ಶ್ರೇಷ್ಠ ಅಂತಾರಾಷ್ಟ್ರೀಯ ಡೆಬ್ಯು: ಶಫಾಲಿ ವರ್ಮ
12. ಲಾಲಾ ಅಮರನಾಥ್‌ ಪ್ರಶಸ್ತಿ (ಶ್ರೇಷ್ಠ ರಣಜಿ ಆಲ್‌ರೌಂಡರ್‌): ಶಿವಂ ದುಬೆ
13. ಲಾಲಾ ಅಮರನಾಥ್‌ ಪ್ರಶಸ್ತಿ (ದೇಶಿ ಏಕದಿನದ ಶ್ರೇಷ್ಠ ಆಲ್‌ರೌಂಡರ್‌): ನಿತೀಶ್‌ ರಾಣಾ
14. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ರನ್‌): ಮಿಲಿಂದ್‌ ಕುಮಾರ್‌
15. ಮಾಧವ ರಾವ್‌ ಸಿಂಧಿಯಾ ಪ್ರಶಸ್ತಿ (ರಣಜಿಯಲ್ಲಿ ಅತ್ಯಧಿಕ ವಿಕೆಟ್‌): ಅಶುತೋಷ್‌ ಅಮಾನ್‌
16. ದೇಶಿ ಕ್ರಿಕೆಟಿನ ಶ್ರೇಷ್ಠ ಅಂಪಾಯರ್‌: ವೀರೇಂದರ್‌ ಶರ್ಮ
17. ದೇಶಿ ಕ್ರಿಕೆಟಿನ ಶ್ರೇಷ್ಠ ತಂಡ: ವಿದರ್ಭ

Advertisement

Udayavani is now on Telegram. Click here to join our channel and stay updated with the latest news.

Next