Advertisement

ಬೀಜ-ಗೊಬ್ಬರಕ್ಕೆ ಅಭಾವ ಸೃಷ್ಟಿಸಿದರೆ ತಕ್ಕ ಶಾಸ್ತಿ : ಬಿ.ಸಿ.ಪಾಟೀಲ್‌

10:17 PM May 05, 2022 | Team Udayavani |

ರಾಣಿಬೆನ್ನೂರು : ರಾಜ್ಯದ ಯಾವುದೇ ಭಾಗದಲ್ಲಿ ಬೀಜ-ಗೊಬ್ಬರ – ಔಷಧಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮತ್ತು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡುವ ಅಂಗಡಿದಾರರ ಮೇಲೆ ಮುಲಾಜಿಲ್ಲದೆ ಅಗತ್ಯ ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಉಪ ಕೃಷಿ ನಿರ್ದೇಶಕರು-2 ಕಾರ್ಯಾಲಯ ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರನ್ನು ವಂಚಿಸುವ, ಮೋಸ ಮಾಡುವ ಅಂಗಡಿದಾರರು ಎಷ್ಟೇ ಪ್ರಭಾವಿಗಳಾಗಿರಲಿ ಯಾವುದೇ ರಾಜಿ ಸಂಧಾನವಿಲ್ಲದೇ ಅವರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡುವುದಾಗಿ ಹೇಳಿದರು.
ರೈತರು ಸದಾ ಸಂಕಷ್ಟದಲ್ಲಿದ್ದು, ನೋವಿನಲ್ಲಿಯೇ ನರಳುತ್ತಿದ್ದಾರೆ. ಚಳಿ-ಮಳೆ, ಬಿಸಿಲೆನ್ನದೇ ಕಷ್ಟಪಟ್ಟು ದುಡಿದು ಅನ್ನ ನೀಡುವ ರೈತರು ತಾವು ಬೆಳೆದ ಬೆಳೆಗಳಿಗೆ ಅಗತ್ಯ ಬೆಲೆ ಲಭಿಸದೆ ಒಂದಿಲ್ಲೊಂದು ರೀತಿಯಲ್ಲಿ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಉಚಿತ ಮತ್ತು ರಿಯಾಯಿತಿ ಬೆಲೆಯಲ್ಲಿ ಬೀಜ, ಗೊಬ್ಬರ ಮತ್ತು ಔಷಧ  ಮತ್ತಿತರ ಕೃಷಿ ಉಪಕರಣಗಳನ್ನು ನೀಡುವುದರ ಮೂಲಕ ರೈತರನ್ನು ಉತ್ತೇಜಿಸಲಾಗುತ್ತದೆ ಎಂದರು.

50 ಕೆ.ಜಿ. ಡಿಎಪಿ ಗೊಬ್ಬರಕ್ಕೆ 2,500ರೂ., ಎಂಒಪಿ ಗೊಬ್ಬರಕ್ಕೆ 759 ರೂ., ಕಾಂಪ್ಲೆಕ್ಸ್‌ ಗೊಬ್ಬರಕ್ಕೆ 1,734ರೂ. ಹಾಗೂ ಯೂರಿಯಾ ಗೊಬ್ಬರಕ್ಕೆ 1,400ರೂ. ಸಬ್ಸಿಡಿಯನ್ನು ಕೇಂದ್ರ ಸರಕಾರ ರೈತರಿಗೆ ನೀಡುತ್ತಿದೆ. ರೈತ ಶಕ್ತಿಯುತವಾಗಿ ಬಾಳಬೇಕು. ಆತ ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ನೀಡಬೇಕೆಂಬ ಸರಕಾರದ ಯೋಜನೆಗೆ ಅನೇಕರಿಂದ ಬೆಂಬಲ ದೊರೆತಿದೆ ಎಂದರು.

ರೈತರು ಬೆಳೆದ ಬೆಳೆಗಳನ್ನು ಆಹಾರ ಸಂಸ್ಕರಣ ಘಟಕ ಸ್ಥಾಪಿಸಿ ಮಾರಾಟ ಮಾಡುವ ಘಟಕಗಳಿಗೆ ಹಾಗೂ ರೈತರು ಉಪ ಕಸುಬುಗಳನ್ನು ಮಾಡಲು ಶೇ.35 ರಿಯಾಯಿತಿ ನೀಡಲಾಗುತ್ತದೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದ ರೈತರಿಗೆ ರೈತ ಶಕ್ತಿ ಯೋಜನೆಯಡಿ ಡೀಸೆಲ್‌ ಸಬ್ಸಿಡಿ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, 8 ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಕೃಷಿ ಇಲಾಖೆಯನ್ನು ಬಲಪಡಿಸಲು ಹಾಗೂ ಭ್ರಷ್ಟಾಚಾರ ರಹಿತ ಇಲಾಖೆ ಮಾಡಲು ಈಗಾಗಲೇ ರಾಜ್ಯದಲ್ಲಿ 765 ಪ್ರಕರಣಗಳನ್ನು ದಾಖಲಿಸಿದ್ದು, 148 ಅಂಗಡಿಗಳ ಲೈಸೆನ್ಸ್‌ ರದ್ದುಪಡಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next