ಬೆಂಗಳೂರು: ಕರ್ತವ್ಯ ನಿರ್ವಹಣೆ ವೇಳೆ ಸಾರ್ವಜನಿಕರೊಂದಿಗೆ ಗೌರವ ಯುತವಾಗಿ ನಡೆದುಕೊಳ್ಳದಿದ್ದರೆ ಕಾನೂನು ಕ್ರಮಕ್ಕೆ ಆದೇಶಿಸಬೇಕಾ ಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ಮೌಖೀಕ ಎಚ್ಚರಿಕೆ ನೀಡಿತು.
ತಮ್ಮ ನಿವೇಶನದ ಆನ್‌ಲೈನ್ ಖಾತಾ ನೋಂದಣಿ ಮಾಡಿಕೊಡಲು ನಿರಾಕರಿಸಿದ ಬಿಬಿಎಂಪಿ ಪೂರ್ವ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕ್ರಮ ಪ್ರಶ್ನಿಸಿ ವಕೀಲರಾದ ಮೀರಾ ಮುಕುಂದ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು.
ಕೋರ್ಟ್ ಆದೇಶದಂತೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಪೂರ್ವ ವಿಭಾಗದ ಜಂಟಿ ಆಯುಕ್ತ ರನ್ನು ತರಾಟೆ ತೆಗೆದುಕೊಂಡ ನ್ಯಾಯ ಪೀಠ ಇದು ಹೀಗೆ ಮುಂದು ವರಿದರೆ ಕೆಲಸ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೂಡಲೇ ಅರ್ಜಿದಾರ ಮಹಿಳೆ ಮನವಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಮನೆಗೆ ಹೋಗಿ ಆನ್‌ಲೈನ್ ಖಾತಾ ಎಂಟ್ರಿ ಮಾಡಿಕೊಡಿ ಎಂದು ನಿರ್ದೇಶಿಸಿ ದರು. ಜಂಟಿ ಆಯುಕ್ತರನ್ನು ಮಧ್ಯಾಹ್ನದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣ ಏನು?: ಕಲ್ಲಹಳ್ಳಿಯ ಕನ್ನಿಂಗ್ಟನ್ ರಸ್ತೆಯಲ್ಲಿ ಸರ್ವೆ ನಂಬರ್ 37ರಲ್ಲಿ ಪಿತ್ರಾರ್ಜಿತವಾಗಿ ಬಂದಿರುವ ನಿವೇಶನ ಹೊಂದಿರುವ ಮೀರಾಮುಕುಂದ ಅವರ ಹೆಸರಿನಲ್ಲಿ ನಿವೇಶನ ಖಾತಾ ಆಗಿದೆ. ಪ್ರತಿವರ್ಷ ತೆರಿಗೆ ಪಾವತಿಸಿದರೂ ,ಆನ್‌ಲೈನ್‌ನಲ್ಲಿ ಖಾತಾ ನೋಂದಣಿಯಾಗಿರಲಿಲ್ಲ. ಈ ಸಂಬಂಧ ಪಾಲಿಕೆಗೆ ಮನವಿ ಸಲ್ಲಿಸಿ ದ್ದರೂ ಪ್ರಯೋಜನವಾಗದ ಹಿನ್ನೆಲೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಬಳಿಕ ಕಂದಾಯ ಅಧಿಕಾರಿ ಬಳಿ ಮನವಿ ಸಲ್ಲಿಸಲು ಹೋದಾಗ ಅಸಭ್ಯವಾಗಿ ವರ್ತಿಸಿದ್ದರು ಎಂದು ಮೀರಾ ವಾದದಲ್ಲಿ ಪೀಠಕ್ಕೆ ತಿಳಿಸಿದರು.
ಬೆಸ್ಕಾ ಎಂಜಿನಿಯರ್‌ಗೆ 50 ಸಾವಿರ ಠೇವಣಿ ಆದೇಶ: ಏಕಾಏಕಿ ಜಾಹೀರಾತು ಫಲಕಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಪ್ರಕರಣ ದಲ್ಲಿ ಅಫಿಡವಿಟ್ ಸಲ್ಲಿಸುವಂತೆ ನೀಡಿದ್ದ ಆದೇಶ ಉಲ್ಲಂ ಸಿದ್ದ ಬೆಸ್ಕಾಂ ಎಂಜಿನಿಯರ್‌ವೊಬ್ಬರಿಗೆ 50 ಸಾವಿರ ರೂ.ಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿ ಇಡುವಂತೆ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ. ಸಕಾರಣ ನೀಡದೆ ವಿದ್ಯುತ್ ಕಡಿತ ಮಾಡಿದ್ದಕ್ಕೆ 10 ಜಾಹೀರಾತು ಕಂಪನಿಗಳು ಅರ್ಜಿ ಸಲ್ಲಿಸಿದ್ದವು.