ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಂಸತ್ ಚುನಾವಣೆಗೂ ಮೊದಲು ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು ಪಾಲಿಕೆ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿ ರಾಜ್ಯ ಸರ್ಕಾರ ಗೆಜೆಟ್ ಆದೇಶ ಹೊರಡಿಸಿದೆ. ಇದರೊಂದಿಗೆ ಬಿಬಿಎಂಪಿ ಚುನಾವಣೆಗೆ ಭೂಮಿಕೆ ಸಿದ್ಧವಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ಮಾಡ ಲಾಗಿದ್ದು 243 ವಾರ್ಡ್‌ಗಳ ಸಂಖ್ಯೆಯನ್ನು ಈಗ 225ಕ್ಕೆ ಇಳಿಸಲಾಗಿದೆ. ಜತೆಗೆ ಈ ಹಿಂದೆ ವಾರ್ಡ್ ಸಂಖ್ಯೆಯನ್ನು 243 ಕ್ಕೆ ನಿಗದಿಪಡಿಸಿದ್ದ ಆದೇಶವನ್ನು ಈಗ ಸರ್ಕಾರ ಹಿಂಪಡೆ ದಿದೆ. ಇದರೊಂದಿಗೆ ಈಗ ಅಂತಿಮವಾಗಿ ಬಿಬಿಎಂಪಿಯು 225 ಸದಸ್ಯರನ್ನು ಒಳಗೊಂಡ ಕೌನ್ಸಿಲ್ ಆಗಲಿದೆ.
ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜಯ್ಯ ಸುತ್ತೂಲೆ ಹೊರಸಿದ್ದು 2020ರ 7ನೇ (3)ನೇ ಉಪ ಪ್ರಕರಣದ ಖಂಡ (ಎ) ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 225 ಎಂದು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
2021ರ ಜ.29ರಂದು ಪಾಲಿಕೆಯ ಕೌನ್ಸಿಲರ್‌ಗಳ ಸಂಖ್ಯೆಯನ್ನು 243 ಎಂದು ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಆಡಳಿತ ಅವಧಿಯಲ್ಲಿ ವಾರ್ಡ್ ಮರುವಿಂಗಡಿಸಿದಾಗ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ಶಾಸಕರು ಮತ್ತು ಪಾಲಿಕೆ ವಸದಸ್ಯರು ಕೂಡ ವಾರ್ಡ್ ಮರು ವಿಂಗಡಣೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದ್ದರು. ಜತೆಗೆ ಕೆಲವು ರಾಜಕೀಯ ಮುಖಂಡರು ವಲಯಗಳ ಸಂಖ್ಯೆಯ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದರು.