ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭವಾದರೂ ಸಮವಸ್ತ್ರ, ಶೂ, ಸಾಕ್ಸ್, ಸ್ವೆಟ್ಟರ್ ಇಲ್ಲದೆ ಬಿಬಿಎಂಪಿ ಶಾಲೆ, ಕಾಲೇಜಿಗೆ ಬರುತ್ತಿದ್ದ ಮಕ್ಕಳಿಗೆ 2023- 24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಎಲ್ಲ ಸೌಕರ್ಯ ನೀಡಲು ಬಿಬಿಎಂಪಿ ಶಿಕ್ಷಣ ವಿಭಾಗ ಹೊಸ ಯೋಜನೆ ರೂಪಿಸಿದೆ.
ಬಿಬಿಎಂಪಿ ಅಡಿಯಲ್ಲಿ 93 ನರ್ಸರಿ, 16 ಪ್ರಾಥಮಿಕ ಶಾಲೆಗಳು, 19 ಪದವಿ ಪೂರ್ವ, 4 ಪದವಿ ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳು ಸೇರಿ 165 ಶಾಲಾ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಈ ಶಾಲೆ-ಕಾಲೇಜುಗಳಲ್ಲಿ 24 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆ, ಕಾಲೇಜುಗಳ ಪೈಕಿ ಸ್ನಾತಕೋತ್ತರ ಪದವಿ ಕಾಲೇಜು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳನ್ನು ಹೊರತು ಪಡಿಸಿ ಉಳಿದ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ಸಮವಸ್ತ್ರ, ಸ್ವೆಟರ್, ಶೂ, ಸಾಕ್ಸ್‌ಗಳನ್ನು ನೀಡಲಾಗುತ್ತದೆ. ಆದರೆ, ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭವಾಗಿ 6 ತಿಂಗಳಾದರೂ ಸಮರ್ಪಕ ಸೌಕರ್ಯಗಳನ್ನು ನೀಡುತ್ತಿಲ್ಲ. ಹೀಗಾಗಿ ಮುಂದಿನ ವರ್ಷ ಶೈಕ್ಷಣಿಕ ವರ್ಷ ಆರಂಭವಾಗುವ 2 ತಿಂಗಳಲ್ಲಿ ಎಲ್ಲ ಸೌಕರ್ಯ ಒದಗಿಸುವಂತೆ ಮಾಡಲು, ಈಗಲೇ ಗುತ್ತಿಗೆ ದಾರರನ್ನು ನೇಮಿಸಲು ನಿರ್ಧರಿಸಲಾಗಿದೆ.
ಅದರ ಜತೆಗೆ ಬಿಬಿಎಂಪಿ ಶಾಲೆ-ಕಾಲೇಜಿಗೆ ಮಕ್ಕಳು ದಾಖಲಾಗುವ ಸಂದರ್ಭದಲ್ಲಿಯೇ ಅವರ ಸಮವಸ್ತ್ರ, ಸ್ವೆಟರ್ ಹಾಗೂ ಶೂಗಳ ಅಳತೆಯನ್ನು ಪಡೆಯಲಾಗುತ್ತದೆ. ಅಲ್ಲದೆ, ಈ ವಸ್ತುಗಳನ್ನು ಪೂರೈಸಲು ಗುತ್ತಿಗೆದಾರರನ್ನು ನೇಮಿಸಲು ಫೆಬ್ರವರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬಿಡ್ ಸಲ್ಲಿಸಿ ಆಯ್ಕೆಯಾಗುವ ಗುತ್ತಿಗೆದಾರರು ಮುಂದಿನ ಶೈಕ್ಷಣಿಕ ವರ್ಷ ಆರಂಭದ ನಂತರದ ಒಂದು ತಿಂಗಳಲ್ಲಿ ಬಿಬಿಎಂಪಿ ಶಾಲೆ-ಕಾಲೇಜುಗಳಿಗೆ ದಾಖಲಾದ ಮಕ್ಕಳ ಮಾಹಿತಿ ಪಡೆದು, ಮುಂದಿನ ಒಂದು ತಿಂಗಳಲ್ಲಿ ಸಮವಸ್ತ್ರ, ಸ್ವೆಟರ್, ಶೂ, ಸಾಕ್ಸ್ ಗಳನ್ನು ವಿತರಿಸುವಂತೆ ಸೂಚಿಸಲಾಗುತ್ತದೆ.
ಬಿಬಿಎಂಪಿ ಶಾಲೆ-ಕಾಲೇ ಜುಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾದ ಕೂಡಲೆ ಸಮವಸ್ತ್ರ, ಸ್ವೆಟರ್, ಶೂ ಮತ್ತು ಸಾಕ್ಸ್ ನೀಡಲು ಈಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗು ವುದು. ಶಾಲೆ-ಕಾಲೇಜು ಆರಂಭ ವಾದ ಎರಡು ತಿಂಗಳೊಳಗಾಗಿ ಮಕ್ಕಳಿಗೆ ನಿಗದಿತ ವಸ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
-ಡಾ. ರಾಮಪ್ರಸಾತ್ ಮನೋಹರ್ ಬಿಬಿಎಂಪಿ ವಿಶೇಷ ಆಯುಕ್ತ
-ಗಿರೀಶ್ ಗರಗ