Advertisement

ರೈಲ್ವೆ ಅಧಿಕಾರಿಗಳೊಂದಿಗೆ ಬಿಬಿಎಂಪಿ ಸಭೆ

12:37 PM Dec 04, 2017 | Team Udayavani |

ಬೆಂಗಳೂರು: ಮಲ್ಲೇಶ್ವರದ ಮಂತ್ರಿಮಾಲ್‌ ಹಿಂಭಾಗದಿಂದ ಶ್ರೀರಾಮಪುರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಎದುರಾಗಿರುವ ಭೂ ಸ್ವಾಧೀನ ವಿವಾದ ಬಗೆಹರಿಸಲು ಬುಧವಾರ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಜಾಗದ ಒಡೆತನದ ವಿಚಾರದಲ್ಲಿ ರೈಲ್ವೆ ಇಲಾಖೆ ಹಾಗೂ ಮಂತ್ರಿಮಾಲ್‌ ನಡುವೆ ವಿವಾದ ಏರ್ಪಟ್ಟು ಪ್ರಕರಣ ನ್ಯಾಯಾಲಯದಲ್ಲಿದೆ.

Advertisement

ಇದರಿಂದಾಗಿ ಅಂಡರ್‌ಪಾಸ್‌ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಸುತ್ತಿಕೊಂಡು ಶ್ರೀರಾಮಪುರಕ್ಕೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಬುಧವಾರ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಮಂತ್ರಿಮಾಲ್‌ಗೆ ಕಟ್ಟಡ ನಕ್ಷೆ ನೀಡುವ ವೇಳೆ ಅಂಡರ್‌ಪಾಸ್‌ ನಿರ್ಮಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ರೈಲ್ವೆ ಇಲಾಖೆ ಜಾಗ ತಮಗೆ ಸೇರಿದೆಯೆಂದು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು. 

ನ್ಯಾಯಾಲಯದಲ್ಲಿ ತೀರ್ಪು ರೈಲ್ವೆ ಇಲಾಖೆ ಪರವಾಗಿ ಬಂದರೆ ರೈಲ್ವೆ ಇಲಾಖೆಯೊಂದಿಗೆ ಪಾಲಿಕೆ ಒಪ್ಪಂದ ಮಾಡಿಕೊಳ್ಳಲಿದೆ. ಇನ್ನು ಮಂತ್ರಿಮಾಲ್‌ ಪರವಾಗಿ ಬಂದರೆ ಪೂರ್ವ ನಿಗದಿಯಂತೆ ಅವರು ಕಾಮಗಾರಿ ಕೈಗೊಳ್ಳಲಿದ್ದಾರೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಕೋರಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next