Advertisement

ಪಾಲಿಕೆ ಅಧಿಕಾರಕ್ಕೆ ಹಗ್ಗಜಗ್ಗಾಟ

12:37 AM Jul 25, 2019 | Lakshmi GovindaRaj |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತ ಬದಲಾಗುತ್ತಿದ್ದಂತೆ ಇತ್ತ ಬಿಬಿಎಂಪಿಯಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈತ್ರಿ ಸರ್ಕಾರ ಪತನವಾಗಿರುವುದರಿಂದ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಹಿಡಿಯಲು ನಂಬರ್‌ ಗೇಮ್‌ ಕಲೆ ಹಾಕಲಾಗುತ್ತಿದೆ.

Advertisement

ಸೆ.28ಕ್ಕೆ ಮೇಯರ್‌ ಗಂಗಾಂಬಿಕೆ ಅವರ ಅಧಿಕಾರವಧಿ ಮುಗಿಯಲಿದೆ. ಕಾಂಗ್ರೆಸ್‌ನ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು ಮತ್ತು ರೋಷನ್‌ ಬೇಗ್‌ ಹಾಗೂ ಜೆಡಿಎಸ್‌ನ ಗೋಪಾಲಯ್ಯ ರಾಜೀನಾಮೆ ನೀಡಿದ್ದು, ಇವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇವರಲ್ಲಿ ರೋಷನ್‌ಬೇಗ್‌ ಅವರನ್ನು ಕಾಂಗ್ರೆಸ್‌ ಉಚ್ಛಾಟನೆ ಮಾಡಿದೆ. ಈ ಐವರ ರಾಜೀನಾಮೆ ಅಂಗೀಕಾರವಾದರೆ ಅಥವಾ ಆನರ್ಹತೆಯಾದರೆ ಕಾಂಗ್ರೆಸ್‌-ಜೆಡಿಎಸ್‌ನ ಸಂಖ್ಯಾಬಲ ಕಡಿಮೆಯಾಗಲಿದೆ.

ಜತೆಗೆ, ಶಾಸಕರ ಬೆಂಬಲಿಗರ ಪಾಲಿಕೆ ಸದಸ್ಯರು ಮತದಾನಕ್ಕೆ ಗೈರಾದರೆ ಬಿಜೆಪಿ ಅಧಿಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಮೇಯರ್‌ ಮತ್ತು ಉಪಮೇಯರ್‌ ಮತದಾರರ ಪಟ್ಟಿಯಲ್ಲಿ 262 ಮತದಾರರಿದ್ದಾರೆ. ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಂಡರೆ ಮತದಾರರ ಸಂಖ್ಯೆ ಕಡಿಮೆಯಾಗಲಿದೆ.

ಅತೃಪ್ತ ಶಾಸಕರ ಬೆಂಬಲಿಗರು ತಮ್ಮ ನಿಲುವು ಬದಲಾಯಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅದೇ ರೀತಿ ಐವರು ಪಕ್ಷೇತರ ಸದಸ್ಯರ ನಿಲುವು ಗೌಪ್ಯವಾಗಿ ಉಳಿದಿದೆ. ಜೆಡಿಎಸ್‌ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ಈಗಾಗಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇದೇ ರೀತಿ ಉಳಿದವರನ್ನೂ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ ಎನ್ನಲಾಗಿದೆ.

ಯಾರೂ ನಮಗೆ ಹೇಳಿ ಹೋಗಿಲ್ಲ: ರಾಜೀನಾಮೆ ನೀಡಿರುವ ಶಾಸಕರು ವಾಪಸ್ಸು ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಅವರು ಬರಲಿಲ್ಲ. ಮುನಿರತ್ನ ಅವರು ರಾಜೀನಾಮೆ ನೀಡುವ ಮುನ್ನ ನಮ್ಮೊಂದಿಗೆ ಚರ್ಚಿಸಿಲ್ಲ. ಅವರನ್ನು ಸಂರ್ಪಕಿಸಲು ಪ್ರಯತ್ನಿಸಿದ್ದೆವು ಅದೂ ಫ‌ಲ ನೀಡಲಿಲ್ಲ. ಹೀಗಾಗಿ, ನಾವು ಕಾಂಗ್ರೆಸ್‌ನಲ್ಲೇ ಮುಂದುವರಿಯಲಿದ್ದೇವೆ. ಜೆ.ಎನ್‌. ಶ್ರೀನಿವಾಸ ಮೂರ್ತಿ, ಜೆ.ಕೆ. ವೆಂಕಟೇಶ್‌, ಜೆ. ಮೋಹನ್‌ ಕುಮಾರ್‌ ಎಲ್ಲರೂ ಸೇರಿ ಸಭೆ ನಡೆಸಿದ್ದು, ಇಲ್ಲೇ ಇರುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಕಾಂಗ್ರೆಸ್‌ ಪಕ್ಷದ ಸದಸ್ಯ ವೇಲು ನಾಯಕರ್‌ ತಿಳಿಸಿದ್ದಾರೆ.

Advertisement

ಬಿಜೆಪಿಗೆ ಅತೃಪ್ತರು ಬಿಸಿ ತುಪ್ಪ: ಬೆಂಗಳೂರಿನ ಅತೃಪ್ತ ಶಾಸಕರನ್ನು ಸೇರಿಸಿಕೊಳ್ಳುವುದು ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ನಾಯಕರ ಬಗ್ಗೆ ಈ ಹಿಂದೆ ಬಿಜೆಪಿ ನಾಯಕರೇ ಪ್ರತಿಭಟನೆ ಮಾಡಿದ್ದರು. ಅವರೂ ಇವರ ಬಗ್ಗೆ ಅಸಮಾಧಾನ ತೊಡಿಕೊಂಡಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ, ಬಿಜೆಪಿ ನಾಯಕರು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಒಂದಾಗಿ ಮೈತ್ರಿ ಮಾಡಿಕೊಂಡ ಬಗ್ಗೆ ಉದಾಹರಣೆ ನೀಡುತ್ತಿರುವುದನ್ನು ಗಮನಿಸಿದರೆ ಅತೃಪ್ತರನ್ನು ಬರಮಾಡಿಕೊಳ್ಳುವುದಕ್ಕೆ ಪಾಲಿಕೆಯ ಬಿಜೆಪಿ ನಾಯಕರು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎನ್ನುವಂತಿದೆ.

ಬಿಜೆಪಿಯ ನಾಯಕರು ಬೆಂಗಳೂರಿನ ಅತೃಪ್ತ ಶಾಸಕರನ್ನು ಒಪ್ಪಿಕೊಂಡರೂ ಪ್ರಾರಂಭದಲ್ಲಿ ಇದನ್ನು ಅರಗಿಸಿಕೊಳ್ಳುವುದು ಇಬ್ಬರಿಗೂ ಕಷ್ಟವಾಗಲಿದೆ. ಪಾಲಿಕೆಯಲ್ಲಿ ನಾಲ್ಕು ವರ್ಷಗಳ ಕಾಲ ಮೈತ್ರಿ ಪಕ್ಷಗಳು ಆಡಳಿತ ನಡೆಸಿದೆ. ಈ ನಾಲ್ಕು ವರ್ಷ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷದ ಲೋಪಗಳನ್ನು ಸಮರ್ಥವಾಗಿ ಪ್ರಶ್ನಿಸಿದ ಹೆಚ್ಚುಗಾರಿಕೆ ಪದ್ಮನಾಭ ರೆಡ್ಡಿಯವರಿಗಿದೆ.

ಈಗ ಬಿಜೆಪಿಯಿಂದ ಮೇಯರ್‌ ರೇಸ್‌ನಲ್ಲೂ ಅವರ ಹೆಸರೇ ಅಗ್ರಪಟ್ಟಿಯಲ್ಲಿದೆ. ಆದರೆ, ಬಿಜೆಪಿಯಿಂದ ಯಾರೇ ಮುಂದಿನ ಮೇಯರ್‌ ಆದರೂ ಪಾಲಿಕೆ ಆಡಳಿತ ಕೆಲವು ತಿಂಗಳ ಮಟ್ಟಿಗೆ ಪರಿಣಾಮ ಬೀರಲಿದೆ! ಪಾಲಿಕೆಯ 12 ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ 2018ರ ಡಿ. 5ರಂದು ನಡೆದಿದೆ. ಸ್ಥಾಯಿ ಸಮಿತಿಗಳ ಅಧಿಕಾರವಧಿ ಒಂದು ವರ್ಷವಾಗಿದ್ದು, ಬುಹುತೇಕ ಸ್ಥಾಯಿ ಸಮಿತಿಯ ಅಧ್ಯಕ್ಷರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಾಗಿದ್ದಾರೆ. ಈಗ ಬಿಜೆಪಿಯಿಂದ ಮೇಯರ್‌ ಆಯ್ಕೆಯಾದರೆ ಎರಡರಿಂದ ಮೂರು ತಿಂಗಳು ಆಡಳಿತದಲ್ಲಿ ಹಗ್ಗಜಗ್ಗಾಟ ಮುಂದುವರಿಯುವ ಸಾಧ್ಯತೆ ಇದೆ.

ಮೇಯರ್‌ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕು ಎನ್ನುವುದರ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುತ್ತೇನೆ.
-ಹೇಮಲತಾ ಗೋಪಾಲಯ್ಯ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ

ನಾನು ಪಕ್ಷದಲ್ಲೇ ಉಳಿಯಲಿದ್ದೀನಿ. ಭಾನುವಾರ ಜೆಡಿಎಸ್‌ನ ಎಲ್ಲ ಮುಖಂಡರ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಯಾರು ಪಕ್ಷದಲ್ಲಿ ಉಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ
-ಭದ್ರೇಗೌಡ ಉಪಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next