Advertisement

BBMP: ಬಿಬಿಎಂಪಿ ಅಕ್ರಮ: ವರದಿಗೆ 45 ದಿನ ಗಡುವು

09:34 AM Dec 14, 2023 | Team Udayavani |

ಬೆಂಗಳೂರು: 2019 ರಿಂದ 2023ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಸೇರಿ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ 45 ದಿನಗಳ ಗಡುವು ವಿಧಿಸಿ ಬುಧವಾರ ಆದೇಶಿಸಿದೆ.

Advertisement

ರಾಜ್ಯ ಸರ್ಕಾರವು ನ್ಯಾ.ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆ.5ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿ ಹಲವು ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. 2019-20ರಿಂದ 2022-23ರವರೆಗೆ ಬಿಬಿಎಂಪಿ ಸೇರಿ ರಾಜ್ಯದ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ವಹಿಸಿದ ಎಲ್ಲಾ ಗುತ್ತಿಗೆ ಕಾಮಗಾರಿಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ಈ ಎಸ್‌ಐಟಿಯ ರಚನೆ ಸಿಂಧುತ್ವವನ್ನು ಈ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದೆ. ಎಸ್‌ಐಟಿ ರಚನೆ ನಂತರ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಈ ಅವಧಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ಏಕವ್ಯಕ್ತಿ ಆಯೋಗ ರಚಿಸಲಾಗಿದೆ. ಅಲ್ಲಿಯೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಎಸ್‌ಐಟಿ ಕೈಗೊಂಡ ಎಲ್ಲಾ ಶೋಧನೆಗಳನ್ನು ಏಕವ್ಯಕ್ತಿಯ ಆಯೋಗ ಪರಿಗಣಿಸಲಿದೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಪಾಲುದಾರರು ಮತ್ತು ಆಯೋಗವು ಇರಿಸುವ ಎಲ್ಲಾ ದಾಖಲೆಗಳನ್ನು ಪರಿಗಣಿಸಲು ಆಯೋಗಕ್ಕೆ 45 ದಿನಗಳ ಕಾಲಮಿತಿ ನಿಗದಿಪಡಿಸಲಾಗುತ್ತಿದೆ. ಎಲ್ಲಾ ಪಾಲುದಾರರ ವಾದವನ್ನು ಆಯೋಗವು ಆಲಿಸಿದ ನಂತರ ಕಾನೂನು ಪ್ರಕಾರ ವರದಿ ಸಿದ್ಧಪಡಿಸಬೇಕು. ಆ ವರದಿಯನ್ನು 45 ದಿನಗಳ ಪೂರ್ಣಗೊಂಡ ನಂತರ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್‌ ವಿಚಾರಣೆಯನ್ನು ಮುಂದಿನ ವರ್ಷದ ಫೆ.6ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ವಿಚಾರಣೆಗೆ ಹಾಜರಾಗಿ, ಸೂಕ್ತ ಸಮಯವಕಾಶ ಕಲ್ಪಿಸಿದರೆ ಆಯೋಗವು ವಿಚಾರಣೆ ನಡೆಸಲಿದೆ. ಗುತ್ತಿಗೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಸಮಗ್ರ ತನಿಖೆಗಾಗಿ ಎಸ್‌ ಐಟಿಯ ಶೋಧನೆಗಳನ್ನು ಸಹ ಆಯೋಗಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. ಇದಲ್ಲದೇ, ಗುತ್ತಿಗೆದಾರಿಗೆ ಹಣ ಪಾವತಿ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಡ್ವೋಕೇಟ್‌ ಜನರಲ್, ಯಾವುದೇ ಅಕ್ರಮಗಳ ಆರೋಪ ಹೊಂದಿರದ ಗುತ್ತಿಗೆದಾರರಿಗೆ ಅವರು ಕ್ಲೇಮು ಮಾಡಿದ ಹಣದ ಪೈಕಿ ಶೇ.75 ಹಿರಿತನದ ಆಧಾರದ ಮೇಲೆ ಪಾವತಿಸಲಾಗುತ್ತದೆ. ಜತೆಗೆ, ಆರೋಪ ಹೊತ್ತಿರುವ ಗುತ್ತಿಗೆದಾರಿಗೆ ಶೇ.50 ಮಾತ್ರ ಪಾವತಿಸಲಾಗುತ್ತದೆ. ಈ ಕುರಿತ ಸರ್ಕಾರದ ಆದೇಶಗಳು ಹೈಕೋರ್ಟ್‌ ಅಥವಾ ಏಕವ್ಯಕ್ತಿ ಆಯೋಗದ ಮುಂದಿರುವ ಪ್ರಕ್ರಿಯೆಗಳಿಗೆ ಬದ್ಧವಾಗಿರುತ್ತವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next