ಬೆಂಗಳೂರು: ಕೆಲ ದಿನಗಳ ಹಿಂದೆ ಬೀಗ ಮುದ್ರೆ ಹಾಕಲಾಗಿದ್ದ ಫ್ಲೆಕ್ಸ್ ಮುದ್ರಣ ಮಳಿಗೆಗಳಿಗೆ ನಿಷೇಧಿತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ಮುದ್ರಿಸದಂತೆ ಷರತ್ತು ವಿಧಿಸಿ ಮಳಿಗೆಗಳನ್ನು ಪುನಾರಂಭಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಹೈಕೋರ್ಟ್ ಸೂಚನೆ ಮೇರೆಗೆ ನಗರದಲ್ಲಿನ ಫ್ಲೆಕ್ಸ್ ಮುದ್ರಣ ಘಟಕಗಳ ಮೇಲೆ ದಾಳಿ ನಡೆಸಿದ್ದ ಪಾಲಿಕೆ ಅಧಿಕಾರಿಗಳು, ಎಲ್ಲ ಎಂಟು ವಲಯಗಳಲ್ಲಿ ಸುಮಾರು 92 ಫ್ಲೆಕ್ಸ್ ಮುದ್ರಣ ಘಟಕಗಳಿಗೆ ಬೀಗ ಹಾಕಿ, ಫ್ಲೆಕ್ಸ್ ಮುದ್ರಣ ಸಾಮಗ್ರಿಗಳನ್ನು ವಶಕ್ಕೆ ಪಡೆಕೊಂಡಿದ್ದಾರೆ. ಇದರಿಂದ ಕಂಗಾಲಾದ ಘಟಕ ಮಾಲೀಕರು ಮಳಿಗೆ ಆರಂಭಿಸಲು ಅನುಮತಿ ನೀಡುವಂತೆ ಮೇಯರ್‌ಗೆ ಮನವಿ ನೀಡಿದ್ದರು.
ಹೈಕೋರ್ಟ್ ಆದೇಶದಂತೆ ಫ್ಲೆಕ್ಸ್, ಬ್ಯಾನರ್ ಮುದ್ರಿಸದೆ ಜೆರಾಕ್ಸ್, ಪೋಟೋ ಮುದ್ರಣ, ಆಮಂತ್ರಣ ಪತ್ರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕೆಂದು ಕೋರಿದರು. ಆ ಹಿನ್ನೆಲೆಯಲ್ಲಿ ಮೇಯರ್, ಗುರುವಾರ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಂಡು ಮಳಿಗೆ ಆರಂಭಿಸಲು ಅಕವಾಶ ನೀಡುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ 30 ಮಳಿಗೆ ಮಾಲೀಕರು ಪತ್ರ ನೀಡಿ ಮಳಿಗೆಗಳನ್ನು ಆರಂಭಿಸಿದ್ದಾರೆ.
ಪಾಲಿಕೆ ಆದೇಶಕ್ಕೆ ಬದ್ಧವಾಗಿ, ಪರಿಸರ ಸ್ನೇಹಿ ಬಟ್ಟೆ ಬ್ಯಾನರ್ ಸೇರಿ ಇನ್ನಿತರ ಮುದ್ರಣ ಚಟುವಟಿಕೆ ನಡೆಸುವುದಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಳಿಗೆಗಳನ್ನು ಆರಂಭಿಸಲು ಅವಕಾಶ ನೀಡಿದ್ದಾರೆ.
-ನಾಗರಾಜ್, ಫ್ಲೆಕ್ಸ್ ಮುದ್ರಕರ ಸಂಘದ ಸದಸ್ಯ
ವಲಯ ಜಪ್ತಿ ಆರಂಭವಾದ ಮಳಿಗೆಗಳು
-ಪೂರ್ವ 22 9
-ಪಶ್ಚಿಮ 14 0
-ದಕ್ಷಿಣ 9 3
-ದಾಸರಹಳ್ಳಿ 5 5
-ಮಹದೇವಪುರ 15 0
-ಆರ್.ಆರ್‌ನಗರ 9 0
-ಯಲಹಂಕ 10 10
-ಬೊಮ್ಮನಹಳ್ಳಿ 8 3
-ಒಟ್ಟು 92 30