Advertisement

ಪಾಲಿಕೆ ಚುನಾವಣೆಯಲ್ಲಿ ಎಲ್ಲಾ ಕಡೆ ಜೆಡಿಎಸ್‌ ಅಭ್ಯರ್ಥಿಗಳು: ದೇವೇಗೌಡ 

08:30 PM Sep 02, 2021 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.

Advertisement

ನಗರದ ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು. ಆ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಎಲ್ಲ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಹಾಕಲಿದ್ದು, ಈ ಪೈಕಿ ಕನಿಷ್ಠ ಒಂಬತ್ತು ಜನ ಮಹಿಳೆಯರಿಗೆ ಪಕ್ಷದಿಂದ ಟಿಕೆಟ್‌ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೊಳಗೇರಿಗಳ ಅಭಿವೃದ್ಧಿಗೆ ಮೊದಲಿನಿಂದಲೂ ನಾನು ಒತ್ತುಕೊಡುತ್ತಾ ಬಂದಿದ್ದು, ಮುಖ್ಯಮಂತ್ರಿ ಆಗಿದ್ದಾಗ ಹಲವು ಬಾರಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಆದರೆ, ಇದುವರೆಗೆ ಬೇರೆ ಯಾವ ಮುಖ್ಯಮಂತ್ರಿಗಳೂ ಕೊಳಗೇರಿಗಳಿಗೆ ಭೇಟಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಎಚ್‌.ಡಿ. ದೇವೇಗೌಡ, ನಾನು ಸುಮ್ಮನೆ ಕೂರುವುದಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತೇನೆ. ಮತ್ತೆ ಕೊಳಗೇರಿಗಳಿಗೆ ಭೇಟಿ ಖುದ್ದು ಭೇಟಿ ನೀಡುತ್ತೇನೆ. ಯಾರ್ಯಾರು ಅಲ್ಲಿಗೆ ಭೇಟಿ ನೀಡಿ, ಎಷ್ಟೆಷ್ಟು ದುಡ್ಡು ಕೊಟ್ಟಿದ್ದಾರೆ ಎಂಬುದೂ ಗೊತ್ತಿದೆ ಎಂದು ಸೂಚ್ಯವಾಗಿ ಹೇಳಿದರು.


“ಸದಸ್ಯತ್ವ ಹೆಚ್ಚಿಸದಿದ್ರೆ ಬಿ-ಫಾರಂ ಇಲ್ಲ’
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ವಾರ್ಡ್‌ ಮಟ್ಟದಲ್ಲಿ ಪಕ್ಷದ ಸದಸ್ಯತ್ವ ಹೆಚ್ಚಿಸಬೇಕು. ಅಂತಹವರಿಗೆ ಮಾತ್ರ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿ-ಫಾರಂ ನೀಡಲಾಗುವುದು. ಯಾರೇ ಶಿಫಾರಸು ಮಾಡಿದರೂ ಬಿಫಾರಂ ಕೊಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಕೋವಿಡ್‌: ರಾಜ್ಯದಲ್ಲಿಂದು 1240 ಪ್ರಕರಣ ಪತ್ತೆ; 1252 ಸೋಂಕಿತರು ಗುಣಮುಖ

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ದೇವೇಗೌಡ ಅವರು ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಿರುವುದು ಕಾರಣ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮಹಿಳಾ ಮೀಸಲಾತಿ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿಲ್ಲ. ಇನ್ನು ಮೈಸೂರಿನಲ್ಲಿ ಈಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಿಜಕ್ಕೂ ದುರಂತ. ಸಮಾಜಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮುಗಿಬಿದ್ದ ಕಾರ್ಯಕರ್ತರು; ನಾಯಕರ ಅಸಮಾಧಾನ
ಪಕ್ಷದ ಪ್ರಮುಖ ನಾಯಕರ ಭಾಷಣದ ವೇಳೆ ಕಾರ್ಯಕರ್ತರು ಊಟಕ್ಕೆ ಮುಗಿಬಿದ್ದರು. ಇದರಿಂದ ನಾಯಕರು ಬೇಸರ ವ್ಯಕ್ತಪಡಿಸಿದ ಪ್ರಸಂಗ ಸಮಾವೇಶದಲ್ಲಿ ನಡೆಯಿತು.

ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಭಾಷಣಕ್ಕಿಳಿಯುತ್ತಿದ್ದಂತೆ ಮಹಿಳಾ ಕಾರ್ಯಕರ್ತರು ಗುಂಪು-ಗುಂಪಾಗಿ ಊಟಕ್ಕೆ ತೆರಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, “ಊಟಕ್ಕಾಗಿ ಜಗಳವಾಡಲು ಬಂದಿರುವವರನ್ನು ಕರೆತರಬಾರದು. 150 ಜನ ಬಂದರೂ ಸಾಕು ನಮಗೆ’ ಎಂದು ಹೇಳಿದರು.

ಸಮಾವೇಶಕ್ಕೆ ದೇವೇಗೌಡ ಅವರು ಸುಮಾರು ಎರಡು ತಾಸು ತಡವಾಗಿ ಆಗಮಿಸಿದರು. ಇನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ದಳಪತಿಗಳು ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next